ಹುಬ್ಬಳ್ಳಿ: ಯಾವುದೇ ಷರತ್ತಿಲ್ಲದೆ ಕಟ್ಟಿದ ಪಕ್ಷಕ್ಕೆ ವಾಪಸ್ ಬಂದಿದ್ದೇನೆ. ಹೈಕಮಾಂಡ್ ಸೂಚಿಸಿದರೆ ಧಾರವಾಡ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ನಾನು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿಗೆ ಮರು ಸೇರ್ಪಡೆಗೊಂಡ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರಿಗೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರ ಅಭಿಮತದ ಮೇರೆಗೆ ಪಕ್ಷಕ್ಕೆ ಬಂದಿದ್ದೇನೆ. ಸ್ಥಳೀಯರ ವೈಯಕ್ತಿಕ ಅಭಿಪ್ರಾಯಗಳಿಗೆ ಒತ್ತು ಕೊಡುವುದಿಲ್ಲ ಎಂದು ತಿಳಿಸಿದರು.
ಸ್ಥಳೀಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೂ ಪಕ್ಷಕ್ಕೆ ವಾಪಸ್ ಬರುವಂತೆ ಒತ್ತಡಗಳಿದ್ದವು. ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ನಂತರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ನಾಯಕರು ಮಾತುಕತೆ ಮಾಡಿ ಆಹ್ವಾನಿಸಿದ್ದರು. ಮೂರ್ನಾಲ್ಕು ದಶಕಗಳಿಂದ ಕಟ್ಟಿದ ನನ್ನ ಮನೆಗೆ ವಾಪಸ್ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಸೂಚಿಸುವ ಕಾರ್ಯವನ್ನು ಮಾಡುವುದಾಗಿ ಎಂದರು.
ಕಳೆದ ವಿಧನಾಸಭೆ ಚುನಾವಣೆ ಸಂದರ್ಭದಲ್ಲಿ ನೋವಿನಿಂದ ಮಾತನಾಡಿದ್ದೆ. ಇದೀಗ ಕೆಲ ಬದಲಾವಣೆಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ರಾಷ್ಟ್ರೀಯ ನಾಯಕರು ಹಿಂದೆ ಆಗಿರುವುದನ್ನು ಮರೆತುಬಿಡಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡುವಾಗ ಅವರ ವಿರುದ್ಧ ಒಂದೇ ಒಂದು ಮಾತನಾಡಿಲ್ಲ. ಅವರಿಗೆ ಧನ್ಯವಾದಗಳನ್ನು ಹೇಳಿದ್ದೇನೆ. ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ. ಕೊನೆಗೆ ಬಿಜೆಪಿ ಪಕ್ಷ ಮಾತ್ರ. ವಾಪಸ್ ಬಂದಿರುವುದಕ್ಕೆ ಸ್ಥಳೀಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರಲ್ಲೂ ಒಳ್ಳೆಯ ಭಾವನೆ ಮೂಡಿದೆ ಎಂದು ಶೆಟ್ಟರ್ ತಿಳಿಸಿದರು.
ಐಟಿ, ಇಡಿಗೆ ಭಯಪಟ್ಟು ಬಿಜೆಪಿಗೆ ಬಂದಿಲ್ಲ: ಬಿಜೆಪಿ ಹೈಕಮಾಂಡ್ ಹಾಗೂ ಸ್ಥಳೀಯ ಕಾರ್ಯಕರ್ತರ ಅಪೇಕ್ಷೆಯಂತೆ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಪುನಃ ಎಂದಿನಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವರು ಎಂದು ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ತಿಳಿಸಿದರು.
ಶೆಟ್ಟರ್ ಬಿಜೆಪಿಗೆ ಬಂದಿದ್ದು ಬಹಳ ಖುಷಿಯ ವಿಚಾರ, ಈ ಹಿಂದೆ ಬಿಜೆಪಿ ನಾಯಕರ ನಡೆಗೆ ಅಸಮಾಧಾನಗೊಂಡು ಕಾಂಗ್ರೆಸ್ ಗೆ ಸೇರಿದ್ದರು. ಯಾವುದಕ್ಕೂ ಅಂಜಿ ನಮ್ಮ ತಂದೆ ಮರಳಿ ಬಂದಿಲ್ಲಾ, ಎಲ್ಲರ ಅಭಿಪ್ರಾಯದಂತೆ ಬಂದಿದ್ದಾರೆ. ಯಾವುದೇ ಐಟಿ, ಇಡಿಗೆ ಭಯಪಟ್ಟಿಲ್ಲ. ಸ್ವಇಚ್ಛೆಯಿಂದ ಬಂದಿದ್ದಾರೆಂದು ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಭವ್ಯ ಸ್ವಾಗತ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದಾರೆ.
ಮೊನ್ನೆ ದೆಹಲಿಯಲ್ಲಿ ಮತ್ತೆ ಬಿಜೆಪಿ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಇಂದು ಅಗಮಿಸಿದರು. ಬೆಂಗಳೂರಿನಿಂದ ರಸ್ತೆ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.
ನಗರದ ಕೇಶ್ವಾಪುರದ ಶ್ರೀನಿವಾಸ ಗಾರ್ಡನ್‌ನಿಂದ ಮಧುರಾ ಕಾಲೋನಿಯಲ್ಲಿರುವ ಅವರ ನಿವಾಸದವರೆಗೆ ಜಗದೀಶ್ ಶೆಟ್ಟರ್ ಅವರಿಗೆ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆ ವೇಳೆ ಶೆಟ್ಟರ್ಗೆ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಸಾಥ್ ನೀಡಿದರು.
ಬೈಕ್ ರ್ಯಾಲಿ ಮೂಲಕ ಶೆಟ್ಟರ್ ಅವರನ್ನು ಅದ್ಧೂರಿಯಾಗಿ ಶೆಟ್ಟರ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮೋದಿ, ಶೆಟ್ಟರ್ ಪರ ಜೈ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಶೆಟ್ಟರ್ ಸ್ವಾಗತಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಬಾರದಿರುವುದು ಎದ್ದು ಕಂಡಿತು.
ಇದನ್ನೂಓದಿ:ಜಗದೀಶ್ ಶೆಟ್ಟರ್ ಘರ್ ವಾಪ್ಸಿಗೆ ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ