ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಜನ ಉತ್ಸಾಹದಿಂದ ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ. ರಾಜಾಜಿನಗರದ 83 ವಯಸ್ಸಿನ ವಯೋವೃದ್ಧೆಯೊಬ್ಬರು ಆಕ್ಸಿಜನ್ ಕಾನ್ಸಂಟ್ರೇಟರ್ ಮೇಲಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ಬಹಳ ವಿಶೇಷವಾಗಿತ್ತು.
ರಾಜಾಜಿನಗರ 2ನೇ ಬ್ಲಾಕ್ ನಿವಾಸಿ ಗೀತಾ ಅವರಿಗೆ ಈಗ 83 ವರ್ಷ. ಆದರೆ ಇವರ ಜೀವನೋತ್ಸಾಹ ಮಾತ್ರ ಬಹಳ ದೊಡ್ಡದು. ಕೋವಿಡ್ನಲ್ಲಿ ಅನಾರೋಗ್ಯಕ್ಕೀಡಾದ ಇವರು ಕಳೆದ ಮೂರು ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಆದರೆ ಮತದಾನ ದಿನದಂದು ಮತ ಹಾಕಲೇಬೇಕೆಂದು ಇವರು ಪಣ ತೊಟ್ಟಿದ್ದರು.
ಇತ್ತೀಚೆಗೆ ಚುನಾವಣಾ ಪ್ರಚಾರವನ್ನು ನೋಡಿದ್ದ ಅವರು ತಾವು ಈ ಬಾರಿಯೂ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕೆಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ಅದಕ್ಕಾಗಿ ಆಕ್ಸಿಜನ್ ಸಿಲಿಂಡರ್ ಇರುವ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ಅವರು ಇಂದು ಆಕ್ಸಿಜನ್ ಸಿಲಿಂಡರ್ನೊಂದಿಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವದ ರಾಯಭಾರಿಯಾಗಿ ಕಂಗೊಳಿಸಿದರು.
ಈ ವಯಸ್ಸಿನಲ್ಲಿಯೂ ಗೀತಾ ಅವರ ಅಧ್ಯಯನ ಆಸಕ್ತಿ ಕುಂದಿಲ್ಲ. ಸದ್ಯ ಅವರು ಹರಿದಾಸ ಸಾಹಿತ್ಯದ ಬಗ್ಗೆ ಪಿಎಚ್ಡಿ ಮಾಡುತ್ತಿದ್ದಾರೆ. ಕಳೆದ ತಿಂಗಳು ಉತ್ತರಾದಿ ಮಠದವರು ನಡೆಸಿದ ಹರಿದಾಸ ಸಾಹಿತ್ಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹರಿದಾಸ ಸಾಹಿತ್ಯ ಕುರಿತು ಪಾಠ ಕೂಡ ಮಾಡುತ್ತಾರೆ.
ಇದನ್ನೂ ಓದಿ : ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024