PAK vs BAN: ಚಾಂಪಿಯನ್ಸ್ ಟ್ರೋಫಿಯಲ್ಲಿಂದು ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯ ರದ್ಧುಗೊಂಡಿದೆ. ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಈ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿಕೊಂಡಿದ್ದ ಪಾಕ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟ್ರೋಫಿ ಅಭಿಯಾನವನ್ನು ಕೊನೆಗೊಳಿಸಿದೆ. ಮತ್ತು ಭಾರೀ ನಷ್ಟವನ್ನೂ ಅನುಭವಿಸಿದೆ.
8 ವರ್ಷಗಳ ಬಳಿಕ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿಕೊಂಡಿದ್ದ ಹಾಲಿ ಚಾಂಪಿಯನ್ಸ್ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲೆ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 320 ರನ್ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ್ದ ಪಾಕ್ ಪಡೆ 260ಕ್ಕೆ ಆಲೌಟ್ ಆಗಿತ್ತು.
Rain plays spoilsport as #PAKvBAN is called-off in Rawalpindi ⛈️
— ICC (@ICC) February 27, 2025
More ➡️ https://t.co/sH1r63WCCD pic.twitter.com/hFe6ETayTG
ಇದರ ಬಳಿಕ ಭಾರತ ವಿರುದ್ಧದ ಪಂದ್ಯಲ್ಲೂ ಮುಗ್ಗರಿಸಿತ್ತು. ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕ್ 241 ರನ್ ಮಾತ್ರ ಕಲೆಹಾಕಿತ್ತು. ವಿರಾಟ್ ಕೊಹ್ಲಿ ಅವರ ಶತಕದ ಸಹಾಯದಿಂದಾಗಿ ಭಾರತ ಸುಲಭವಾಗಿ ಈ ಗುರಿಯನ್ನು ತಲುಪಿತ್ತು. ಈ ಸೋಲಿನೊಂದಿಗೆ ಪಾಕಿಸ್ತಾನ ಸೆಮಿಸ್ ರೇಸ್ನಿಂದಲೂ ಹೊರಬಿತ್ತು.
ಇಂದು ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಾದರೂ ಬಾಂಗ್ಲಾ ವಿರುದ್ಧ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ಮುಂದಾಗಿದ್ದ ಪಾಕ್ಗೆ ಮಳೆ ಶಾಕ್ ಕೊಟ್ಟಿದೆ. ಉಳಿದಂತೆ ಬಾಂಗ್ಲಾದೇಶ ಕೂಡ ಒಂದೇ ಒಂದು ಪಂದ್ಯ ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ.
ಪಾಕ್ಗೆ ಮುಖಭಂಗ: ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದ ಎರಡನೇ ತಂಡವಾಗಿ ಕೆಟ್ಟ ದಾಖಲೆ ಬರೆದಿದೆ. ಇದಕ್ಕೂ ಮೊದಲು ಈ ಕೆಟ್ಟ ದಾಖಲೆ ಕೀನ್ಯಾ ತಂಡ ಬರೆದಿತ್ತು. 2000ನೇ ಇಸವಿಯಲ್ಲಿ ಆತಿಥ್ಯ ವಹಿಸಿಕೊಂಡಿದ್ದ ಕೀನ್ಯಾ ತಂಡವೂ ಒಂದೇ ಒಂದು ಪಂದ್ಯ ಗೆದ್ದಿರಲಿಲ್ಲ.
The ICC #ChampionsTrophy match between Pakistan and Bangladesh is abandoned without a ball bowled 🌧️#PAKvBAN pic.twitter.com/h7uxOhYb9J
— Pakistan Cricket (@TheRealPCB) February 27, 2025
ಪಾಕ್ಗೆ ನಷ್ಟ: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಪ್ ಗೆಲ್ಲುವ ತಂಡ ಮತ್ತು ರನ್ನರ್ ತಂಡ ಸೇರಿದಂತೆ ಐಸಿಸಿ ಬಹುಮಾನವನ್ನು ನಿಗದಿ ಪಡಿಸಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗುವ ತಂಡಕ್ಕೆ 19.46 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ರನ್ನರ್ ಅಪ್ ಆದ ತಂಡ ಪಡೆಯುವ ಬಹುಮಾನದ ಮೊತ್ತ 9.73 ಕೋಟಿ ರೂ. ಆಗಿದೆ. ಇದಲ್ಲದೆ ಸೆಮಿಫೈನಲಿಸ್ಟ್ ತಂಡಗಳು 4.86 ಕೋಟಿ ಸಿಗಲಿದ್ದು ಐದು ಮತ್ತು ಆರನೇ ಸ್ಥಾನದ ತಂಡಗಳಿಗೆ ತಲಾ 3.04 ಕೋಟಿ ರೂ. ಮತ್ತು ಏಳು ಹಾಗೂ ಎಂಟನೇ ಸ್ಥಾನದ ತಂಡಗಳಿಗೆ ತಲಾ 1.22 ಕೋಟಿ ರೂ. ಬಹುಮಾನ ನೀಡಲಾಗುವುದು.
ಇದನ್ನೂ ಓದಿ: 3 ಓವರ್ 100 ರನ್! ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಸಾಧನೆ