Paneer Bhurji: ಎಗ್ ಬುರ್ಜಿ ಅಂದ್ರೆ ಬಹುತೇಕರಿಗೆ ಅಚ್ಚುಮೆಚ್ಚು. ಈ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ರುಚಿಯೂ ಸೂಪರ್ ಆಗಿರುತ್ತದೆ. ಆದರೆ, ಪದೇ ಪದೇ ಒಂದೇ ತರಹದ ಬುರ್ಜಿ ತಿಂದರೆ ಬೇಜಾರಾಗುತ್ತದೆ. ಹಾಗಾಗಿ, ನಾವಿಂದು ಮನೆ ಸದಸ್ಯರೆಲ್ಲರಿಗೂ ಹಿಡಿಸುವ ಹೊಸ ರೆಸಿಪಿ ತಂದಿದ್ದೇವೆ. ಹೌದು ಅದುವೇ ಪನೀರ್ ಬುರ್ಜಿ.
ಪನೀರ್ ಬುರ್ಜಿಗೆ ಹೆಚ್ಚು ಮಸಾಲೆ ಪದಾರ್ಥಗಳ ಅಗತ್ಯವಿಲ್ಲ. ಚಪಾತಿಯ ಜೊತೆಗೆ ಇದು ಪರಿಪೂರ್ಣ ಹೊಂದಾಣಿಕೆಯಾಗುತ್ತದೆ.
ಪನೀರ್ ಬುರ್ಜಿಗೆ ಬೇಕಾಗುವ ಸಾಮಗ್ರಿ:
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಬೆಣ್ಣೆ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಈರುಳ್ಳಿ - 1
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಹಸಿಮೆಣಸಿನಕಾಯಿ - 2
- ಕರಿಬೇವು - 2 ಚಿಗುರುಗಳು
- ಕಡಲೆ ಹಿಟ್ಟು - 1 ಟೀಸ್ಪೂನ್
- ಟೊಮೆಟೊ - 2
- ಅರಿಶಿನ - ಕಾಲು ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಖಾರದ ಪುಡಿ - 2 ಟೀಸ್ಪೂನ್
- ಧನಿಯಾ ಪುಡಿ - 1 ಟೀಸ್ಪೂನ್
- ಜೀರಿಗೆ ಪುಡಿ - 1 ಟೀಸ್ಪೂನ್
- ಗರಂ ಮಸಾಲಾ - ಅರ್ಧ ಟೀಸ್ಪೂನ್
- ಕಸೂರಿ ಮೇಥಿ - 1 ಟೀಸ್ಪೂನ್
- ನೀರು - ಒಂದೂವರೆ ಕಪ್
- ಪನೀರ್ - 150 ಗ್ರಾಂ
- ತಾಜಾ ಕ್ರಿಮ್ - 1 ಟೀಸ್ಪೂನ್
- ಕೊತ್ತಂಬರಿ - ಸ್ವಲ್ಪ
ಪನೀರ್ ಬುರ್ಜಿ ಸಿದ್ಧಪಡಿಸುವ ವಿಧಾನ ಹೇಗೆ?:
- ಮೊದಲು ಒಂದು ಪನೀರ್ ಅನ್ನು ಬುರ್ಜಿಯಂತೆ ತುರಿದಿಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮೆಟೊ ತೆಳುವಾಗಿ ಕತ್ತರಿಸಿ ಪಕ್ಕಕ್ಕಿಡಿ.
- ಒಲೆ ಆನ್ ಮಾಡಿ, ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಮತ್ತು ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ, ಜೀರಿಗೆ ಸೇರಿಸಿ ಫ್ರೈ ಮಾಡಿ.
- ಜೀರಿಗೆ ಹುರಿದ ಬಳಿಕ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
- ಈರುಳ್ಳಿ ಫ್ರೈಯಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ಬಳಿಕ ಕಡಲೆಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ, ಚೆನ್ನಾಗಿ ಮಿಶ್ರಣ ಮಾಡಿ.
- ಇದಾದ ನಂತರ ಟೊಮೆಟೊ ಚೂರುಗಳನ್ನು ಸೇರಿಸಿ ಹಾಗೂ ಮಿಶ್ರಣ ಮಾಡಿ. ನಂತರ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಖಾರದ ಪುಡಿ ಸೇರಿಸಿ ಮುಚ್ಚಿ ಬೇಯಿಸಿ.
- ಟೊಮೆಟೊ ತುಂಡುಗಳು ಎಣ್ಣೆಯ ಮೇಲೆ ತೇಲಿ ಬರುವಂತೆ ಬೇಯಿಸಿದ ನಂತರ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಕಸೂರಿ ಮೇಥಿ ಸೇರಿಸಿ ಹಾಗೂ ವಿವಿಧ ಮಸಾಲೆಗಳನ್ನು ಒಂದು ನಿಮಿಷ ಫ್ರೈ ಮಾಡಿ.
- ನಂತರ ಒಂದೂವರೆ ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಮ್ಮೆ ಉಪ್ಪು ಚೆಕ್ ಮಾಡಿ. ಉಪ್ಪು ಸಾಕಾಗದಿದ್ದರೆ ಸ್ವಲ್ಪ ಸೇರಿಸಿ. ಅದರ ಮೇಲೆ ಮುಚ್ಚಳ ಮುಚ್ಚಿ ಕುದಿಸಿ.
- ಕುದಿಯುತ್ತಿರುವಾಗ ನುಣ್ಣಗೆ ತುರಿದ ಪನೀರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
- ಕೊನೆಗೆ ಫ್ರೆಶ್ ಕ್ರೀಮ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಸೂಪರ್ ಟೇಸ್ಟಿ ಪನೀರ್ ಬುರ್ಜಿ ರೆಡಿ.
ಇದನ್ನೂ ಓದಿ: ಈ ರೆಸಿಪಿ ತೂಕ ಇಳಿಸಲು ಸೂಪರ್ ಆಯ್ಕೆ: ಬ್ರೊಕೊಲಿ ಪನೀರ್ ಸಿದ್ಧಪಡಿಸುವುದು ಹೇಗೆ ಗೊತ್ತೇ?