ಕೀವ್, ಉಕ್ರೇನ್: ಅಮೆರಿಕ ಮತ್ತು ಉಕ್ರೇನ್ ಶುಕ್ರವಾರ ಮಾತುಕತೆಗೆ ತಯಾರಿ ನಡೆಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಬುಧವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಮೆರಿಕದೊಂದಿಗಿನ ಒಪ್ಪಂದ ಅತ್ಯಗತ್ಯ: ಖನಿಜಗಳ ಪಾಲುದಾರಿಕೆ ಒಪ್ಪಂದ, ಉಕ್ರೇನ್‌ಗೆ ಬೆಂಬಲ ಮತ್ತು ಭದ್ರತಾ ಖಾತರಿಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ಸಭೆಯಲ್ಲಿ ಚರ್ಚೆ ಆಗಲಿವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಅಮೆರಿಕ ತನ್ನ ನೆರವು ಮುಂದುವರೆಸುವುದು ನನಗೆ ಮತ್ತು ವಿಶ್ವಕ್ಕೆ ಮುಖ್ಯವಾಗಿದೆ. ಶಾಂತಿಯ ಹಾದಿಯಲ್ಲಿ ಶಕ್ತಿ ಅತ್ಯಗತ್ಯ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ. ಈ ಹಿಂದೆ, ಶುಕ್ರವಾರ (ಫೆಬ್ರವರಿ 28) ಶ್ವೇತಭವನದಲ್ಲಿ ಝೆಲೆನ್ಸ್ಕಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದರು. ಮತ್ತೊಂದು ಕಡೆ ಮೊನ್ನೆ ಮೊನ್ನೆಯಷ್ಟೇ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್- ಟ್ರಂಪ್ ಸಮಾಲೋಚನೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಉಕ್ರೇನ್ ಅಧ್ಯಕ್ಷರು ಶೀಘ್ರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.
ಆ ಹೇಳಿಕೆ ಬೆನ್ನಲ್ಲೇ ಝೆಲೆನ್ಸ್ಕಿ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಪ್ರಮುಖವಾಗಿ ರಷ್ಯಾದೊಂದಿಗಿ ಯುದ್ಧ ಕೊನೆಗಾಣಿಸುವಲ್ಲಿ ಈ ಭೇಟಿ ಸಹಕಾರಿ ಆಗಲಿದೆ ಎಂದು ಬಣ್ಣಿಸಲಾಗುತ್ತಿದೆ. ನಮ್ಮ ತಂಡಗಳು ಅಮೆರಿಕದೊಂದಿಗೆ ಕೆಲಸ ಮಾಡುತ್ತಿವೆ. ನಾವು ಈ ಶುಕ್ರವಾರ ಮಾತುಕತೆಗೆ ತಯಾರಿ ನಡೆಸುತ್ತಿದ್ದೇವೆ ಎಂದು ಝೆಲೆನ್ಸ್ಕಿ ತಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್‌ಗೆ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.
ವಾಷಿಂಗ್ಟನ್ - ಕೀವ್ ನಿಧಿ ಸ್ಥಾಪಿಸುವ ಒಪ್ಪಂದ: ಸುದೀರ್ಘ ಮಾತುಕತೆಗಳ ಸರಣಿಯ ನಂತರ, ವಾಷಿಂಗ್ಟನ್ ಮತ್ತು ಕೀವ್ ನಿಧಿಯನ್ನು ಸ್ಥಾಪಿಸುವ ಒಪ್ಪಂದಕ್ಕೆ ಒಪ್ಪಿಕೊಂಡರು. ತೈಲ, ಅನಿಲ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ ಸೇರಿದಂತೆ ಸರ್ಕಾರಿ ಸ್ವಾಮ್ಯದ ಖನಿಜ ಸಂಪನ್ಮೂಲಗಳ ಭವಿಷ್ಯದ ಹಣಗಳಿಕೆ ಯಿಂದ ಉಕ್ರೇನ್ ಆದಾಯದ ಶೇಕಡಾ 50 ರಷ್ಟು ಕೊಡುಗೆ ನೀಡುತ್ತದೆ.
ಖನಿಜ ಸಂಪನ್ಮೂಲ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರಕ್ಕೆ ಉಕ್ರೇನ್‌ನ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಪ್ರಧಾನಿ ಡೆನಿಸ್ ಶ್ಮಿಹಾಲ್ ತಿಳಿಸಿದ್ದಾರೆ. ಉಕ್ರೇನ್‌ನ ಖನಿಜ ಸಂಪನ್ಮೂಲ ಆದಾಯಕ್ಕೆ US ಪ್ರವೇಶಕ್ಕೆ ಬದಲಾಗಿ ಒಪ್ಪಂದವು ಯಾವುದೇ ಕಾಂಕ್ರೀಟ್ ಭದ್ರತಾ ಖಾತರಿಗಳನ್ನು ನೀಡುವುದಿಲ್ಲ. ಪ್ರಸ್ತುತ ಒಪ್ಪಂದದಲ್ಲಿ ನಿರ್ದಿಷ್ಟ ಕ್ರಮಗಳನ್ನು ಸೇರಿಸಲಾಗಿಲ್ಲವಾದರೂ, ಭವಿಷ್ಯದ ಮಾತುಕತೆಗಳಲ್ಲಿ ಖಾತರಿಗಳನ್ನು ಚರ್ಚಿಸಲಾಗುವುದು ಎಂದು ಝೆಲೆನ್ಸ್ಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಂತಿ ಮತ್ತು ಭದ್ರತೆಯ ಖಾತರಿಗಳು ರಷ್ಯಾ ಇನ್ನು ಮುಂದೆ ಇತರ ರಾಷ್ಟ್ರಗಳ ಜೀವನವನ್ನು ನಾಶಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ತಮ್ಮ ಬುಧವಾರದ ಭಾಷಣದಲ್ಲಿ ಹೇಳಿದ್ದಾರೆ. ಝೆಲೆನ್ಸ್ಕಿ ಆರಂಭದಲ್ಲಿ ಪ್ರಸ್ತಾವಿತ US ಖನಿಜಗಳ ಒಪ್ಪಂದವನ್ನು ತಿರಸ್ಕರಿಸಿದ್ದರು. ಇದು ಟ್ರಂಪ್ ಮತ್ತು ಉಕ್ರೇನ್ ಸಂಬಂಧಗಳ ನಡುವೆ ಬಿರುಕಿಗೆ ಕಾರಣವಾಗಿತ್ತು.
ಇದನ್ನು ಓದಿ: ಝೆಲನ್ಸ್ಕಿ ವಿರುದ್ದ ಮತ ಹಾಕಿದ ಅಮೆರಿಕ ; ವಿಶ್ವಸಂಸ್ಥೆಯಲ್ಲಿ ರಷ್ಯಾ ಪರ ನಿಂತ ಟ್ರಂಪ್