ಫ್ರಾನ್ಸ್: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ನಲ್ಲಿ ಅಪರಾಧ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟೆಲಿಗ್ರಾಮ್ನ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬುಧವಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡುರೊವ್ ಅವರನ್ನು ನ್ಯಾಯಾಲಯ ಬಂಧನಮುಕ್ತಗೊಳಿಸಿದ್ದು, ಮುಂದಿನ ತನಿಖೆ ಸಂಬಂಧ ದೇಶ ತೊರೆಯದಂತೆ ನಿರ್ಬಂಧ ವಿಧಿಸಿದೆ.
ಬುಧವಾರ ಪ್ಯಾರಿಸ್ನಲ್ಲಿ ಔಪಚಾರಿಕ ತನಿಖೆಗೊಳಪಡಿಸಿದ ಫ್ರೆಂಚ್ ನ್ಯಾಯಾಧೀಶರು ಡುರೊವ್ ಮೇಲೆ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಾಥಮಿಕ ಆರೋಪ ಹೊರಿಸಿಸಲಾಗಿದೆ.
ಶನಿವಾರ ತಡರಾತ್ರಿ ಪ್ಯಾರಿಸ್ನ ಹೊರಗಿನ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ರಷ್ಯಾ ಮೂಲದ ಪಾವೆಲ್ ಡುರೊವ್ ಅವರನ್ನು ಬಂಧಿಸಲಾಗಿತ್ತು. ಇದೀಗ ನಾಲ್ಕು ದಿನಗಳ ವಿಚಾರಣೆ ಬಳಿಕ ಫ್ರಾನ್ಸ್ ನ್ಯಾಯಾಲಯ 5 ಮಿಲಿಯನ್ ಯೂರೋಗಳ ಜಾಮೀನು ಹಣ ಪಾವತಿಸಲು ಹಾಗೂ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಆದೇಶಿಸಿ, ಬಿಡುಗಡೆಗೊಳಿಸಿದೆ.
ಮ್ಯಾಜಿಸ್ಟ್ರೇಟ್ ವಿಚಾರಣೆ ವೇಳೆ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ವಿಫಲವಾಗಿರುವ ಬಗ್ಗೆ ಡುರೊವ್ ಮೇಲೆ ಪ್ರಾಥಮಿಕ ಆರೋಪ ಹೊರಿಸಲಾಗಿದೆ. ಅದಲ್ಲದೆ ಮಕ್ಕಳ ಅಶ್ಲೀಲತೆಯಲ್ಲಿ ಅಪ್ರಾಪ್ತರ ಚಿತ್ರಗಳ ಸಂಘಟಿತ ಗುಂಪಿನಲ್ಲಿ ಪ್ರಸಾರ ಜೊತೆಗೆ ಮಾದಕವಸ್ತು ಕಳ್ಳಸಾಗಣೆ, ವಂಚನೆ ಮತ್ತು ನಿ ಲಾಂಡರಿಂಗ್ ಹಾಗೂ ಅಧಿಕಾರಿಗಳು ಕೇಳಿದ ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿರುವ ಆರೋಪವನ್ನು ಡುರೊವ್ ಮೇಲೆ ಹೊರಿಸಲಾಗಿದೆ. ತನಿಖಾ ನ್ಯಾಯಾಧೀಶರು ಬುಧವಾರ ರಾತ್ರಿ ಪ್ರಾಥಮಿಕ ಆರೋಪಗಳನ್ನು ಸಲ್ಲಿಸಿದ್ದರು.
ಸಂಘಟಿತ ಗುಂಪಿನಿಂದ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಅಕ್ರಮ ವಹಿವಾಟುಗಳನ್ನು ಅನುಮತಿಸುವುದನ್ನು ನಿರ್ವಹಿಸುವಲ್ಲಿ ತೊಡಕಾಗಿದೆ ಎನ್ನುವ ಅವರ ವಿರುದ್ಧದ ಮೊದಲ ಪ್ರಾಥಮಿಕ ಆರೋಪವು, 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 5,00,000 ಯೂರೋ ದಂಡಕ್ಕೆ ಕಾರಣವಾಗಬಹುದು ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಸಿಇಒ ಅರೆಸ್ಟ್ - ಟೆಲಿಗ್ರಾಂ ಮೇಲೆ ತೂಗಾಡುತ್ತಿದೆ ಕೇಂದ್ರ ಸರ್ಕಾರದ ಕತ್ತಿ! - Investigation on Telegram