ಜಿನೀವಾ (ಸ್ವಿಟ್ಜರ್ಲ್ಯಾಂಡ್) : ಪಾಕಿಸ್ತಾನ ಅಂತಾರಾಷ್ಟ್ರೀಯ ಕರಪತ್ರಗಳಿಂದ ಬದುಕುತ್ತಿರುವ ಅಸ್ಥಿರತೆಯ ವಿಫಲ ದೇಶವಾಗಿದೆ ಎಂದು ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ 58ನೇ ಸೆಷನ್ನ 7ನೇ ಸಭೆಯಲ್ಲಿ ನೆರೆಯ ದೇಶದ ಟೀಕೆಗೆ ಭಾರತ ಮತ್ತೊಮ್ಮೆ ಪ್ರತ್ಯುತ್ತರ ನೀಡಿದೆ.
ಜಿನೀವಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಭಾರತದ ರಾಯಭಾರಿ ಕ್ಷಿತಿಜ್ ತ್ಯಾಗಿ, ಪಾಕಿಸ್ತಾನ ತನ್ನ ಮಿಲಿಟರಿ ಭಯೋತ್ಪಾದಕ ಸಂಕೀರ್ಣದಿಂದ ಹರಡುವ ಸುಳ್ಳು ಸುದ್ದಿಗಳನ್ನು ಮತ್ತೊಮ್ಮೆ ಮುಂದುವರೆಸಿರುವುದರಲ್ಲಿ ಅಚ್ಚರಿಯೇನಲ್ಲ. ಪಾಕಿಸ್ತಾನ ನಾಯಕರು ಮತ್ತು ನಿಯೋಗಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ವಿಷಾದನೀಯ. ಪಾಕಿಸ್ತಾನ ತನ್ನ ಮುಖವಾಣಿ ಒಐಸಿಯನ್ನು ಅಪಹಾಸ್ಯ ಮಾಡುತ್ತಿದೆ. ಅಂತಾರಾಷ್ಟ್ರೀಯ ಕರಪತ್ರಗಳಿಂದ ಬದಯಕುತ್ತಿರುವ ಅಸ್ಥಿರತೆಯ ವಿಫಲ ದೇಶವೂ ಸದನದ ಸಮಯವನ್ನು ಕೂಡ ಹಾಳು ಮಾಡುತ್ತಿದೆ. ಅದು ತನ್ನ ಅಮಾನವೀಯ ಮತ್ತು ಅಸಮರ್ಥ ಆಡಳಿತ ಕಾರ್ಯದಿಂದ ಕೂಡಿದೆ. ಭಾರತವು ಪ್ರಜಾಪ್ರಭುತ್ವ, ಜನರ ಘನತೆಗೆ ಒತ್ತು ನೀಡುತ್ತಿದೆ. ಇಂತಹ ಮೌಲ್ಯಗಳನ್ನು ಪಾಕಿಸ್ತಾನ ಕಲಿಯಬೇಕಿದೆ ಎಂದರು.
ಪಾಕಿಸ್ತಾನ ವಿರುದ್ಧ ವಾಗ್ದಾಳಿ ಮುಂದುವರೆಸಿದ ತ್ಯಾಗಿ, ಕೇಂದ್ರಾಡಳಿತವಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರಲಿದೆ. ಈ ಸ್ಥಳಗಳಲ್ಲಿನ ಅಭಿವೃದ್ಧಿಯೇ ಈ ಕುರಿತು ಹೇಳುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಳೆದ ಕೆಲವು ವರ್ಷಗಳಲ್ಲಿನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿ ಇದನ್ನು ಹೇಳುತ್ತದೆ. ಈ ಯಶಸ್ಸು ಈ ಪ್ರದೇಶದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಹೊರತಂದು ಸಾಮಾನ್ಯ ಜನಜೀವನಕ್ಕೆ ಮರಳಿಸುವ ಸರ್ಕಾರದ ಬದ್ಧತೆ ಮೇಲೆ ಇರುವ ಜನರ ನಂಬಿಕೆಯನ್ನು ತೋರಿಸುತ್ತದೆ.
ಮಾನವ ಹಕ್ಕುಗಳ ಉಲ್ಲಂಘನೆ, ಅಲ್ಪಸಂಖ್ಯಾತರ ಮೇಲಿನ ಕಿರುಕುಳ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತ, ಭಯೋತ್ಪಾದನೆಯನ್ನು ಆಶ್ರಯಿಸುವ ದೇಶವಾಗಿರುವ ಪಾಕಿಸ್ತಾನವು ಯಾರಿಗೂ ಉಪನ್ಯಾಸ ನೀಡುವ ಸ್ಥಿತಿಯಲ್ಲಿಲ್ಲ ಎಂದು ಟಾಂಗ್ ಕೊಟ್ಟರು.
ಇದೆ ವೇಳೆ ತ್ಯಾಗಿ ಅವರು, ಪಾಕಿಸ್ತಾನ ಭಾರತದೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅನಾರೋಗ್ಯಕರ ಗೀಳಿನಿಂದ ಹೊರಬರಬೇಕು. ಪಾಕಿಸ್ತಾನದ ಆಧಾರರಹಿತ ಮತ್ತು ದುರುದ್ದೇಶಪೂರಿತ ಹೇಳಿಕೆ ವಿರುದ್ಧ ಭಾರತವು ಜವಾಬ್ದಾರಿಯುತ ಮತ್ತು ಸರಿಯಾದ ಉತ್ತರವನ್ನೇ ನೀಡಲಿದೆ ಎಂದರು.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಪಾರ್ತನೆನಿ ಹರೀಶ್ ಕೂಡ ಫೆ. 19ರಂದು ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ ಎಂದು ಪುನರುಚ್ಚರಿಸಿದ್ದರು. ಇದೇ ವೇಳೆ ಪಾಕಿಸ್ತಾನದ ದುರುದ್ದೇಶದ ತಪ್ಪು ಮಾಹಿತಿ ಪ್ರಚಾರವನ್ನು ಖಂಡಿಸಿದ್ದರು.
ಇದನ್ನೂ ಓದಿ: ಕೆಲವೇ ವಾರಗಳಲ್ಲಿ ರಷ್ಯಾ - ಉಕ್ರೇನ್ ಯುದ್ಧ ಅಂತ್ಯ ಎಂದು ಟ್ರಂಪ್ ವಿಶ್ವಾಸ: ಆದರೆ ಪುಟಿನ್ ಹೇಳಿದ್ದೇ ಬೇರೆ!
ಇದನ್ನೂ ಓದಿ: ವಿಮಾನ ಅಪಘಾತ: ಜನನಿಬಿಡ ಪ್ರದೇಶಕ್ಕೆ ಅಪ್ಪಳಿಸಿದ ಸುಡಾನ್ ಮಿಲಿಟರಿ ವಿಮಾನ: 46 ಜನರು ಸಾವು