ಸ್ಟಾಕ್‌ಹೋಮ್: ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್ ಅವರಿಗೆ 2024ನೇ ಸಾಲಿನ ಸಾಹಿತ್ಯ ನೊಬೆಲ್ ನೀಡಲಾಗಿದೆ. 'ಐತಿಹಾಸಿಕ ಆಘಾತಗಳನ್ನು ಎದುರಿಸುವ ಮತ್ತು ಮಾನವ ಜೀವನದ ಸೂಕ್ಷ್ಮತೆಯನ್ನು ಬಹಿರಂಗಪಡಿಸುವ ಅವರ ಆಳವಾದ ಕಾವ್ಯಾತ್ಮಕ ಗ್ರಂಥಕ್ಕೆ ಸಾಹಿತ್ಯ ನೊಬೆಲ್ ನೀಡಲಾಗಿದೆ' ಎಂದು ಸಮಿತಿಯು ಗುರುವಾರ ಹೇಳಿದೆ.
ಹನ್ ಕಾಂಗ್ 1970 ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜು ಎಂಬಲ್ಲಿ ಜನಿಸಿದರು. ಅವರು ಸಾಹಿತ್ಯಿಕ ಹಿನ್ನೆಲೆಯಿಂದ ಬಂದವರು. ತಂದೆ ಹೆಸರಾಂತ ಕಾದಂಬರಿಕಾರರು. ಹನ್ ಅವರು 1993 ರಲ್ಲಿ ವಿಂಟರ್ ಇನ್ ಸಿಯೋಲ್ ಎಂಬ ಕವನವನ್ನು ಬರೆಯುವ ಮೂಲಕ ಕವಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಚೊಚ್ಚಲ ಪ್ರವೇಶ ಪಡೆದರು.
BREAKING NEWS
— The Nobel Prize (@NobelPrize) October 10, 2024
The 2024 #NobelPrize in Literature is awarded to the South Korean author Han Kang “for her intense poetic prose that confronts historical traumas and exposes the fragility of human life.” pic.twitter.com/dAQiXnm11z
53 ವರ್ಷದ ಹನ್ ಅವರು ಬರೆದ 'ದಿ ವೆಜಿಟೇರಿಯನ್' ಗ್ರಂಥವು 2016 ರಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ಇದರಲ್ಲಿ ಮಾಂಸಾಹಾರವನ್ನು ತಿನ್ನುವುದನ್ನು ನಿಲ್ಲಿಸುವ ಮಹಿಳೆಯ ನಿರ್ಧಾರವು ಹೇಗೆಲ್ಲಾ ವಿನಾಶಕಾರಿ ಪರಿಣಾಮಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ವಿವರಿಸಲಾಗಿದೆ. ಇದರ ಜೊತೆಗೆ, ಹನ್ ಅವರ ಇನ್ನೊಂದು ಕಾದಂಬರಿಯಾದ 'ಹ್ಯೂಮನ್ ಆಕ್ಟ್ಸ್' 2018 ರಲ್ಲಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಟೀಕೆಗೆ ಗುರಿಯಾಗಿದ್ದ ಸಾಹಿತ್ಯ ನೊಬೆಲ್: ಸಾಹಿತ್ಯ ಕ್ಷೇತ್ರದಲ್ಲಿ ಕೊಡಮಾಡುವ ಸಾಹಿತ್ಯ ನೊಬೆಲ್ ಪ್ರಶಸ್ತಿಯು ಟೀಕೆಗೆ ಗುರಿಯಾಗಿದೆ. ಯುರೋಪ್ ಮತ್ತು ಅಮೆರಿಕದ ಬರಹಗಾರರಿಗೆ ಮಾತ್ರ ಸೀಮಿತವಾಗಿದ್ದು, ಕಾದಂಬರಿಗಳ ಶೈಲಿ, ಕಥೆಯ ಆಯ್ಕೆಯಲ್ಲೂ ಎಡವಲಾಗುತ್ತಿದೆ. ಜೊತೆಗೆ ಪುರುಷರಿಗೇ ಹೆಚ್ಚು ಬಾರಿ ಪ್ರಶಸ್ತಿ ನೀಡಲಾಗುತ್ತದೆ ಎಂಬ ಆರೋಪವಿದೆ. ಇದಕ್ಕೆ ಇಂಬು ನೀಡುವಂತೆ ಈವರೆಗೆ ನೀಡಲಾದ 119 ಪ್ರಶಸ್ತಿಗಳಲ್ಲಿ ಕೇವಲ 17 ಮಹಿಳೆಯರಿಗೆ ಮಾತ್ರ ನೀಡಲಾಗಿದೆ. 2022 ರಲ್ಲಿ ಫ್ರಾನ್ಸ್ನ ಲೇಖಕಿ ಅನ್ನಿ ಎರ್ನಾಕ್ಸ್ ಅವರು ಪ್ರಶಸ್ತಿ ಪಡೆದುಕೊಂಡರೆ, 2024ನೇ ಸಾಲಿನಲ್ಲಿ ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್ ಅವರ ಪಾಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ಗೆದ್ದವರು: ಅಮೆರಿಕದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭೌತಶಾಶ್ತ್ರದಲ್ಲಿ ಜಾನ್ ಹಾಪ್‌ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರಿಗೆ ನೊಬೆಲ್ ನೀಡಲಾಗಿದೆ. ಗೂಗಲ್ ಡೀಪ್ ಮೈಂಡ್ ಕಂಪನಿಯ ಇಬ್ಬರು ವಿಜ್ಞಾನಿಗಳಾದ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ.ಜಂಪರ್ ಸೇರಿದಂತೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ಬೇಕರ್ ಅವರು ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಗೂಗಲ್ ಡೀಪ್ಮೈಂಡ್ನ ವಿಜ್ಞಾನಿಗಳಿಬ್ಬರಿಗೆ 2024ರ ರಸಾಯನ ಶಾಸ್ತ್ರ ನೊಬೆಲ್ ಪ್ರಶಸ್ತಿ