ಬೀಜಿಂಗ್(ಚೀನಾ): ಪೂರ್ವ ಲಡಾಖ್ನಲ್ಲಿ ಸೇನಾ ಪಡೆಗಳ ಹಿಂತೆಗೆತಕ್ಕೆ ಚೀನಾ ಮತ್ತು ಭಾರತ ಕಳೆದ ವರ್ಷವೇ ಒಪ್ಪಿಗೆ ಸೂಚಿಸಿದ್ದು, ಅದರಂತೆ ಉಭಯ ರಾಷ್ಟ್ರಗಳ ಸೇನೆಗಳು ಅಲ್ಲಿಂದ ವಾಪಸ್ ಆಗಿವೆ. ಸದ್ಯ ಗಡಿಯಲ್ಲಿ ಉಭಯ ಸೇನೆಗಳು ತಮ್ಮ ತಮ್ಮ ಪರಿಧಿಯಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿವೆ.
ಗಡಿ ಶಾಂತಿ ಬಗ್ಗೆ ಗುರುವಾರ ಮಾತನಾಡಿರುವ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್ ಕರ್ನಲ್ ವು ಕಿಯಾನ್, "ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಕೊನೆಗಾಣಿಸಲು ಭಾರತ ಮತ್ತು ಚೀನಾ ಸೇನೆಗಳು ಕೈಗೊಂಡ ನಿರ್ಣಯಗಳನ್ನು ಸಮಗ್ರ ಮತ್ತು ಪರಿಣಾಮಕಾರಿ ರೀತಿಯಲ್ಲಿ ಜಾರಿಗೊಳಿಸುತ್ತಿವೆ" ಎಂದು ಹೇಳಿದ್ದಾರೆ.
"ಪ್ರಸ್ತುತ, ಚೀನಾ ಮತ್ತು ಭಾರತದ ಸೇನೆಗಳು ಗಡಿ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಗಡಿ ಕಾಯುತ್ತಿವೆ. ಗಡಿ ಶಾಂತಿಗಾಗಿ ನಾವು ಭಾರತದ ಜೊತೆ ಕೆಲಸ ಮಾಡಲು ಸಿದ್ಧರಿದ್ದೇವೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಘರ್ಷಿತ ಡೆಪ್ಸಾಂಗ್, ಡೆಮ್ಚೋಕ್ನಿಂದ ಸೇನೆ ಹಿಂತೆಗೆತ: ಲಡಾಖ್ನ ಸಂಘರ್ಷಿತ ಪ್ರದೇಶಗಳಾದ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಿಂದ ಉಭಯ ಸೇನೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಕಳೆದ ವರ್ಷ ಸಹಿ ಹಾಕಿವೆ. ಈ ಮೂಲಕ ನಾಲ್ಕು ವರ್ಷಗಳಿಂದ ಹಳಸಿದ್ದ ಸಂಬಂಧವನ್ನು ಹಳಿಗೆ ತರಲು ಮರುಚಾಲನೆ ನೀಡಲಾಗಿದೆ.
ಉಭಯ ದೇಶಗಳ ಸೇನಾಧಿಕಾರಿಗಳು ಒಪ್ಪಂದ ಅಂತಿಮಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಕ್ಟೋಬರ್ 23ರಂದು ರಷ್ಯಾದ ಕಜಾನ್‌ನಲ್ಲಿ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಸಭೆಯಲ್ಲಿ ಎರಡೂ ರಾಷ್ಟ್ರಗಳ ಸಂಬಂಧಕ್ಕೆ ಪುನರುಜ್ಜೀವನ ನೀಡಿದರು.
ಉಭಯ ರಾಷ್ಟ್ರಗಳ ನಡುವೆ ಸರಣಿ ಮಾತುಕತೆ: ಬಳಿಕ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಡಿಸೆಂಬರ್ 18ರಂದು ಬೀಜಿಂಗ್‌ನಲ್ಲಿ 23ನೇ ವಿಶೇಷ ಪ್ರತಿನಿಧಿ (ಎಸ್ಆರ್) ಸಂವಾದದಲ್ಲಿ ಭಾಗಿಯಾದರು. ಈ ವರ್ಷದ ಜನವರಿ 26ರಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಚೀನಾದ ರಾಜಧಾನಿಗೆ ಭೇಟಿ ನೀಡಿ, ವಿದೇಶಾಂಗ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದರು.
ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಸರಣಿ ಮಾತುಕತೆಗಳು ನಡೆಯುತ್ತಿವೆ. ಇದರ ನಡುವೆಯೇ, ಚೀನಾ ರಕ್ಷಣಾ ಇಲಾಖೆಯ ವಕ್ತಾರರು ಭಾರತದ ಜೊತೆಗಿನ ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಕೊನೆಗಾಣಿಸುವ ಮಾತನ್ನಾಡಿದ್ದಾರೆ.
ಇದನ್ನೂ ಓದಿ: ಕೈಲಾಸ ಮಾನಸ ಸರೋವರ ಯಾತ್ರೆ, ನೇರ ವಿಮಾನ ಸಂಪರ್ಕ ಪುನರಾರಂಭಿಸಲು ಭಾರತ-ಚೀನಾ ನಿರ್ಧಾರ
ಚೀನಾ ಶತ್ರುವಲ್ಲ ಎಂದ ಪಿತ್ರೋಡಾ; ಅವರ ವೈಯಕ್ತಿಕ ಅಭಿಪ್ರಾಯ ಎಂದ ಕಾಂಗ್ರೆಸ್