ಟೆಲ್ ಅವಿವ್ : ಹಮಾಸ್ ಮತ್ತು ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಯುದ್ಧಗಳನ್ನು ನಿರ್ವಹಿಸಲು ಅಕ್ಟೋಬರ್ 11 ರಂದು ರಚಿಸಲಾದ ಆರು ಸದಸ್ಯರ ಯುದ್ಧ ಕ್ಯಾಬಿನೆಟ್ ಅನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಸರ್ಜಿಸಿದ್ದಾರೆ ಎಂದು ರಾಯಿಟರ್ಸ್ ಸೋಮವಾರ ವರದಿ ಮಾಡಿದೆ. ಮೂವರು ಕ್ಯಾಬಿನೆಟ್ ಸದಸ್ಯರಲ್ಲಿ ಒಬ್ಬರಾದ, ಮಧ್ಯಮಮಾರ್ಗೀಯ ನಿಲುವಿನ ಮಾಜಿ ಜನರಲ್ ಬೆನ್ನಿ ಗಾಂಟ್ಜ್ ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ತೊರೆದ ಕೆಲ ದಿನಗಳ ನಂತರ ಪ್ರಧಾನಿ ಈ ಕ್ರಮ ಕೈಗೊಂಡಿದ್ದಾರೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಯುದ್ಧ ಕ್ಯಾಬಿನೆಟ್ನಲ್ಲಿದ್ದ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡೆರ್ಮರ್ ಸೇರಿದಂತೆ ಕೆಲವೇ ಸಚಿವರ ಗುಂಪಿನೊಂದಿಗೆ ಸಮಾಲೋಚನೆ ನಡೆಸುವ ಮೂಲಕ ನೆತನ್ಯಾಹು ಇನ್ನು ಮುಂದೆ ಗಾಜಾ ಯುದ್ಧವನ್ನು ನಿರ್ವಹಿಸಲಿದ್ದಾರೆ.
ಏತನ್ಮಧ್ಯೆ, ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಮತ್ತು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಅವರನ್ನು ಯುದ್ಧ ಕ್ಯಾಬಿನೆಟ್ಗೆ ಸೇರಿಸಿಕೊಳ್ಳುವಂತೆ ಮೈತ್ರಿಕೂಟದಲ್ಲಿನ ರಾಷ್ಟ್ರೀಯವಾದಿ-ಧಾರ್ಮಿಕ ಪಾಲುದಾರ ಪಕ್ಷವು ಇಸ್ರೇಲ್ ಪ್ರಧಾನಿಯ ಮೇಲೆ ತೀವ್ರ ಒತ್ತಡ ಹೇರುತ್ತಿದೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದು 250 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋದ ನಂತರ ಗಾಂಟ್ಜ್ ನೆತನ್ಯಾಹು ಸರ್ಕಾರದ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದರು. ಆ ಸಂದರ್ಭದಲ್ಲಿ ನೆತನ್ಯಾಹು, ಗಾಂಟ್ಜ್ ಅವರನ್ನೊಳಗೊಂಡ ಯುದ್ಧ ಕ್ಯಾಬಿನೆಟ್ ಅನ್ನು ರಚಿಸಿದ್ದರು. ಆದರೆ ನೆತನ್ಯಾಹು ಅವರು ಯುದ್ಧವನ್ನು ನಿರ್ವಹಿಸಿದ ರೀತಿಯು ಹತಾಶೆ ಹುಟ್ಟಿಸಿದೆ ಎಂದು ಹೇಳಿದ್ದ ಗಾಂಟ್ಜ್ ಈ ತಿಂಗಳ ಆರಂಭದಲ್ಲಿ ಸರ್ಕಾರವನ್ನು ತೊರೆದರು.
ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಕದನ ವಿರಾಮವನ್ನು ಜಾರಿಗೊಳಿಸುವ ಒಪ್ಪಂದಕ್ಕೆ ಸರ್ಕಾರದಲ್ಲಿನ ತೀವ್ರ ರಾಷ್ಟ್ರೀಯವಾದಿಗಳು ವಿರೋಧಿಸುತ್ತಿದ್ದಾರೆ. ಹೀಗಾಗಿಯೇ ಕದನವಿರಾಮ ಜಾರಿಯಾಗುತ್ತಿಲ್ಲ ಎಂದು ವಿರೋಧಿಗಳು ಆರೋಪಿಸಿದ್ದಾರೆ.
37 ಸಾವಿರ ಜನರ ಸಾವು: ಅಕ್ಟೋಬರ್ 7 ರ ದಾಳಿಯ ನಂತರ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ 37,000 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಇಸ್ರೇಲ್ನ ಮಿಲಿಟರಿ ಆಕ್ರಮಣದಿಂದ ಗಾಜಾದ ಬಹುತೇಕ ಪ್ರದೇಶ ವಿನಾಶಗೊಂಡಿದೆ. ಅಲ್ಲದೆ ಲಕ್ಷಾಂತರ ಜನ ಹಸಿವಿನ ಬಿಕ್ಕಟ್ಟಿನಲ್ಲಿದ್ದಾರೆ ಎಂದು ಯುಎನ್ ವರದಿ ಮಾಡಿದೆ.
ಪರಿಹಾರ ಸಾಮಗ್ರಿ ರವಾನೆ: ಪ್ಯಾಲೆಸ್ಟೈನಿಯರಿಗೆ ಪರಿಹಾರ ಸಾಮಗ್ರಿಗಳು ಸೂಕ್ತವಾಗಿ ತಲುಪುವ ನಿಟ್ಟಿನಲ್ಲಿ ದಕ್ಷಿಣ ಗಾಜಾದಲ್ಲಿ ಹಗಲು ಹೊತ್ತು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಮಿಲಿಟರಿ ಭಾನುವಾರ ಘೋಷಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದನ್ನೂ ಓದಿ : ಶ್ರೀಲಂಕಾ, ಭಾರತ ಮಧ್ಯೆ ಭೂಮಾರ್ಗ ನಿರ್ಮಾಣ ಅಧ್ಯಯನ ಅಂತಿಮ ಹಂತದಲ್ಲಿ: ಲಂಕಾ ಅಧ್ಯಕ್ಷ ವಿಕ್ರಮಸಿಂಘೆ - Lanka India Land Connectivity