ಹೈದರಾಬಾದ್: ಚಳಿಗಾಲದಲ್ಲಿ ಸಾಮಾನ್ಯವಾಗಿ ಅಸ್ಥಿ ಸಂಧಿವಾತ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆ ಉಲ್ಬಣವಾಗುತ್ತದೆ. ಅಚ್ಚರಿಯ ವಿಷಯವೆಂದರೆ, ಇದೇ ಚಳಿಗಾಲವು ಕೆಲವು ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆ. ಅನೇಕರು ಋತುಚಕ್ರದ ಸಂದರ್ಭದಲ್ಲಿ ಕಿರಿಕಿರಿ, ಏಕಾಗ್ರತೆಯ ಕೊರತೆ, ಆಲಸ್ಯ, ಖಿನ್ನತೆ ಮತ್ತು ಕೋಪ, ಆತಂಕ ಅನುಭವಿಸುತ್ತಾರೆ. ಕೆಲವು ಮಹಿಳೆಯರಿಗೆ ಚಳಿಗಾಲದಲ್ಲಿ ಈ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಇದಕ್ಕೆ ಕಾರಣ ಅವರ ದೇಹದಲ್ಲಿರುವ ಕಬ್ಬಿಣಾಂಶದ ಕೊರತೆ.
ಕಬ್ಬಿಣಾಂಶದ ಕೊರತೆಯು ಆಲಸ್ಯ, ಕಿರಿಕಿರಿ, ಏಕಾಗ್ರತೆ ಕೊರತೆ ಮತ್ತು ದುರ್ಬಲ ಪ್ರತಿರೋಧಕ ವ್ಯವಸ್ಥೆಗೆ ಕಾರಣವಾಗುತ್ತದೆ. ದೇಹ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಬ್ಬಿಣಾಂಶ ಅಗತ್ಯ. ಇದು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಾಗಿಸುವ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಅತ್ಯಂತ ಪ್ರಮುಖವಾಗಿದ್ದರೂ ಅನೇಕ ಮಂದಿ ತಮ್ಮ ಡಯಟ್ನಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣಾಂಶವನ್ನು ಪಡೆಯುವುದಿಲ್ಲ. ಈ ಕಬ್ಬಿಣಾಂಶದ ಕೊರತೆ ಅನಿಮಿಯಾ ಅಂದರೆ ರಕ್ತ ಹೀನತೆಗೆ ಕಾರಣವಾಗುತ್ತದೆ. ಇದರಿಂದ ಆಲಸ್ಯ ಮತ್ತು ಸುಸ್ತು ಕಾಡುತ್ತದೆ. ಅದರಲ್ಲೂ ಮಹಿಳೆಯರು ಋತುಚಕ್ರಕ್ಕೆ ಒಳಗಾಗುವುದರಿಂದ ಕಬ್ಬಿಣದ ಅಂಶ ಅತೀ ಅಗತ್ಯ.
ಕೆಲವು ಅಧ್ಯಯನಗಳು ನೀಡುವ ಮಾಹಿತಿಯಂತೆ, ಋತುಚಕ್ರದ ಸಮಯದಲ್ಲಿ ಕೆಲವು ಮಹಿಳೆಯರು ಅತಿ ಹೆಚ್ಚಿನ ರಕ್ತಸ್ರಾವ ಹೊಂದುವುದಿಲ್ಲ. ಋತುಚಕ್ರ ಎಂಬುದು ಅವರಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ, ಅನೇಕ ಮಹಿಳೆಯರಲ್ಲಿ ಇದು ವಿರುದ್ಧ. ಅವರು ಪ್ರತಿ ತಿಂಗಳು ಅಗಾಧ ಪ್ರಮಾಣದ ರಕ್ತದ ನಷ್ಟ ಹೊಂದುತ್ತಾರೆ. ಇದರಿಂದಾಗಿ ಅವರಲ್ಲಿ ಕಬ್ಬಿಣಾಂಶ ಕೊರತೆ ಮತ್ತು ಶೇ.60ರಷ್ಟು ರಕ್ತಹೀನತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸರಿಯಾಗಿ ಆರೈಕೆ ಮಾಡದಿದ್ದರೆ, ಈ ಋತುಚಕ್ರ ಸಮಸ್ಯೆಗೆ ಗುರಿಯಾಗುತ್ತಾರೆ. ಅಲ್ಲದೇ, ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯ ಲಕ್ಷಣಗಳು ಇತರ ಕಾಯಿಲೆಗಳಿಗೂ ಕಾರಣವಾಗಬಹುದು.
ಆಲಸ್ಯ ಮತ್ತು ಮೂಡ್ ಸ್ವಿಂಗ್ ಚಳಿಗಾಲದಲ್ಲಿ ಸಾಮಾನ್ಯ. ಈ ನಡುವೆ ರಕ್ತ ಹೀನತೆಯಂತಹ ಲಕ್ಷಣಗಳೂ ಕಂಡುಬಂದರೆ, ತಕ್ಷಣಕ್ಕೆ ಆರೋಗ್ಯ ಕಾಳಜಿವಹಿಸಬೇಕು. ಇದಕ್ಕೆ ಉತ್ತಮ ಪರಿಹಾರಗಳೆಂದರೆ ವ್ಯಾಯಾಮ, ಸಾಕಷ್ಟು ವಿಶ್ರಾಂತಿ, ರಾತ್ರಿ ಸಂಪೂರ್ಣ ನಿದ್ರೆ, ಆರೋಗ್ಯಯುತ ಆಹಾರ ಪದ್ಧತಿಗಳು. ವರ್ಷವಿಡೀ ಕಿರಿಕಿರಿ ಮತ್ತು ಆಲಸ್ಯ ಅನುಭವಿಸಿದರೆ ಅಥವಾ ಪ್ರತಿ ತಿಂಗಳು ಈ ಸಮಸ್ಯೆಯಲ್ಲಿ ಏರಿಕೆ ಕಂಡರೆ ಇದಕ್ಕೆ ಕಾರಣ ಕಬ್ಬಿಣಾಂಶದ ಕೊರತೆ ಆಗಿರುತ್ತದೆ. ಈ ಲಕ್ಷಣ ಚಳಿಗಾಲದಲ್ಲಿ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ. ಇದಕ್ಕಿರುವ ಪರಿಹಾರವೆಂದರೆ ಕಬ್ಬಿಣಾಂಶದ ಕೊರತೆ ಸರಿದೂಗಿಸುವುದು. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ನಿರ್ಲಕ್ಷ್ಯಿಸದೆ ತಕ್ಷಣ ಕಾಳಜಿ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಹೆಣ್ಣುಮಕ್ಕಳು ಅವಧಿ ಪೂರ್ವ ಋತುಚಕ್ರಕ್ಕೆ ಒಳಗಾಗುವುದರಿಂದ ಆರೋಗ್ಯದ ಮೇಲೆ ಪರಿಣಾಮ!