ಪ್ರಸ್ತುತ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಮನೆ, ಕಚೇರಿ ಹೀಗೆ ಎಲ್ಲೇ ಇದ್ದರೂ ಗಂಟೆಗಟ್ಟಲೆ ಡಿಜಿಟಲ್ ಸ್ಕ್ರೀನ್ಗಳಿಗೆ ಅಂಟಿಕೊಂಡಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂದಿನ ಮಕ್ಕಳು ಮೊಬೈಲ್ ಸಿಕ್ಕರೆ ಸಾಕು, ಅದರಲ್ಲಿ ಗೇಮ್ಸ್ ಆಡುತ್ತ ಗಂಟೆಗಟ್ಟಲೆ ಸಮಯವನ್ನು ಕಳೆಯುತ್ತಾರೆ.
ಪ್ರಸ್ತುತ ಬದಲಾದ ಜೀವನಶೈಲಿಯಿಂದ ದಿನದ ಬಹುಪಾಲು ಸಮಯವನ್ನು ಡಿಜಿಟಲ್ ಪರದೆಯ ಮುಂದೆ ಕಳೆಯುತ್ತಿದ್ದೇವೆ. ಇಂತಹ ಜೀವನಶೈಲಿ ನಮ್ಮ ಕಣ್ಣಿಗೆ ಒಳ್ಳೆಯದಲ್ಲ. ಗಂಟೆಗಟ್ಟಲೆ ಡಿಜಿಟಲ್ ಸ್ಕ್ರೀನ್‌ಗಳನ್ನು ನೋಡುವುದು ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಮಿತವಾಗಿ ಮೊಬೈಲ್ ಬಳಸುವುದು ಸೂಕ್ತ. ಒಂದು ವೇಳೆ ಮೊಬೈಲ್ ಅಥವಾ ಲ್ಯಾಪ್ಟಾಪ್ಗಳನ್ನು ಬಳಕೆ ಮಾಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಕಣ್ಣುಗಳಿಗೆ ರಕ್ಷಣೆ ಪಡೆಯಬಹುದಾಗಿದೆ.
ಕಣ್ಣುಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು: ಕಂಪ್ಯೂಟರ್ ಅಥವಾ ಫೋನ್ ಬಳಸುವಾಗ ಪ್ರತಿ ಅರ್ಧ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳುವುದು ಉತ್ತಮ. ಪ್ರತಿ ಅರ್ಧಗಂಟೆಗೆ ಒಮ್ಮೆ ದೂರದಲ್ಲಿನ ದೃಶ್ಯಗಳ ಮೇಲೆ ದೃಷ್ಠಿಯನ್ನು ಕೇಂದ್ರೀಕರಿಸಬೇಕೆಂದು ತಜ್ಞರು ಹೇಳುತ್ತಾರೆ. ಹಾಗೆಯೇ ಕಂಪ್ಯೂಟರ್ ಮಾನಿಟರ್‌ನಿಂದ ಬರುವ ಬೆಳಕು ನೇರವಾಗಿ ಕಣ್ಣುಗಳ ಮೇಲೆ ಬೀಳದಂತೆ ಆ್ಯಂಟಿ-ಗ್ಲೇರ್ ಸ್ಕ್ರೀನ್ ಬಳಸಿ. ರಾತ್ರಿಯಲ್ಲಿ ಸಾಧ್ಯವಾದಷ್ಟು ಡಿಜಿಟಲ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ.
ಕಣ್ಣುಗಳಲ್ಲಿನ ತೇವಾಂಶ ಕಡಿಮೆಯಾಗಿದ್ದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಐ ಡ್ರಾಪ್ ಬಳಸಿ. ಉತ್ತಮ ದೃಷ್ಠಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳವುದು ಸೂಕ್ತ ಎನ್ನುತ್ತಾರೆ ವೈದ್ಯರು. ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಎ, ಸಿ, ಇ, ಜಿಂಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಇರುವಂತಹ ಆಹಾರಗಳ ಸೇವನೆ ಮಾಡಬೇಕು. ಇದರೊಂದಿಗೆ ಒಮೆಗಾ 3 ಕೊಬ್ಬಿನಾಂಶಗಳು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯಕ ಮಾಡುತ್ತವೆ. ಒಮೆಗಾ 3ಗಾಗಿ ಮೀನು, ಕೋಸುಗಡ್ಡೆ, ಕ್ಯಾರೆಟ್, ಪಾಲಕ್, ಸ್ಟ್ರಾಬೆರಿಗಳನ್ನು ತೆಗೆದುಕೊಳ್ಳಿ. ಕಣ್ಣಿನ ಸಮಸ್ಯೆಗಳು ತೀವ್ರವಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ಮೊಬೈಲ್ ಸೆಟ್ಟಿಂಗ್ಸ್: ಮೊಬೈಲ್ ಫೋನ್ ಬಳಸುವವರು ತಮ್ಮ ಸ್ಮಾರ್ಟ್ಫೋನಿನಲ್ಲಿ Eye protector ಆಪ್ಷನ್ ಆನ್ ಮಾಡಿ. ಇದಕ್ಕಾಗಿ ನಿಮ್ಮ ಮೊಬೈಲ್ನಲ್ಲಿ ಸೆಟ್ಟಿಂಗ್ಸ್ಗೆ ಹೋಗಿ ಬಳಿಕ ಅಲ್ಲಿ Display ಮೇಲೆ ಕ್ಲಿಕ್ ಮಾಡಿ ಈ ಆಪ್ಷನ್ ಅನ್ನು ಹುಡಿಕಿ ಆನ್ ಮಾಡಿ. ಕೆಲ ಮೊಬೈಲ್ಗಳಲ್ಲಿ Eye comfort ಆಪ್ಷನ್ಸ್ ಲಭ್ಯವಿದ್ದು ಅವುಗಳನ್ನು ಆಯ್ಕೆ ಮಾಡಬಹುದಾಗಿದೆ. ನಿಮ್ಮ ಮೊಬೈಲ್ನಲ್ಲಿ ಈ ಆಯ್ಕೆಗಳು ಇರದೇ ಇದ್ದಲ್ಲಿ ಪ್ಲೇ ಸ್ಟೋರ್ಗೆ ಹೋಗಿ Eye Protector ಅಂತ ಹುಡುಕಿ ಸೂಕ್ತವಾದ ಆ್ಯಪ್ ಅನ್ನು ಆಯ್ಕೆ ಮಾಡಿಕೊಂಡು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದೇ ರೀತಿಯಾಗಿ ಲ್ಯಾಪ್ಟಾಪ್ಗಳಲ್ಲೂ ಆಪ್ಷನ್ಸ್ ಲಭ್ಯವಿದ್ದು, ಮ್ಯಾನ್ಯುವಲ್ ಆಗಿ ನಿಮಗೆ ಬೇಕಾದ ರೀತಿಯಲ್ಲಿ ಡಿಸ್ಪ್ಲೇ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕತ್ತಲೆಯ ಬದುಕಿಗೆ ಶಾಶ್ವತ ಬೆಳಕು ನೀಡಲು ನೇತ್ರದಾನ ಮಾಡಿ - Prevention of Blindness Week