ನವದೆಹಲಿ: ಅಪಾಯಕಾರಿ ಮಟ್ಟದಲ್ಲಿ ದೇಹದಲ್ಲಿ ದ್ರವ ನಷ್ಟ ಉಂಟಾಗುವ ಪ್ರಕ್ರಿಯೆಯೇ ನಿರ್ಜಲೀಕರಣ. ಇದು ಮುಂದೆ ಪಾರ್ಶ್ವವಾಯುವಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇತ್ತೀಚಿಗಷ್ಟೇ ಜೀರೊಧಾ (Zerodha) ಸಹಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಸೌಮ್ಯ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಇದೀಗ ಚೇತರಿಕೆ ಕಾಣುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳಪೆ ನಿದ್ರೆ, ಬಳಲಿಕೆಯ ಹೊರತಾಗಿ ನಿರ್ಜಲೀಕರಣ ಕೂಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು.
ನಿರ್ಜಲೀಕರಣ ನೇರವಾಗಿ ಪಾರ್ಶ್ವವಾಯುಗೆ ಕಾರಣವಾಗುವುದಿಲ್ಲ. ಅಪಧಮನಿ ಪಾರ್ಶ್ವವಾಯುವಿಗಿಂತ ಸೆರೆಬ್ರಲ್ ನಾಳದ ಪಾರ್ಶ್ವವಾಯುಗೆ ಕೊಡುಗೆ ನೀಡುತ್ತದೆ ಎಂದು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ನರಶಾಸ್ತ್ರಜ್ಞ ಗುರುಪ್ರಸಾದ್ ಹೊಸುರ್ಕರ್ ಹೇಳುತ್ತಾರೆ.
ನಿರ್ಜಲೀಕರಣದಿಂದ ದೇಹದಲ್ಲಿ ದ್ರವ ನಷ್ಟವಾಗಿ ಎಲೆಕ್ಟ್ರೊಲೈಟ್ ಅಸಮತೋಲನ ಉಂಟಾಗುತ್ತದೆ. ಇದರಿಂದ ವಿವಿಧ ಕಾರ್ಯಾಚರಣೆಗೆ ತೊಂದರೆಯಾಗುತ್ತದೆ. ಈ ಮುಖೇನ ನಿರ್ಜಲೀಕರಣವು ಪಾರ್ಶ್ವವಾಯು ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಎಂದು ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಕನ್ಸಲ್ಟೆಂಟ್ ಕೌಸುಮ್ ಹುಸೇನ್ ತಿಳಿಸಿದರು.
ನಿರ್ಜಲೀಕರಣವು ರಕ್ತ ದಪ್ಪ ಮಾಡುತ್ತದೆ. ಇದರಿಂದ ಮಿದುಳು ಸೇರಿದಂತೆ ಅಂಗಾಂಗಗಳಿಗೆ ರಕ್ತದ ಹರಿವು ನಿಧಾನಗೊಳ್ಳುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪಾರ್ಶ್ವವಾಯು ಅಪಾಯ ಉಂಟುಮಾಡುತ್ತದೆ.
ನಿರ್ಜಲೀಕರಣದಿಂದಾಗಿ ರಕ್ತ ದಪ್ಪಗಾಗುವುದರಿಂದ ಹೃದಯ ರಕ್ತವನ್ನು ಅಪಧಮನಿಗೆ ಹರಿವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುವ ಸಾಮರ್ಥ್ಯ ತಗ್ಗಿಸುತ್ತದೆ. ಇದರೊಂದಿಗೆ ಆಮ್ಲಜನಕದ ಪೂರೈಕೆ ಕೂಡ ಕಡಿಮೆಯಾಗುತ್ತದೆ. ಅಸಮರ್ಪಕ ನಿರ್ಜಲೀಕರಣ ದೇಹದ ತಾಪಮಾನದ ಮೇಲೆ ಪರಿಣಾಮ ಬೀರಿ ಹೃದಯದ ವ್ಯವಸ್ಥೆ ಮೇಲೆ ಅನಾರೋಗ್ಯಕರ ಒತ್ತಡ ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.
ಈ ಕುರಿತು ಲ್ಯಾನ್ಸೆಟ್ ಜರ್ನಲ್ ಇ-ಬಯೋಮೆಡಿಸಿನ್ನಲ್ಲಿ ಸಂಶೋಧನಾತ್ಮಕ ಪ್ರಕಟಿಸಲಾಗಿದೆ. ಜನರು ಹೈಡ್ರೇಟ್ ಆಗಿರದೇ ಇದ್ದರೆ ಬೇಗ ವಯಸ್ಸಾಗುವಿಕೆಯೊಂದಿಗೆ ಅಕಾಲಿಕ ಸಾವು ಸೇರಿದಂತೆ ದೀರ್ಘಾವಧಿ ಕಾಯಿಲೆಯ ಹೆಚ್ಚಿನ ಅಪಾಯ ಎದುರಾಗುತ್ತದೆ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಹೋದಲ್ಲಿ ಸಾವಿನ ಅಪಾಯವು ಶೇ.20ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ.
ಹೈಡ್ರೇಟ್ ಆಗಿರುವುದೂ ಕೂಡ ಒಟ್ಟಾರೆ ಆರೋಗ್ಯದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ದಿನದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ. ವಿಶೇಷವಾಗಿ ದೈಹಿಕ ಚಟುವಟಿಕೆಯ ಸಂದರ್ಭ ಅಥವಾ ಹೆಚ್ಚುತ್ತಿರುವ ಬಿಸಿಲ ತಾಪಮಾನದ ವೇಳೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.(ಐಎಎನ್ಎಸ್)
ಇದನ್ನೂ ಓದಿ: ವ್ಯಾಯಾಮದಿಂದ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಯೋಜನ