ನವದೆಹಲಿ: ಮೆಂಥಾಲ್ ಸಿಗರೇಟ್ ಅನ್ನು ನಿಷೇಧಿಸುವುದರಿಂದ ಧೂಮಪಾನ ತ್ಯಜಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಮೆಂಥಾಲ್ ಸಿಗರೇಟ್ ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿ ವಿಷಯವಾಗಿದೆ. ಈ ಸಿಗರೇಟ್ನಲ್ಲಿರುವ ತಣ್ಣನೆಯ ಅಂಶವೂ ಸಿಗರೇಟ್ನಲ್ಲಿನ ಕಠೋರತೆಯನ್ನು ಮರೆಮಾಚುತ್ತದೆ. ಅಲ್ಲದೇ, ಇದು ಯುವ ಜನತೆಯು ಸುಲಭವಾಗಿ ಧೂಮಪಾನದ ಚಟಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದು ಜರ್ನಲ್ ನಿಕೋಟಿನ್ ಅಂಡ್ ಟೊಬೆಕೊ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಈ ಮೊದಲು ಸಂಶೋಧಕರು ಪತ್ತೆ ಮಾಡಿದಂತೆ ಸಿಗರೇಟ್ನಲ್ಲಿನ ಮೆಂಥಾಲ್ ಧೂಮಪಾನಿಗಳಿಗೆ ಸುಲಭವಾಗಿ ನಿಕೋಟಿನ್ ಅನ್ನು ಎಳೆಯಲು ಸಹಾಯ ಮಾಡುತ್ತದೆ. ಇದರಿಂದ ಈ ಸಿಗರೇಟ್ ಮೇಲಿನ ಅವಲಂಬನೆ ಹೆಚ್ಚಿದೆ. ಸಾಮಾನ್ಯ ಧೂಮಪಾನಿಗಳಿಗೆ ಹೋಲಿಕೆ ಮಾಡಿದಾಗ ಮೆಂಥಾಲ್ ಧೂಮಪಾನಿಗಳು ಈ ಚಟದಿಂದ ಹೊರ ಬರುವುದು ಕಷ್ಟ.
ಸಂಶೋಧಕರ ಪ್ರಕಾರ, ಜಾಗತಿಕವಾಗಿ ಸಿಗರೇಟ್ ಧೂಮಪಾನಿಗಳಿಗಿಂತ ಮೆಂಥಾಲ್ ಧೂಮಪಾನಿಗಳ ಪ್ರಮಾಣ ಬದಲಾಗುತ್ತಿದೆ. ಯುರೋಪ್ನಲ್ಲಿ ಮೆಂಥಾಲ್ ಧೂಮಪಾನಿಗಳ ಪ್ರಮಾಣ ಶೇ 7.4ರಷ್ಟಿದೆ. ಅಮೆರಿಕದಲ್ಲಿ 2020ರಲ್ಲಿ ವಯಸ್ಕ ಧೂಮಪಾನಿಗಳಲ್ಲಿ ಶೇ 43.4ರಷ್ಟು ಮೆಂಥಾಲ್ ಸಿಗರೇಟ್ ಬಳಕೆ ಮಾಡುತ್ತಿದ್ದಾರೆ.
ಮೆಂಥಾಲ್ ಧೂಮಪಾನವನ್ನು ಯುವ ಜನತೆ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ವರ್ಣೀಯ ಅಲ್ಪಸಂಖ್ಯಾತರು ಮತ್ತು ಕಡಿಮೆ ಆದಾಯದವರಲ್ಲಿ ಈ ಚಟ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಅಮೆರಿಕದ 170ಕ್ಕೂ ಹೆಚ್ಚು ನಗರದಲ್ಲಿ ಮತ್ತು ಎರಡು ರಾಜ್ಯದಲ್ಲಿ ಕೆನಡಾ, ಇಥಿಯೋಪಿಯಾ ಮತ್ತು ಯುರೋಪಿಯನ್ ದೇಶದಲ್ಲಿ ಈ ಮೆಂಥಾಲ್ ಸಿಗರೇಟ್ ಅನ್ನು ನಿಷೇಧಿಸಲಾಗಿದೆ.
ಮೆಂಥಾಲ್ ಸಿಗರೇಟ್ ನಿಷೇಧಿಸುವುದರಿಂದ ಹೇಗೆ ನಡುವಳಿಕೆ ಬದಲಾಗಿದೆ ಎಂಬುದನ್ನು ತಜ್ಞರು ಪರಿಶೀಲನೆ ಮಾಡಿದ್ದಾರೆ. ಅಧ್ಯಯನದ ಫಲಿತಾಂಶದಲ್ಲಿ ಮೆಂಥಾಲ್ ಸಿಗರೇಟ್ ಬ್ಯಾನ್ ಮಾಡಿದ ಬಳಿಕ ಶೇ 50ರಷ್ಟು ಮೆಂಥಾಲ್ ಧೂಮಪಾನಿಗಳು ಮೆಂಥಾಲ್ ರಹಿತ ಧೂಮಪಾನಕ್ಕೆ ಹೊರಳಿದರೆ, ಶೇ 24ರಷ್ಟು ಅಂದರೆ ಕಾಲು ಭಾಗದಷ್ಟು ಮಂದಿ ಧೂಮಪಾನವನ್ನು ತ್ಯಜಿಸಿದ್ದಾರೆ. ಶೇ 12ರಷ್ಟು ಮಂದಿ ತಮ್ಮ ಇಷ್ಟದ ಫ್ಲೇವರ್ನ ತಂಬಾಕಿನ ಉತ್ಪನ್ನದತ್ತ ಮುಖ ಮಾಡಿದರೆ, ಶೇ 24ರಷ್ಟು ಮೆಂಥಾಲ್ ಸಿಗರೇಟ್ ಧೂಮಪಾನವನ್ನು ಮುಂದುವರೆಸಿದ್ದಾರೆ.
ರಾಜ್ಯಗಳು ಮತ್ತು ಸ್ಥಳೀಯವಾಗಿ ಮೆಂಥಾಲ್ ಸಿಗರೇಟ್ ನಿಷೇಧಿಸುವುದಕ್ಕಿಂತ ರಾಷ್ಟ್ರ ಮಟ್ಟದಲ್ಲಿ ಇದನ್ನು ನಿಷೇಧಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ. ಇದರಿಂದ ಧೂಮಪಾನ ತ್ಯಜಿಸುವವರ ದರ ಕೂಡ ಹೆಚ್ಚಿರಲಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಧೂಮಪಾನದಿಂದ ರೋಗ ನಿರೋಧಕ ವ್ಯವಸ್ಥೆ ಮೇಲೆ ಬೀರುತ್ತೆ ಭೀಕರ ಪರಿಣಾಮ