ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಪ್ರಸಿದ್ಧವಾಗಿತ್ತು. ದ್ವಾರಕೀಶ್–ವಿಷ್ಣು ಹಲವಾರು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಇವರ ಅಭಿನಯದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ಆದರೆ ಈ ಸ್ನೇಹದಲ್ಲಿ ಆಪ್ತಮಿತ್ರ ಸಿನಿಮಾದ ಬಳಿಕ ಸ್ವಲ್ಪ ಬಿರುಕು ಕಂಡಿತ್ತು ಎಂಬ ಸುದ್ದಿ ಹರಿದಾಡಿತ್ತು.
ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಮೂಡಿದ ಬಳಿಕ ದ್ವಾರಕೀಶ್ ಅವರು ಹೊಸ ನಟರೊಂದಿಗೆ ಸಿನಿಮಾ ಮಾಡಲು ಪ್ರಾರಂಭಿಸಿದ್ದರು. ಆದರೆ ಅವರ ದುರಾದೃಷ್ಟವೋ ಏನೋ ಆ ಸಿನಿಮಾಗಳೆಲ್ಲವೂ ನೆಲಕಚ್ಚುತ್ತಿತ್ತು. ನಟನೆ ಮತ್ತು ನಿರ್ಮಾಣ ಎರಡರಲ್ಲೂ ನಿರಂತರ ಸೋಲನುಭವಿಸುತ್ತಿದ್ದ ದ್ವಾರಕೀಶ್ ತನ್ನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದರು.
ದ್ವಾರಕೀಶ್ ನಿರಂತರ ಸೋಲಿನ ಕಾರಣದಿಂದ ಇಷ್ಟಪಟ್ಟು ಖರೀದಿಸಿದ ಮನೆಯನ್ನೂ ಸಹ ಮಾರಾಟ ಮಾಡುತ್ತಾರೆ. ಸಿನಿಮಾ ಮಾಡುವುದಕ್ಕಾಗಿ ತಾವು ಮಾಡಿದಂತಹ ಸಾಲ ತೀರಿಸಲಾಗದೆ ದ್ವಾರಕೀಶ್ ಸಂಕಷ್ಟಕ್ಕೆ ಸಿಲುಕುತ್ತಾರೆ. ಆ ಸಮಯದಲ್ಲಿ ವಿಷ್ಣುವರ್ಧನ್ ಸ್ನೇಹಿತನ ನೆರವಿಗೆ ಧಾವಿಸುತ್ತಾರೆ. ದ್ವಾರಕೀಶ್ 'ಆಪ್ತಮಿತ್ರ' ಎಂಬ ಸಿನಿಮಾದಲ್ಲಿ ನಟಿಸುವಂತೆ ವಿಷ್ಣುವರ್ಧನ್ಗೆ ಕೇಳಿಕೊಳ್ಳುತ್ತಾರೆ. ಕಷ್ಟದಲ್ಲಿದ್ದ ದ್ವಾರಕೀಶ್ ಪರಿಸ್ಥಿತಿ ನೋಡಿ ವಿಷ್ಣುವರ್ಧನ್ ಒಂದು ರೂಪಾಯಿ ಸಂಭಾವನೆ ಪಡೆಯದೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ. ಈ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಆಗಿ ಬಾಕ್ಸ್ ಆಫೀಸ್ನಲ್ಲಿ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತೆ.
ಆಪ್ತಮಿತ್ರ ಯಶಸ್ಸಿನಿಂದ ಮಾರಿದ್ದ ಮನೆ ಹಾಗೂ ಆಸ್ತಿಯನ್ನು ಮತ್ತೆ ಸಂಪಾದನೆ ಮಾಡುತ್ತಾರೆ. ನಂತರ ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರಿಗೆ ಒಂದು ದೊಡ್ಡ ಮಟ್ಟದ ಬ್ರೇಕ್ ಬೇಕಿತ್ತು, ಆದ್ದರಿಂದ ನಾನು ಈ ಸಿನಿಮಾ ಮಾಡಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿಬಿಡುತ್ತಾರೆ. ಇದರಿಂದ ವಿಷ್ಣು ಮತ್ತು ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಕಾಣಿಸಿಕೊಳ್ಳುತ್ತೆ. ಅಂದಹಾಗೆ ಈ ವಿಷಯದ ಬಗ್ಗೆ ಈಗಲೂ ಚಂದನವನದಲ್ಲಿ ಗುಸುಗುಸು ಹರಿದಾಡುತ್ತಿದೆ. ಈ ಸಂಗತಿ ಎಷ್ಟು ನಿಜವೆಂದು ಸ್ವತಃ ಅವರಲ್ಲೇ ಕೇಳೋಣವೆಂದರೆ ಇಬ್ಬರೂ ಈಗಿಲ್ಲ!.