ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಕಡೆಯಿಂದ ಬಹುನಿರೀಕ್ಷಿತ ಚಿತ್ರ ''ಕಾಂತಾರ ಪ್ರೀಕ್ವೆಲ್'' ಕುರಿತು ಕೆಲ ಮಾಹಿತಿ ಹೊರ ಬಿದ್ದಿದೆ. ಚಿತ್ರಕ್ಕಾಗಿ ತಮ್ಮ ಹಳ್ಳಿಯಲ್ಲಿ ಬೃಹತ್ ಸೆಟ್ ನಿರ್ಮಿಸಿರುವುದಾಗಿ ಮತ್ತು ಮುಂದಿನ ತಿಂಗಳು ಅಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿರುವುದಾಗಿ ತಿಳಿಸಿದ್ದಾರೆ.
ಕಾಂತಾರ ಸರಣಿಯ ಮೊದಲ ಭಾಗ ''ಕಾಂತಾರ: ಎ ಲೆಜೆಂಡ್'' 2022ರ ಸೆಪ್ಟೆಂಬರ್ ಕೊನೆಗೆ ತೆರೆಕಂಡು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶ ಕಂಡಿದೆ. ಮುಂದಿನ ಭಾಗಕ್ಕಾಗಿ ಉತ್ಸುಕರಾಗುವಂತೆ ಮಾಡಿದೆ. ರಿಷಬ್ ಶೆಟ್ಟಿ ರಚನೆಯ ವಿಭಿನ್ನ ಲೋಕಕ್ಕೆ ಮತ್ತೆ ಧುಮುಕುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅದಕ್ಕೆ ತಕ್ಕಂತೆ ಇದೀಗ ಚಿತ್ರದ ಕೆಲ ಅಪ್ಡೇಟ್ಸ್ ಹೊರಬೀಳೋ ಮುಖೇನ, ಸಿನಿಪ್ರಿಯರ ಕುತೂಹಲ - ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ಮಂಗಳವಾರ ಸಂಜೆ ಮುಂಬೈನಲ್ಲಿ ನಡೆದ ಪ್ರೈಮ್ ವಿಡಿಯೋ ಈವೆಂಟ್‌ನಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಪ್ರಯಾಣದ ಕುರಿತು ಕೆಲ ಪ್ರಮುಖ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಅವರು ಕಾಲೇಜಿನಲ್ಲಿರುವಾಗ ಹೇಗೆ ಐಡಿಯಾಗಳು ಬರುತ್ತಿದ್ದವು, ತಮ್ಮ ಹಳ್ಳಿಯ ಕಥೆಗಳು ಮತ್ತು ಜಾನಪದವನ್ನು ದೊಡ್ಡ ಪರದೆಯ ಮೇಲೆ ತರುವುದನ್ನು ತಮ್ಮ ಕನಸಾಗಿಸಿಕೊಂಡಿದ್ದರ ಕುರಿತು ಮಾತನಾಡಿದರು.
"ನಾನು 6ನೇ ತರಗತಿಯಲ್ಲಿದ್ದಾಗ ನನ್ನ ಹಳ್ಳಿಯಲ್ಲಿ ನಟಿಸಲು ಪ್ರಾರಂಭಿಸಿದೆ. ನಮ್ಮ ಹಳ್ಳಿಯ ಕಥೆಗಳನ್ನು ಹಿರಿತೆರೆಯಲ್ಲಿ ಹಂಚಿಕೊಳ್ಳಲು ಬಯಸಿದ್ದೆ. ಕಾಲೇಜು ವಿದ್ಯಾಭ್ಯಾಸದ ಸಂದರ್ಭ ಈ ಚಿತ್ರದ ಐಡಿಯಾಗಳು ನನ್ನ ತಲೆಯಲ್ಲಿ ಬರಲು ಪ್ರಾರಂಭಿಸಿತು. ನಾನು ನಿರ್ದೇಶಕನಾಗುತ್ತಿದ್ದಂತೆ, ಅದನ್ನು ಸರಿಯಾದ ಚಿತ್ರಕಥೆಯಾಗಿ ಪರಿವರ್ತಿಸಿದೆ. ನಾವು ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲೇ, ಪ್ರೀಕ್ವೆಲ್ ಮಾಡಬೇಕು ಎಂದು ಬಯಸಿದ್ದೆವು ಮತ್ತು ಪ್ರೇಕ್ಷಕರ ಬೆಂಬಲ ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಪರಿಣಾಮ, ಮುಂದಿನ ತಿಂಗಳು ನಮ್ಮ ಹಳ್ಳಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಮಾ.26ಕ್ಕೆ 'ಮಗಧೀರ' ಮರು ಬಿಡುಗಡೆ: ರಾಮ್ ಚರಣ್ ಫ್ಯಾನ್ಸ್ಗೆ ಸ್ಪೆಷಲ್ ಗಿಫ್ಟ್
ಪ್ರೇಕ್ಷಕರ ಅಪಾರ ಪ್ರೀತಿ ತಮ್ಮನ್ನು ಮುಂದಿನ ಪ್ರಾಜೆಕ್ಟ್ಗೆ ತೊಡಗಿಕೊಳ್ಳಲು ಹೇಗೆ ಸಹಕಾರಿ ಆಯಿತೆಂಬುದನ್ನು ಇದೇ ಕಾರ್ಯಕ್ರಮದಲ್ಲಿ ಒತ್ತಿ ಹೇಳಿದರು. ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣಕ್ಕಾಗಿ ತಮ್ಮ ಗ್ರಾಮದಲ್ಲಿ ಬೃಹತ್ ಸೆಟ್ ನಿರ್ಮಾಣ ಸೇರಿದಂತೆ ತಮ್ಮ ವ್ಯಾಪಕ ಸಿದ್ಧತೆಗಳನ್ನು ಪ್ರಸ್ತಾಪಿಸಿದರು. ರಿಷಬ್ ಶೆಟ್ಟಿ ಚುಕ್ಕಾಣಿ ಹಿಡಿದಿರುವುದರಿಂದ, ಕಾಂತಾರ ಪ್ರೀಕ್ವೆಲ್ನ ಅದ್ಭುತ ಸಿನಿಮೀಯ ಅನುಭವಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಶೀಘ್ರದಲ್ಲೇ ರಿಷಬ್ ಸೇರಿದಂತೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
ಇದನ್ನೂ ಓದಿ: ಪೋಸ್ಟರ್ನಲ್ಲೇ ಕುತೂಹಲ ಮೂಡಿಸಿದ ಝೈದ್ ಖಾನ್ ನೂತನ ಚಿತ್ರ; ಶೀಘ್ರವೇ ಟೈಟಲ್ ರಿವೀಲ್