ಮಂಗಳೂರು (ದಕ್ಷಿಣ ಕನ್ನಡ): ಸಿನಿ ಲೋಕದಲ್ಲಿ ದಾಖಲೆ ನಿರ್ಮಿಸಿದ ಕಾಂತಾರ ಸಿನಿಮಾದ ನಟ, ಗಾಯಕ ಮೈಮ್ ರಾಮ್ ದಾಸ್ ಮಂಗಳೂರಿನ ಕೊಟ್ಟಾರ ಶಾಲೆಯಲ್ಲಿ ಮತ ಚಲಾಯಿಸಿದರು.
ಕಾಂತಾರ ಸಿನಿಮಾದಲ್ಲಿ ನಟನಾಗಿ, ಓ ಪೊರ್ಲುಯ ಎಂಬ ಹಿನ್ನೆಲೆ ಗಾಯನದ ಗಾಯಕರಾಗಿದ್ದ ಅವರು ಇದೀಗ ಕಾಂತಾರ 2 ಸಿನಿಮಾ ಕೆಲಸದಲ್ಲಿ ನಿರತರಾಗಿದ್ದಾರೆ. ಹಲವು ಕನ್ನಡ, ತುಳು ಸಿನಿಮಾದಲ್ಲಿ ನಟಿಸಿರುವ ಅವರ ಹಾಡುಗಳು ತುಳುವಿನಲ್ಲಿ ಜನಪ್ರಿಯವಾಗಿದೆ. ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಕಾಂತಾರ 2 ಸಿನಿಮಾ ಕೆಲಸದಲ್ಲಿದ್ದೆ. ಮತ ಚಲಾಯಿಸಲು ಇಂದು ಮಂಗಳೂರಿಗೆ ಬಂದಿದ್ದೇನೆ. ಮತದಾನ ಮಾಡಿದರೆ ಮಾತ್ರ ಈ ದೇಶದ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುತ್ತದೆ. ನಾನೆಂದಿಗೂ ಮತದಾನ ತಪ್ಪಿಸಿಲ್ಲ ಎಂದು ತಿಳಿಸಿದರು.
ಕಾಪಿಕಾಡ್ ಮತದಾನ: ತುಳು ಸಿನಿಮಾದ ದಿಗ್ಗಜರಾದ ದೇವದಾಸ್ ಕಾಪಿಕಾಡ್ ಮತ್ತು ಅರ್ಜುನ್ ಕಾಪಿಕಾಡ್ ಮಂಗಳೂರಿನ ಎಸ್.ಡಿ.ಎಂ ಕಾಲೇಜ್ನಲ್ಲಿ ಮತ ಚಲಾಯಿಸಿದರು. ತುಳು ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ಪ್ರಸಿದ್ಧರಾಗಿರುವ ತಂದೆ ಮಗ ಒಟ್ಟಿಗೆ ಬಂದು ಮತ ಚಲಾಯಿಸಿದರು. ದೇವದಾಸ್ ಕಾಪಿಕಾಡ್ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಹಾಸ್ಯಭರಿತ ಡೈಲಾಗ್ಸ್ ಮೂಲಕ ಕೋಸ್ಟಲ್ವುಡ್ನಲ್ಲಿ ಪ್ರಸಿದ್ಧರಾಗಿದ್ದಾರೆ. ಇನ್ನು, ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್ ಕೂಡ ತುಳು ಸಿನಿಮಾಗಳಲ್ಲಿ ನಾಯಕನಟನಾಗಿ ಮಿಂಚಿದ್ದಾರೆ.
ಮತ ಚಲಾಯಿಸಿ ಮಾತನಾಡಿದ ದೇವದಾಸ್ ಕಾಪಿಕಾಡ್, ಮತದಾನ ನಮ್ಮ ಕರ್ತವ್ಯ. ಎಲ್ಲರೂ ಬಂದು ಮತ ಚಲಾಯಿಸಬೇಕು. ನಡೆಯಲು ಸಾಧ್ಯವಿಲ್ಲದಿದ್ದರೂ ಹಿರಿಯ ನಾಗರಿಕರು ಬಂದು ಮತದಾನ ಮಾಡಿದ್ದಾರೆ. ಇದನ್ನು ನಮ್ಮ ಯುವಕರು ನೋಡಬೇಕು. ನಮ್ಮ ದೇಶದ ಭವಿಷ್ಯಕ್ಕಾಗಿ ಯುವಕರು ಮತ ಚಲಾಯಿಸಬೇಕು ಎಂದರು. ಮಗ ಅರ್ಜುನ್ ಕಾಪಿಕಾಡ್ ಮಾತನಾಡಿ, ಮತ ಚಲಾಯಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಕರೆ ಕೊಟ್ಟರು.
ಇದನ್ನೂ ಓದಿ: ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್ ವೋಟಿಂಗ್: ವಿಡಿಯೋ - Radhika Rachita Voting
ಸೃಜನ್ ಲೋಕೇಶ್ ಅವರ ಮಜಾ ಟಾಕಿಸ್ನಲ್ಲಿ ಗುಂಡುಮಾಮನಾಗಿ, ತುಳುವರ ಕುಸಲ್ದರಸೆಯಾಗಿ ನಟಿಸುತ್ತಿರುವ ನವೀನ್ ಡಿ ಪಡೀಲ್ ಮಂಗಳೂರಿನ ಪಡೀಲ್ನಲ್ಲಿರುವ ಅಮೃತ ಕಾಲೇಜಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇವರು ತುಳು ರಂಗಭೂಮಿಯಲ್ಲಿ, ತುಳು ಸಿನಿಮಾದಲ್ಲಿ ಪ್ರಸಿದ್ಧ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ವಿಶಿಷ್ಠ ಅಭಿನಯದ ಮೂಲಕ ತುಳು ಪ್ರೇಕ್ಷಕರ ಅಭಿಮಾನ ಗಳಿಸಿದ್ದಾರೆ. ಅದೇ ರೀತಿ ಮಜಾಟಾಕಿಸ್ ಕಾರ್ಯಕ್ರಮದಲ್ಲಿ ಗುಂಡುಮಾಮನಾಗಿ ನಟಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Kannada SUPERSTARS voting : ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಯಶ್, ಸುದೀಪ್, ದರ್ಶನ್ - CELEBRITIES VOTING
ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು. ನಾನು ಮತದಾನ ಮಾಡಿ ಬಂದೆ. ಸಮಾಜದ ಚಿಂತನೆ ಮಾಡುವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ಗೆದ್ದು ಬಂದ ಅಭ್ಯರ್ಥಿ ಸಮಾಜದ ಕಷ್ಟಗಳನ್ನು ಕೇಳುವಂತಾಗಲಿ, ಸಮಾಜದ ಕಷ್ಟಗಳಿಗೆ ಪರಿಹಾರ ಕೊಡಿಸುವಂತಾಗಲಿ, ಅದನ್ನು ನಾವು ಕಣ್ತುಂಬ ನೋಡುವಂತಾಗಲಿ ಎಂಬುದು ನಮ್ಮ ಆಶೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.