ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಗುಂಟೂರು ಖಾರಂ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿರೋ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಬಹುಬೇಡಿಕೆ ನಟಿ ಶ್ರೀಲೀಲಾ ಅಭಿನಯದ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣಲಿದೆ. ಈ ಒಟಿಟಿ ವೇದಿಕೆಯಲ್ಲಿ ಇದೇ ಫೆಬ್ರವರಿ 9ರಿಂದ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾ ಲಭ್ಯವಾಗಲಿದೆ. ಸೂಪರ್ ಹಿಟ್ ಆಗಿರೋ ಈ ಚಿತ್ರ ಸಂಕ್ರಾಂತಿ ಸಂದರ್ಭ ಅಂದರೆ ಕಳೆದ ಜನವರಿ 12 ರಂದು ಚಿತ್ರಮಂದಿರ ಪ್ರವೇಶಿಸಿತ್ತು.
ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ನಿರ್ಮಿಸಿದ ಗುಂಟೂರು ಖಾರಂ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಬರೆದು, ನಿರ್ದೇಶಿಸಿದ್ದರು. ಥಮನ್ ಎಸ್ ಸಂಗೀತ ಸಂಯೋಜಿಸಿದ್ದರು. ಮಹೇಶ್ ಬಾಬು, ಶ್ರೀಲೀಲಾ ಹೊರತುಪಡಿಸಿ ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ರಮ್ಯಾ ಕೃಷ್ಣನ್, ರಾವ್ ರಮೇಶ್, ಜಗಪತಿ ಬಾಬು, ಅಜಯ್ ಘೋಷ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.
ಗುಂಟೂರು ಖಾರಂ ಜನವರಿ 12 ರಂದು ಥಿಯೇಟರ್ ಪ್ರವೇಶಿಸಿತ್ತು. ಸಂಕ್ರಾಂತಿ ಸಂದರ್ಭ ಹಲವು ಸಿನಿಮಾಗಳು ತೆರೆಕಂಡಿದ್ದವು. ಪ್ರಶಾಂತ್ ವರ್ಮಾ ಅವರ ಹನುಮಾನ್, ನಾಗಾರ್ಜುನ ಅವರ ನಾ ಸಾಮಿ ರಂಗ, ವೆಂಕಟೇಶ್ ಅವರ ಸೈಂಧವ್ ಸೇರಿದಂತೆ ಕೆಲ ಬಹುನಿರೀಕ್ಷಿತ ಸಿನಿಮಾಗಳೊಂದಿಗೆ ಮಹೇಶ್ ಬಾಬು ಸಿನಿಮಾ ಸ್ಪರ್ಧಿಸಿತು. ಬಾಕ್ಸ್ ಆಫೀಸ್ ಫೈಟ್ ಹೊರತಾಗಿಯೂ, ಸಿನಿಮಾ ಉತ್ತಮ ಪ್ರದರ್ಶನ ನೀಡಿತು. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 177 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್ ಬಾಬು ಅವರ ಅಭಿಮಾನಿಗಳು ನಿರೀಕ್ಷಿಸಿದಂತೆ ಪವರ್ಫುಲ್ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಇದೊಂದು ಮಾಸ್ ಆ್ಯಕ್ಷನ್ ಸಿನಿಮಾ ಆಗಿದ್ದು, ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಸಿನಿಮಾ ಯಶಸ್ಸು ಕಂಡಿದೆ. ಮಹೇಶ್ ಪಾತ್ರ 'ರಮಣ'ನ ಸುತ್ತ ಕಥೆ ಸುತ್ತುತ್ತದೆ. ಚಿತ್ರಮಂದಿರಗಳಲ್ಲಿ ಒಟಿಟಿಗೆ ಎಂಟ್ರಿ ಕೊಡುತ್ತಿರುವುದು ಸಾಕಷ್ಟು ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಖಲೇಜಾ ಮತ್ತು ಅಥಡುಗಳಂತಹ ಸಿನಿಮಾ ಕೊಟ್ಟ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್ನ ಮೂರನೇ ಚಿತ್ರವಿದು.
ಇದನ್ನೂ ಓದಿ: 'ಗಿಚ್ಚಿ-ಗಿಲಿಗಿಲಿ' ಮತ್ತೆ ಶುರು; ವೀಕ್ಷಕರಿಗೆ ಮನರಂಜನೆಯ ರಸದೌತಣ
ಇನ್ನು ಶ್ರೀಲೀಲಾ ಇದೇ ಮೊದಲ ಬಾರಿ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡಿದ್ದಾರೆ. ನಟಿಯ ವಯಸ್ಸು ಕೇವಲ 22. ಕಳೆದ ಐದು ವರ್ಷಗಳಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಸದ್ಯ ಟಾಲಿವುಡ್ ನೆಲದಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಕೈಯಲ್ಲೀಗ ಹಲವು ಪ್ರಾಜೆಕ್ಟ್ಗಳಿವೆ.
ಇದನ್ನೂ ಓದಿ: ಕಾಶ್ಮೀರ ಕಣಿವೆಗೆ ಹಿಮದ ಹೊದಿಕೆ: ಫೋಟೋಗಳನ್ನು ನೋಡಿ