ಹುಬ್ಬಳ್ಳಿ (ಧಾರವಾಡ): ಕಳೆದ ಶುಕ್ರವಾರ ರಾಜ್ಯಾದ್ಯಂತ ಚಿಕ್ಕಣ್ಣ ಮುಖ್ಯಭೂಮಿಕೆಯ 'ಉಪಾಧ್ಯಕ್ಷ' ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ರಾಜ್ಯವ್ಯಾಪಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿನ್ನೆಲೆ ನಟ ಚಿಕ್ಕಣ್ಣ ಧನ್ಯವಾದ ಹೇಳುತ್ತಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಉಪಾಧ್ಯಕ್ಷ ಚಿತ್ರಕ್ಕೀಗ ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬರುವ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಮುಖ್ಯಪಾತ್ರದಲ್ಲಿ ನನ್ನ ಮೊದಲ ಚಿತ್ರ ಇದಾಗಿದ್ದು, ಶ್ರೀ ಸಿದ್ದಾರೂಢರ ಹಾಗೂ ಶ್ರೀ ಚಾಮುಂಡಿ ತಾಯಿ ಆಶೀರ್ವಾದದಿಂದ ಸಿನಿಮಾಗೆ ರಾಜ್ಯವ್ಯಾಪಿ ಒಳ್ಳೆಯ ಬೆಂಬಲ ಸಿಗುತ್ತಿದೆ. ಬರುವ ದಿನಗಳಲ್ಲಿ ಕಾಮಿಡಿ ವಿಥ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರಗಳನ್ನು ಮತ್ತಷ್ಟು ಮಾಡುತ್ತೇವೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಉಪಾಧ್ಯಕ್ಷ ಚಿತ್ರವನ್ನು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವಾರ ಇದಕ್ಕೆ ಮತ್ತೆ 50ಕ್ಕೂ ಹೆಚ್ಚು ಚಿತ್ರಮಂದಿರಗಳು ಹೆಚ್ಚುವರಿ ಆಗಿವೆ. ಒಟ್ಟು 222 ಥಿಯೇಟರ್ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಸಿನಿ ಪ್ರೇಮಿಗಳು ಕುಟುಂಬ ಸಮೇತರಾಗಿ ಬಂದು ಉಪಾಧ್ಯಕ್ಷ ವೀಕ್ಷಿಸುತ್ತಿದ್ದಾರೆ. ಇದು ಬಹಳ ಸಂತಸದ ಸಂಗತಿ. ಕಲೆಕ್ಷನ್ ಕೂಡ ಒಳ್ಳೆಯ ರೀತಿ ಸಾಗಿದೆ ಎಂದು ಚಿಕ್ಕಣ್ಣ ಹರ್ಷ ವ್ಯಕ್ತಪಡಿಸಿದರು. ಈವರೆಗೆ, ಯಾರೆಲ್ಲಾ ಬಂದು ಸಿನಿಮಾ ನೋಡಿಲ್ಲವೋ, ಅವರೆಲ್ಲರೂ ಕುಟುಂಬ ಸಮೇತರಾಗಿ ಬಂದು ಚಿತ್ರಕ್ಕೆ ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.
''ಸಿನಿಮಾ ಅದ್ಧೂರಿಯಾಗಿ ಒಂದು ವಾರ ಪೂರ್ಣಗೊಳಿಸಿದೆ. ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರ ಬಹಳ ಚೆನ್ನಾಗಿ ಓಡುತ್ತಿದೆ. ಸಂಪೂರ್ಣ ಕರ್ನಾಟಕದಾದ್ಯಂತ ಉತ್ತಮ ರೆಸ್ಪಾನ್ಸ್ ಇದೆ. ವಿಶೇಷವಾಗಿ ಉತ್ತರ ಕರ್ನಾಟಕ ಮಂದಿ ಇಷ್ಟು ದೊಡ್ಡ ಯಶಸ್ಸನ್ನು ನನಗೆ ತಂದುಕೊಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಇನ್ನೂ ಉತ್ತಮ ಸಿನಿಮಾಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪ್ರೀತಿ, ಅಭಿಮಾನ, ಬೆಂಬಲ ಹೀಗೆ ಇರಲಿ. ಮಾಧ್ಯಮದವರ ಸಹಕಾರ ಕೂಡ ಬಹಳ ಚೆನ್ನಾಗಿತ್ತು. ಮುಂದೆಯೂ ಇರಲಿ. ಇದು ಮೊದಲ ಹೆಜ್ಜೆ. ಇನ್ನೂ ಬಹಳಷ್ಟು ಇವೆ'' ನಟ ಚಿಕ್ಕಣ್ಣ.
ಇದನ್ನೂ ಓದಿ: 'ಫೇಕ್ ಡೆತ್ ನ್ಯೂಸ್'; ಪೂನಂ ಪಾಂಡೆಗೆ ಸೆಲೆಬ್ರಿಟಿಗಳಿಂದ ಛೀಮಾರಿ, ನಟಿ ಪರ ನಿಂತ ಆರ್ಜಿವಿ!
ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಮೂಡಿಬರುತ್ತಿವೆ. 2023ರ ಕೊನೆಯಲ್ಲಿ ತೆರೆಕಂಡ ಕಾಟೇರ ಸಿನಿಮಾದ ಯಶಸ್ಸಿನ ಮೂಲಕ ಸ್ಯಾಂಡಲ್ವುಡ್ನ 2024 ಆರಂಭವಾಗಿದೆ. ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಿವೆ. ಇದೇ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಕೂಡ ಯಶಸ್ಸು ಕಂಡಿದ್ದು, ಮತ್ತಷ್ಟು ಒಳ್ಳೆ ಸಿನಿಮಾಗಳಿಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ ಗೀತಾ ಭಾರತಿ ಭಟ್ ನಟನೆಯ 'ರವಿಕೆ ಪ್ರಸಂಗ'