ದಿಲ್ಜಿತ್ ದೊಸಾಂಜ್ ಹಾಗೂ ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಚಮ್ಕಿಲಾ' ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಸೋಮವಾರ ನೆಟ್ಫ್ಲಿಕ್ಸ್ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ಚಿತ್ರದ ತಯಾರಕರು ಚಮ್ಕಿಲಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಬಹುನಿರೀಕ್ಷಿತ ಬಯೋಪಿಕ್ ಚಮ್ಕಿಲಾ ಏಪ್ರಿಲ್ 12 ರಂದು ಒಟಿಟಿ ಫ್ಲ್ಯಾಟ್ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ರಿಲೀಸ್ ಆಗಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ "ವಾದ್ಯ ನುಡಿಸುವಾಗ ಒಂದು ವಾತಾವರಣ ನಿರ್ಮಾಣವಾಗುತ್ತದೆ, ಅಂತಹುದೇ ಸ್ಟೈಲ್ನಲ್ಲಿ ಚಮ್ಕಿಲಾ ಇರಲಿದೆ,@imtiazaliofficial ಅವರ #AmarSinghChamkila ಏಪ್ರಿಲ್ 12 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ತೆರೆಗೆ ಬರುತ್ತಿದೆ" ಎಂದು ಬರೆದು ಕೊಂಡಿದ್ದಾರೆ.
ಸಿನಿಮಾದ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಖುಷಿ ಆಗಿದ್ದು, ಕೆಲವು ಅಭಿಮಾನಿಗಳು ಸಿನಿಮಾವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, "ರೆಹಮಾನ್- ಇಮ್ತಿಯಾಜ್-ಇರ್ಷಾದ್, ಹೈವೇ, ತಾಮಾಶಾ ಸಿನಿಮಾಗಳಿಗೆ ಜೊತೆಯಾಗಿದ್ದರು. ಈಗ ರಾಕ್ಸ್ಟಾರ್, ಇದಕ್ಕೆ ದಿಲ್ಜಿತ್ ಕೂಡ ಸೇರಿಕೊಂಡಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ.
ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಮ್ಕಿಲಾ' ಬಯೋಪಿಕ್ನಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ದಿಲ್ಜಿತ್ ದೋಸಾಂಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಪಂಜಾಬ್ ಮೂಲದ ರಾಕ್ಸ್ಟಾರ್ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನದ ಇದುವರೆಗೆ ಹೇಳದ ನೈಜ ಕಥೆಯನ್ನು ಹೊಂದಿದೆ. 1980ರ ದಶಕದಲ್ಲಿ ಕಡು ಬಡತನದಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಸಾಧನೆ, ಹಾಗೂ 27ನೇ ವಯಸ್ಸಿಗೆ ಹತ್ಯೆಯಾಗಿ ಜೀವನ ಅಂತ್ಯಗೊಂಡ ಪರಿಯನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಅವರ ಕಾಲದಲ್ಲಿ ಚಮ್ಕಿಲಾ ಅವರು ಹೈಯೆಸ್ಟ್ ಸೆಲ್ಲಿಂಗ್ ಸಂಗೀತಗಾರರಾಗಿದ್ದರು. ಮಾತ್ರವಲ್ಲ ಈಗಲೂ ಪಂಜಾಬ್ನ ಉತ್ತನ ಲೈವ್ ಸ್ಟೇಜ್ ಪ್ರದರ್ಶಕರನ್ನು ಒಬ್ಬರು ಎಂದೇ ಪರಿಗಣಿಸಲಾಗಿದೆ.
ಚಿತ್ರದ ಬಗ್ಗೆ ಹೇಳಿರುವ ನಿರ್ದೇಶಕ ಇಮ್ತಿಯಾಜ್ ಅಲಿ, "ಅಮರ್ ಸಿಂಗ್ ಚಮ್ಕಿಲಾನ, ಒಬ್ಬ ಮಾಸ್ ಅಪ್ರತಿಮ ಸಂಗೀತ ತಾರೆಯ ಜೀವನವನ್ನು ತೆರೆಯ ಮೇಲೆ ತರುವುದು ನನಗೆ ಒಂದು ಅನನ್ಯ ಪ್ರಯಾಣವಾಗಿತ್ತು. ಪ್ರತಿಭಾವಂತ ದಿಲ್ಜಿತ್ ದೋಸಾಂಜ್ನನ್ನು ಬಿಟ್ಟು ಬೇರೆ ನಟರನ್ನು ಕೇಳಲು ಸಾಧ್ಯವಿಲ್ಲ. ಅದಲ್ಲದೇ ಪ್ರತಿಭಾವಂತ ನಟಿ ಪರಿಣಿತಿ ಚೋಪ್ರಾ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಕೆಲವು ಲೈವ್ ಹಾಡುಗಳನ್ನು ಸೇರಿಸಲಾಗಿದೆ. ಜನ ಇಂದಿಗೂ ಮರೆಯದ ಚಮ್ಕಿಲಾ ಅವರ ಜನಪ್ರಿಯ ಹಾಡುಗಳನ್ನು ಇದರಲ್ಲಿ ಸೇರಿಸಲಾಗಿದೆ. ನೆಟ್ಫ್ಲಿಕ್ಸ್ ಚಿತ್ರ ಬಿಡುಗಡೆಗೆ ನಮ್ಮ ಜೊತೆ ಕೈಜೋಡಿಸಿದ್ದು, ಈ ಮೂಲಕ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಬಳಿ ನಮ್ಮ ಸಿನಿಮಾ ತಲುಪಲಿದೆ. ಇದಕ್ಕೆ ನಾನು ನೆಟ್ಫ್ಲಿಕ್ಸ್ಗೆ ಧನ್ಯವಾದ ಹೇಳುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ವರುಣ್ ತೇಜ್ ಸಿನಿಮಾ ಆಯ್ಕೆ ಬಗ್ಗೆ ಚಿರಂಜೀವಿ ಮೆಚ್ಚುಗೆ; ಸೋದರಳಿಯನ ದಶಕದ ಜರ್ನಿ ಮೆಲುಕು ಹಾಕಿದ ಮೆಗಾಸ್ಟಾರ್