ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ದ್ವಾರಕೀಶ್ ಒಬ್ಬರು. ಇವರು ನಟನಾಗಿ ನಕ್ಕು ನಲಿಸಿದ ಹೃದಯಗಳು ಅಸಂಖ್ಯ. ನಿರ್ಮಾಪಕರಾಗಿ ಕಂಡ ಸೋಲು, ಗೆಲುವು, ಸಾಹಸ ಒಂದು ಸಾಮಾನ್ಯ ಜೀವ ಮಾಡುವಂಥದ್ದಲ್ಲ. ನಿರ್ದೇಶಕನಾಗಿಯೂ ಕೂಡಾ ಅಲ್ಲಲ್ಲಿ ಸಿನಿಮಾಭಿಮಾನಿಗಳು ಮೆಚ್ಚುವ ಕೆಲಸ ಮಾಡಿದ್ದಾರೆ.
ಮೊದಲ ಅವಕಾಶ: ದ್ವಾರಕೀಶ್ ಅವರು 1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಶಾಲೆ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆ ವಿದ್ಯಾಭ್ಯಾಸ ನಡೆಸಿದರು. ಬಾಲ್ಯದಿಂದಲೂ ಇವರ ಮನದಲ್ಲಿ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು. 'ಇವ ಸಿನಿಮಾಗೆ ಓಡಿ ಹೋಗದಿರಲಿ' ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ (ಈಗಲೂ ಮೈಸೂರಿನ ಗಾಂಧಿ ಚೌಕದಲ್ಲಿ ಅಸ್ತಿತ್ವದಲ್ಲಿರುವ) ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರಂತೆ. ಆದರೆ ದ್ವಾರಕೀಶ್‌ಗೆ ಸಿನಿಮಾ ಮೇಲಿನ ಬಯಕೆ ಹೋಗಲಿಲ್ಲ. ಇದಕ್ಕಾಗಿ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರಂತೆ. ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು, ಆಮೇಲೆ ಸಿನಿಮಾ ಮಾತು ಎಂದರಂತೆ. ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ ‘ವೀರಸಂಕಲ್ಪ’ದಲ್ಲಿ ದ್ವಾರಕೀಶ್‌ಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.
ಮೊದಲ ಶಾಟ್: ವೀರಸಂಕಲ್ಪ ಅನುಭವದ ಬಗ್ಗೆ ದ್ವಾರಕೀಶ್ ಹೇಳಿದ ಒಂದು ಮಾತು ನೆನಪಾಗುತ್ತದೆ. ಅವರು ಎದುರಿಸಿದ ಮೊದಲ ಶಾಟ್ ಸಿಂಹಾಸನ ಹತ್ತುವುದಾಗಿತ್ತಂತೆ. ಆ ಶಾಟ್ ಮುಗಿದ ತಕ್ಷಣ ಮೇಲೆ ಕುಳಿತಿದ್ದ ಕ್ಯಾಮರಾಮನ್ ನಿರ್ದೇಶಕರಿಗೆ, "ಸಾರ್ ಬೇಕಿದ್ದರೆ ಈಗಲೇ ಸಿಂಹಾಸನ ಇಳಿಯೋದು ಕೂಡಾ ಶಾಟ್ ತೆಗೆದುಬಿಡೋಣ, ಎರಡೂ ಕೆಲಸ ಒಟ್ಟಿಗೆ ಆಗಿಬಿಡುತ್ತೆ" ಅಂದಿದ್ದರಂತೆ. ಈ ಮಾತನ್ನು ದ್ವಾರಕೀಶ್ ತಮ್ಮ ಸಿನಿಮಾ ಬದುಕಿನಲ್ಲೂ ತಾದ್ಯಾತ್ಮವಾಗಿ ಕಂಡಿದ್ದಾರೆ!.
ಬಹಳಷ್ಟು ವೇಳೆ ಒಬ್ಬ ವ್ಯಕ್ತಿ ಸೋತಾಗ ಅವನು ಕೆಟ್ಟ ಚಿತ್ರ ಮಾಡಿದ ಎಂದೋ, ಅವನು ಯಾರೊಡನೆಯೋ ಕಿತ್ತಾಡಿದಾಗ ಇಷ್ಟಪಟ್ಟ ಬಣದ ಕಡೆ ವಾಲಿಕೊಂಡು ಈತ ಯಾವಾಗಲೂ ತರಲೆ ಅಂತಲೋ ಜನ ಅಭಿಪ್ರಾಯ ಕ್ರೋಡೀಕರಣಕ್ಕೆ ತೊಡಗುವುದು ಸಾಮಾನ್ಯ. ದ್ವಾರಕೀಶ್ ಅಂತಹ ಸಂದರ್ಭಗಳಲ್ಲಿ ಬಹಳಷ್ಟು ವೇಳೆ ನಮಗೆ ಕಂಡಿದ್ದಾರೆ. ಆದರೆ, ದ್ವಾರಕೀಶ್ ಎಂಬ ಪ್ರತಿಭಾವಂತ ಮತ್ತು ಸಾಹಸಿಯನ್ನು ಈ ಎಲ್ಲ ಪರಿಧಿಗಳ ಆಚೆ ನೋಡುವ ಅಗತ್ಯವಿದೆ.
ತಮ್ಮನ್ನು ತಾವೇ ಚಿತ್ರದ ವಸ್ತುವನ್ನಾಗಿಸಿಕೊಂಡಿದ್ದರು: ಅಂದು ದ್ವಾರಕೀಶ್ ತಮ್ಮ ನೆಗೆಟಿವ್ ಅಂಶಗಳನ್ನು ತಾವೇ ಅಣಕಿಸುತ್ತಾ, ಅದನ್ನೇ ತನ್ನ ಪಾಸಿಟಿವ್ ಶಕ್ತಿಗಳನ್ನಾಗಿ ಮಾಡಿಕೊಂಡು ಮೇಲೆ ಬಂದವರು. ನಾನು ಎತ್ತರವಿಲ್ಲ, ‘ಕುಳ್ಳ’, ನನಗೆ ಬುದ್ಧಿ ಬೆಳೆದಿಲ್ಲ ಹಾಗಾಗಿ ‘ಪೆದ್ದ’, ಮಾತು ಸರಿಯಾಗಿ ಆಡೋಲ್ಲ ಹಾಗಾಗಿ ‘ಮೊದ್ದು’, ಮೂಗು ಸರಿ ಇಲ್ಲ ಹಾಗಾಗಿ ‘ಸೊಟ್ಟ’, ಸುಂದರತೆ ಇಲ್ಲ ‘ಜೀರೋ’ ಹೀಗೆ ಅವರು ತಮ್ಮನ್ನು ತಾವೇ ಗುರುತಿಸಿಕೊಂಡು, ಅದನ್ನೇ ತಮ್ಮ ಚಿತ್ರದ ವಸ್ತುವನ್ನಾಗಿಸಿಕೊಂಡು ಒಂದೊಂದೇ ಮೆಟ್ಟಿಲು ನಿರ್ಮಿಸಿಕೊಂಡು ಮೇಲೇರಿದರು.
‘ವೀರ ಸಂಕಲ್ಪ’, ‘ಸತ್ಯ ಹರಿಶ್ಚಂದ್ರ’, ‘ಪರೋಪಕಾರಿ’, ‘ಕ್ರಾಂತಿ ವೀರ’, ‘ಮೇಯರ್ ಮುತ್ತಣ್ಣ’, ‘ದೂರದ ಬೆಟ್ಟ’, ‘ಗಾಂಧೀನಗರ’, 'ಬಾಳು ಬೆಳಗಿತು', ‘ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ನೀವು ಅಂದಿನ ಬಹಳಷ್ಟು ಚಿತ್ರಗಳಲ್ಲಿ ರಾಜ್ ಕುಮಾರ್ - ದ್ವಾರಕೀಶ್ ಜೋಡಿಯನ್ನು ಮೆಚ್ಚುಗೆಯಿಂದ ಕಾಣಬಹುದಿತ್ತು.
ಸಿನಿಮಾ ನಿರ್ಮಾಣಕ್ಕೂ ಸೈ: ಚಿತ್ರರಂಗಕ್ಕೆ ಬಂದ ಮೂರು ನಾಲ್ಕು ವರ್ಷಗಳಲ್ಲೇ ಸಿನಿಮಾ ನಿರ್ಮಾಣಕ್ಕೂ ದ್ವಾರಕೀಶ್ ಕೈ ಹಾಕಿದರು. ‘ಮೇಯರ್ ಮುತ್ತಣ್ಣ’ ಚಿತ್ರದ ಅವರ ನಿರ್ಮಾಣ ‘ಸಿದ್ಧಲಿಂಗಯ್ಯ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು. ಅದಕ್ಕೂ ಮುಂಚೆ ದ್ವಾರಕೀಶ್ ಹಲವರೊಂದಿಗೆ ಕೂಡಿ ‘ಮಮತೆಯ ಬಂಧನ’ ಎಂಬ ಚಿತ್ರ ಕೂಡಾ ನಿರ್ಮಿಸಿದ್ದರು. ಮುಂದೆ ದ್ವಾರಕೀಶ್ ‘ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ’ ದಂತಹ ಚಿತ್ರ ನಿರ್ಮಿಸಿ ತಾವೇ ಹೀರೋ ಕೂಡಾ ಆದರು. ಅಂದು ಆ ಚಿತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ ತೆಲುಗು, ತಮಿಳು, ಮಲಯಾಳ, ಮರಾಠಿ ಭಾಷೆಗಳಲ್ಲಿ ಕೂಡಾ ನಿರ್ಮಾಣವಾಗಿ ದ್ವಾರಕೀಶ್ ಪ್ರಚಂಡ ಯಶಸ್ಸುಗಳಿಸಿದ್ದರು.
ರಸಪೂರ್ಣ ಪಾತ್ರಗಳು: ದ್ವಾರಕೀಶ್ ನಟನೆಯ ಕೆಲವೊಂದು ಚಿತ್ರಗಳಲ್ಲಿನ ಅವರ ಮುದ್ದು ಮುದ್ದಿನ ಅಭಿನಯದ ಬಗ್ಗೆ ಹೇಳುವುದಾದರೆ ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ಹಣದ ಬದಲು ಜೇಬಲ್ಲಿ ಜಿರಳೆ ಭದ್ರಪಡಿಸಿಕೊಂಡು ಹೋಟೆಲಿನಲ್ಲಿ ಎಲ್ಲಾ ತರಹದ ತಿಂಡಿ ತಿನ್ನೋದು; ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಕೊಳದ ಬಳಿ ಕುಳಿತು, ನೀರು ಬಿಸಿ ಆಗ್ಲಿ ಅಂತ ಕಾಯ್ತಿದೀನಿ ಅನ್ನೋದು; ‘ಬಹದ್ದೂರ್ ಗಂಡು’ ಚಿತ್ರದಲ್ಲಿ ಪದೇ ಪದೇ ‘ನಾವೇನ್ ಮೂಲಂಗಿ ತಿನ್ತಾ ಇರ್ತೀವಾ’ ಅನ್ನೋದು; ಭಕ್ತ ಕುಂಬಾರ’ದಲ್ಲಿ ಕಣ್ಣು ಕಾಣದಂತೆ ಅವತಾರ ಮಾಡಿಕೊಂಡಿದ್ದ ಬಾಲಣ್ಣನಿಗೆ ಮಹಾಸ್ವಾಮಿ ಸಂಕೋಚ ಬೇಡ ಇನ್ನೊಂದ್ಸ್ವೊಲ್ಪ ಬಡಿಸಿಕೊಳ್ಳಿ” ಅಂತ ಹೇಳುತ್ತಾ, ತಾಯಿ ಊಟ ಬಡಿಸಿ ಆಚೆ ಹೋದ ನಂತರ ಅದನ್ನೆಲ್ಲಾ ತಾನೇ ತಿನ್ನೋದು, ‘ಗಲಾಟೆ ಸಂಸಾರ’ದಲ್ಲಿ ಮಂಜುಳಾ ಹಿಂದೆ ಭಗ್ನ ಪ್ರೇಮಿಯಾಗಿ ಅಲೆದಾಡೋದು; ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ‘ತದ್ದಿನ ದಿನ ದಿನ ತದ್ಧಿನ ನಾಳೆ ನಮ್ಮ ತಿಥಿ ದಿನ’ ಅಂತ ಕುಣಿಯೋದು; ‘ಮುದ್ಧಿನ ಮಾವ’ ಚಿತ್ರದಲ್ಲಿ ಭಿಕ್ಷುಕನಾಗಿ, ಮನೆಯ ಒಡೆಯ ದೊಡ್ಡಣ್ಣನಿಗೆ ನಾವಿಬ್ರೂ ಬೇರೆ ಬೇರೆ ತರದಲ್ಲಿ ಭಿಕ್ಷೆ ಬೇಡೋರೇ ಅನ್ನೋದು; ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ ನಿನ್ಮನೆ ಕಾಯಾ, ಎಂಟ್ಎಮ್ಮೆ ಕರೆಯಾ, ಸೆರಗನ್ನು ಹೊದೆಯೇ ನೀ ಗುಜ್ಜಾನೆ ಮರಿಯೇ’ ಅಂತ ವೈಶಾಲಿಯನ್ನು ರೇಗಿಸೋದು; ಗುರು ಶಿಷ್ಯರು ಚಿತ್ರದಲ್ಲಿ ‘ದೊಡ್ಡವರೆಲ್ಲಾ ಜಾಣರಲ್ಲ’ ಎಂದು ಹಾಡಿ ಕುಣಿದು ತನ್ನಂತ ಗಾಂಫ ಮಂಗಗಳಿಗೆ ನಾಯಕನಾಗಿರೋದು ಇಂಥಹ ರಸಪೂರ್ಣ ಗಳಿಗೆಗಳು ಅಸಂಖ್ಯಾತ.
ನಿರ್ಮಿಸಿದ ಚಿತ್ರಗಳು: ದ್ವಾರಕೀಶ್ ಚಿತ್ರ ನಿರ್ಮಾಪಕನಾಗಿ ಮಾಡಿದ ಕೆಲಸಗಳು ಮಹತ್ವಪೂರ್ಣವಾದವು. ಅವರು ಇದುವರೆಗೆ ನಿರ್ಮಿಸಿದ ಒಟ್ಟು ಚಿತ್ರಗಳು 52. ಅವುಗಳಲ್ಲಿ ‘ಮೇಯರ್ ಮುತ್ತಣ್ಣ’, ‘ಕುಳ್ಳ ಏಜೆಂಟ್ ೦೦೦’, 'ಭಾಗ್ಯವಂತರು', ‘ಕಳ್ಳ ಕುಳ್ಳ’, ‘ಮನೆ ಮನೆ ಕಥೆ’, ‘ಇಂದಿನ ರಾಮಾಯಣ’, ‘ಕಿಟ್ಟು ಪುಟ್ಟು’, ‘ಸಿಂಗಾಪೂರಿನಲ್ಲಿ ರಾಜಾ ಕುಳ್ಳ’, ‘ಗುರು ಶಿಷ್ಯರು’, ‘ಆಪ್ತಮಿತ್ರ’, ‘ಆನಂದ ಭೈರವಿ’ ಕಂಡ ಯಶಸ್ಸು ಅವು ಹೊಂದಿದ್ದ ಮನರಂಜನಾತ್ಮಕ ಅಂಶಗಳು, ತಾಂತ್ರಿಕತೆ, ಉತ್ತಮ ಹಾಡುಗಳು ಇವೆಲ್ಲವೂ ಮರೆಯುವಂತದ್ದಲ್ಲ. ಅವರೇ ನಿರ್ದೇಶಿಸಿದ ‘ನೀ ಬರೆದ ಕಾದಂಬರಿ’, ‘ರಾಯರು ಬಂದರು ಮಾವನ ಮನೆಗೆ’ ಅಂತಹ ಚಿತ್ರಗಳು ಕೂಡಾ ಉತ್ತಮವಾಗಿದ್ದವು. ಎ.ಆರ್.ರೆಹಮಾನ್ ಮೊದಲು ಕೆಲಸ ಮಾಡಿದ್ದು ‘ನೀ ಬರೆದ ಕಾದಂಬರಿ’ ಚಿತ್ರದ ಸಂದರ್ಭದಲ್ಲಿ, ಆ ಚಿತ್ರದ ಸಂಗೀತ ನಿರ್ದೇಶಕರಾದ ವಿಜಯಾನಂದ್ ಅವರ ಸಹಾಯಕನಾಗಿ. ಈ ವಿಷಯವನ್ನು ಸ್ವಯಂ ಎ.ಆರ್.ರೆಹಮಾನ್ ಅವರೇ ಬಹಿರಂಗಪಡಿಸಿದ್ದರು.
ಇವೆಲ್ಲಕ್ಕೂ ಮಿಗಿಲಾಗಿ ದ್ವಾರಕೀಶ್ ತಾವು ನಿರ್ಮಾಪಕರಾಗಿ ಯಶಸ್ವಿಯಾಗಿದ್ದ ದಿನಗಳಲ್ಲಿ ಕಲಾವಿದರನ್ನು ಅತ್ಯಂತ ಗೌರವಯುತವಾಗಿ, ಶಿಸ್ತು ಗೌರವಗಳಿಂದ, ಸಂಭಾವನೆಗಳಿಂದ ಯೋಗ್ಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿತ್ತು. ಹಾಗಾಗಿ ಹಾಸ್ಯನಟ ಮಾತ್ರರಾಗಿದ್ದರೂ ಅವರೊಂದಿಗೆ ನಾಯಕನಟಿಯರಾಗಿ ನಟಿಸಲು ಮಂಜುಳಾ, ರಾಧಿಕಾ, ಜಯಚಿತ್ರಾ ಅಂತಹ ಪ್ರಸಿದ್ಧ ತಾರೆಯರು ಕೂಡಾ ಹಿಂದು ಮುಂದೆ ನೋಡಲಿಲ್ಲ ಎಂಬುದು ಅತಿಮುಖ್ಯವಾದ ಅಂಶ.
ತ್ರಿವಿಕ್ರಮನಾಗಿ ಬೆಳೆದು ನಿಂತ ಪರಿ: ಕನ್ನಡದಲ್ಲಿ ಮಾತ್ರವಲ್ಲದೆ ರಜನೀಕಾಂತ್, ಶ್ರೀದೇವಿ ಅಂತಹ ಪ್ರಸಿದ್ಧ ತಾರೆಯರಿದ್ದ ಇತರ ಭಾಷೆಯ ಚಿತ್ರಗಳನ್ನು ಕೂಡಾ ದ್ವಾರಕೀಶ್ ನಿರ್ಮಿಸಿದ್ದರು. ಒಬ್ಬ ಸಾಮಾನ್ಯ ನಟನಾಗಿ ಕೆಲವೊಂದು ರೂಪಾಯಿ ಸಂಭಾವನೆಗೆ ಚಿತ್ರರಂಗದಲ್ಲಿ ನಟಿಸಲು ಬಂದ ಈ ಪುಟ್ಟ ಹುಡುಗ ಹೀಗೆ ತ್ರಿವಿಕ್ರಮನಾಗಿ ಬೆಳೆದು ನಿಂತ ಪರಿ ಅಭಿನಂದನೀಯ.
ಯಶಸ್ಸಿನ ನಡೆಯಲ್ಲಿ ನಡೆದವನಿಗೆ ಸೋಲುಗಳು ಯಾವಾಗ ಬಂದು ತಟ್ಟುತ್ತದೋ ಎಂದು ಹೇಳುವುದು ಕಷ್ಟ. ಒಳ್ಳೆಯ ಚಿತ್ರ ಅನ್ನೋದು "ತಾನೇ ತಾನಾಗಿ ಆಗುವಂತದ್ದು, ನಾವು ಮಾಡಿದೆವು ಎಂದು ಅಹಂಕಾರಪಡುವುದಲ್ಲ" ಎನ್ನುವ ದ್ವಾರಕೀಶ್ ಅವರಿಗೆ ತಮ್ಮ ಸೋಲುಗಳನ್ನು ಮಾತ್ರ ತಾವೇ ಮಾಡಿಕೊಂಡದ್ದು ಎಂಬುದರ ಬಗ್ಗೆ ಪರಿಜ್ಞಾನ ಇತ್ತು ಎಂಬುದು ಕೂಡಾ ಮಹತ್ವದ ಅಂಶವೇ. “ಗುರು ಶಿಷ್ಯರು” ಅಂತಹ ಚಿತ್ರ ಮಾಡಿ ಯಶಸ್ಸಿನ ತುತ್ತ ತುದಿಯಲ್ಲಿದ್ದ ನಾನು “ಆಫ್ರಿಕಾದಲ್ಲಿ ಶೀಲಾ” ಮಾಡಿ “ಮೈಯೆಲ್ಲಾ ಸಾಲ” ಎನ್ನುವಂತಾದೆ ಎಂದು ನುಡಿಯುವ ದ್ವಾರಕೀಶ್ ಅವರ ಮಾತುಗಳು ಮಾರ್ಮಿಕವಾದದ್ದು ಮತ್ತು ಸೋಲಿನಲ್ಲೂ ಹಾಸ್ಯ ಪ್ರಜ್ಞೆಯನ್ನು ಮೇಳೈಸಿಕೊಂಡದ್ದು.
ಕಳೆದುಕೊಂಡಿದ್ದ ಜೀವನ ಮತ್ತೆ ಪಡೆದ ಕ್ಷಣ: ಹಲವು ಬಾರಿ ಕಿತ್ತಾಡಿದರೂ, ಹಲವು ಬಾರಿ ಒಟ್ಟಿಗೆ ಗೆದ್ದು ಒಬ್ಬರಿಗೊಬ್ಬರಿಗೆ ಆಂತರ್ಯದಲ್ಲಿ ಪ್ರೀತಿ ಹೊಂದಿದ್ದ ದ್ವಾರಕೀಶ್-ವಿಷ್ಣುವರ್ಧನ್ ಜೋಡಿ, ‘ಆಪ್ತ ಮಿತ್ರ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡದ್ದು ಮಾತ್ರವಲ್ಲದೆ, ದ್ವಾರಕೀಶ್ ತಾವು ಕಳೆದುಕೊಂಡಿದ್ದ ಜೀವನವನ್ನು ಮತ್ತೆ ಪಡೆಯುವಂತಾಯಿತು.
ದ್ವಾರಕೀಶ್ ಚಿತ್ರರಂಗದಲ್ಲಿ ಗೆದ್ದಿದ್ದಾರೆ, ಸೋತಿದ್ದಾರೆ, ಹಲವೊಮ್ಮೆ ವಿಚಿತ್ರವಾಗೂ ಕಂಡಿದ್ದಾರೆ. ಆದರೆ, ಇವೆಲ್ಲಕ್ಕೂ ಮಿಗಿಲಾಗಿ ನಾವು ಅವರ ಪ್ರತಿಭೆ, ಸಾಹಸ ಪ್ರವೃತ್ತಿ, ನೀಡಿದ ಕೊಡುಗೆಗಳನ್ನು ಕೂಡಾ ಗಮನಿಸುವುದು ಮುಖ್ಯವಾದದ್ದು. ಹಲವಾರು ಚಿತ್ರಗಳಲ್ಲಿ ರಾಜ್ ಜೋಡಿಯಾಗಿ, ವಿಷ್ಣು ಜೋಡಿಯಾಗಿ ನಟಿಸಿದ್ದು, ಕನ್ನಡದ ಶ್ರೇಷ್ಠ ಹಾಸ್ಯ ನಟರ ಪರಂಪರೆಯಲ್ಲಿ ಒಬ್ಬರಾಗಿದ್ದು, ಸಿದ್ಧಲಿಂಗಯ್ಯ, ಭಾರ್ಗವ ಅಂತಹವರನ್ನು ನಿರ್ದೇಶಕರಾಗಿ ಮಾಡಿದ್ದು, ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದು, ವಿದೇಶದ ವೈಭೋಗಗಳನ್ನು ಚಿತ್ರ ರಸಿಕರು ಕನ್ನಡ ಚಿತ್ರಗಳಲ್ಲಿ ಕಾಣುವಂತೆ ಮಾಡಿದ್ದು, ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದು, ಪೌರಾಣಿಕ ಚಿತ್ರಗಳು ಮರೆಯಾಗಿದ್ದ ಕಾಲದಲ್ಲಿ ‘ಗುರು ಶಿಷ್ಯರು’ ಅಂತಹ ಚಿತ್ರ ನಿರ್ಮಿಸಿದ್ದು, ‘ಆಪ್ತಮಿತ್ರ’ದಂತಹ ಅಪೂರ್ವ ಯಶಸ್ಸಿನ ಚಿತ್ರ ನಿರ್ಮಿಸಿದ್ದು ಇವೆಲ್ಲಾ ದ್ವಾರಕೀಶರ ಅಮೋಘ ಇತಿಹಾಸದ ವಿವಿಧ ಕಾಲಘಟ್ಟಗಳು.
ಕೊನೆಯದಾಗಿ ನಿರ್ಮಾಣ ಮಾಡಿದ ಸಿನಿಮಾ: ದ್ವಾರಕೀಶ್ ಅವರು ಪತ್ರಿಕೆಯೊಂದರಲ್ಲಿ ‘ಬೆಳ್ಳಿ ತೆರೆಯ ಹಿಂದೆ’ ಎಂಬ ಅಂಕಣದ ಮೂಲಕ ತಮ್ಮ ಬದುಕು ಮತ್ತು ಚಿತ್ರರಂಗದ ಕುರಿತಾಗಿ ಧಾರಾವಾಹಿಯಾಗಿ ಬರೆದರು. ಆ ಅಂಕಣದಲ್ಲಿ ಕೊನೆಯಲ್ಲಿ ಅವರು ಹೀಗೆ ಹೇಳುವ ಮಾತು - “ಆದಷ್ಟೂ ಸತ್ಯ ಬರೆದಿದ್ದೇನೆ. ಕೆಲವನ್ನು ಮುಚ್ಚಿಟ್ಟಿದ್ದೇನೆ”. ಇತ್ತೀಚಿನ ವರ್ಷದಲ್ಲಿ ಕೂಡಾ ಅವರು ಆಟಗಾರ, ಚೌಕ, ಅಮ್ಮ ಐ ಲವ್ ಯು ಚಿತ್ರ ನಿರ್ಮಿಸಿದರು. ದ್ವಾರಕೀಶ್ ಕೊನೆಯದಾಗಿ ನಿರ್ಮಾಣ ಮಾಡಿದ ಸಿನಿಮಾ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ. ಈ ಚಿತ್ರ ಅಂದುಕೊಂಡಂತೆ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ದ್ವಾರಕೀಶ್ ಗೆ ನಷ್ಟ ಆಯಿತು. ಇದರ ಪರಿಣಾಮ ಹೆಚ್ ಎಸ್ಆರ್ ಲೇಔಟ್ನಲ್ಲಿ ಐಷಾರಾಮಿ ಮನೆಯನ್ನು ಮಾರಿಕೊಳ್ಳುವ ಪರಿಸ್ಥಿತಿಗೆ ಬಂದರು. ಅಲ್ಲಿಂದ ದ್ವಾರಕೀಶ್ ಅನಾರೋಗ್ಯಕ್ಕೆ ಒಳಗಾದರು. ಹೀಗೆ ದ್ವಾರಕೀಶರದು ನಿರಂತರವಾಗಿ ಕಷ್ಟದ ನಡುವೆಯೂ ಮೇಲೇಳುವ ಸಾಹಸಮಯ ಸಿನಿ ಬದುಕು.