ಭಾರತೀಯ ವಿಮಾ ವಲಯವು 34 ಸಾಮಾನ್ಯ ವಿಮಾ (ಹೆಚ್ಚಾಗಿ ಜೀವ ವಿಮೆಯೇತರ ಎಂದು ಕರೆಯಲಾಗುತ್ತದೆ) ಕಂಪನಿಗಳು ಮತ್ತು 24 ಜೀವ ವಿಮಾ ಕಂಪನಿಗಳನ್ನು ಒಳಗೊಂಡಿದೆ. ಜೀವ ವಿಮಾ ಕಂಪನಿಗಳಲ್ಲಿ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮಾತ್ರ ಸಾರ್ವಜನಿಕ ವಲಯದ ಉದ್ಯಮ (ಪಿಎಸ್ಇ) ಆಗಿದೆ. ಸಾಮಾನ್ಯ ವಿಮಾ ವಿಭಾಗದಲ್ಲಿ ಆರು ಪಿಎಸ್ಇಗಳಿವೆ. ಇದಲ್ಲದೆ, ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ ಆರ್ಇ) ಎಂದು ಕರೆಯಲ್ಪಡುವ ಏಕೈಕ ರಾಷ್ಟ್ರೀಯ ಮರು-ವಿಮಾದಾರ ಕಂಪನಿಯಿದೆ.
ಕಡಿಮೆ ವಿಮೆ ವ್ಯಾಪ್ತಿ ಹೊಂದಿರುವ ಭಾರತ: ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅತ್ಯಂತ ಕಡಿಮೆ ವಿಮೆ ಹೊಂದಿರುವ ದೇಶವಾಗಿದೆ. ಭಾರತದಲ್ಲಿ ವಿಮೆ ಪಡೆದವರ ಪ್ರಮಾಣವು (ಒಟ್ಟು ದೇಶೀಯ ಉತ್ಪನ್ನ-ಜಿಡಿಪಿಯ ಶೇಕಡಾವಾರು ಪ್ರೀಮಿಯಂ) ಜಾಗತಿಕ ಸರಾಸರಿ ಶೇ 6.8 ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹಾಗೆಯೇ ವಿಮಾ ಸಾಂದ್ರತೆಯು (ಪಾವತಿಸಿದ ತಲಾ ಪ್ರೀಮಿಯಂ) ಭಾರತದಲ್ಲಿ 92 ಡಾಲರ್ ಆಗಿದ್ದರೆ, ಜಾಗತಿಕ ಸರಾಸರಿ 853 ಡಾಲರ್ ಆಗಿದೆ. 2022 ರಲ್ಲಿ ಒಟ್ಟು ಪ್ರೀಮಿಯಂ, ನಾನ್-ಲೈಫ್ ಮತ್ತು ಲೈಫ್ ವಿಮಾ ವಿಭಾಗಗಳಲ್ಲಿ 3 ಟ್ರಿಲಿಯನ್ ಡಾಲರ್ ವಹಿವಾಟಿನೊಂದಿಗೆ ಅಮೆರಿಕವು ವಿಶ್ವದ ಅತಿದೊಡ್ಡ ವಿಮಾ ಮಾರುಕಟ್ಟೆಯಾಗಿದೆ. ಚೀನಾ ಮತ್ತು ಯುಕೆ ನಂತರದ ಸ್ಥಾನಗಳಲ್ಲಿವೆ. ಈ ಮೂರು ಮಾರುಕಟ್ಟೆಗಳು ಒಟ್ಟಾಗಿ ಜಾಗತಿಕ ಪ್ರೀಮಿಯಂನ ಶೇ 55 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಭಾರತವು 131 ಬಿಲಿಯನ್ ಡಾಲರ್ ಪ್ರೀಮಿಯಂ ಮೌಲ್ಯದೊಂದಿಗೆ 10 ನೇ ಸ್ಥಾನದಲ್ಲಿದೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಶೇ 1.9ರಷ್ಟು ಪಾಲು ಹೊಂದಿದೆ. ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತವು 2032 ರ ವೇಳೆಗೆ ವಿಶ್ವದ ಆರನೇ ಅತಿದೊಡ್ಡ ವಿಮಾ ಮಾರುಕಟ್ಟೆಯಾಗುವ ನಿರೀಕ್ಷೆಯಿದೆ.
ಅಗಾಧ ಬೆಳವಣಿಗೆ ಅವಕಾಶ: ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಜೀವ ವಿಮಾ ಉತ್ಪನ್ನಗಳು ಉಳಿತಾಯ ಸಂಬಂಧಿತವಾಗಿವೆ ಹಾಗೂ ಸಣ್ಣ ಪ್ರಮಾಣದ ವಿಮಾ ರಕ್ಷಣಾ ಮೊತ್ತವನ್ನು ಹೊಂದಿವೆ. ಅಂದರೆ ಕುಟುಂಬದ ಪ್ರಮುಖ ಆದಾಯ ಗಳಿಸುವ ವ್ಯಕ್ತಿಯು ಅಕಾಲಿಕ ಮರಣಕ್ಕೀಡಾದರೆ ಅಂಥ ಕುಟುಂಬಗಳು ಗಮನಾರ್ಹ ಹಣಕಾಸು ಸಂಕಷ್ಟಕ್ಕೀಡಾಗುವ ಸಾಧ್ಯತೆಯಿರುತ್ತದೆ.
ಇದಲ್ಲದೆ ನೈಸರ್ಗಿಕ ವಿಪತ್ತುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಶೇ 93ರಷ್ಟು ವಿಮೆ ಇಲ್ಲ. ನೀತಿ ಆಯೋಗವು 2021 ರಲ್ಲಿ ತನ್ನ ವರದಿಯಲ್ಲಿ ಬಡವರಲ್ಲದವರಲ್ಲಿಯೂ ಭಾರತದಲ್ಲಿ 40 ಕೋಟಿ ವ್ಯಕ್ತಿಗಳು ಯಾವುದೇ ಆರೋಗ್ಯ ವಿಮೆ ಹೊಂದಿಲ್ಲ ಎಂದು ಹೇಳಿದೆ. ಅಲ್ಲದೆ, ಭಾರತದಲ್ಲಿ ಇಂದು ಶೇ 90 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಈ ವಿಭಾಗವನ್ನು "ಕಾಣೆಯಾದ ಮಧ್ಯಮ ವರ್ಗ" ಎಂದು ಕರೆಯಲಾಗುತ್ತದೆ. ಈ ವರ್ಗವು ಸರ್ಕಾರದ ಸಬ್ಸಿಡಿ ವಿಮೆಯ ವ್ಯಾಪ್ತಿಗೆ ಒಳಪಡುವಷ್ಟು ಬಡವರಾಗಿಲ್ಲ ಮತ್ತು ಅದೇ ಸಮಯದಲ್ಲಿ ಅವರು ವಿಮೆ ಖರೀದಿಸುವಷ್ಟು ಶ್ರೀಮಂತರೂ ಆಗಿಲ್ಲ.
ಈ ವರ್ಗಕ್ಕಾಗಿ ಉತ್ತಮವಾಗಿ ವಿನ್ಯಾಸಗೊಳಿಸಿದ, ಸೂಕ್ತ ಬೆಲೆಯ, ಸ್ವಯಂಪ್ರೇರಿತ ಮತ್ತು ಕೊಡುಗೆ ನೀಡುವ ವಿಮಾ ಉತ್ಪನ್ನಗಳನ್ನು ಜಾರಿ ಮಾಡಿದಲ್ಲಿ 2047 ರ ವೇಳೆಗೆ "ಎಲ್ಲರಿಗೂ ವಿಮೆ" ಗುರಿಯನ್ನು ಸಾಧಿಸಲು ಸಾಧ್ಯವಾಗಬಹುದು.
ಈ ಹಿನ್ನೆಲೆಯಲ್ಲಿ, ಜಯಂತ್ ಸಿನ್ಹಾ ನೇತೃತ್ವದ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ (ಇನ್ನು ಮುಂದೆ, ಸಮಿತಿ) ಸಂಸತ್ತಿನ ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ "ವಿಮಾ ಕ್ಷೇತ್ರದ ಕಾರ್ಯಕ್ಷಮತೆ ಪರಿಶೀಲನೆ ಮತ್ತು ನಿಯಂತ್ರಣ" (Performance Review and Regulation of Insurance Sector) ಎಂಬ ಶೀರ್ಷಿಕೆಯ ವರದಿಯನ್ನು ಮಂಡಿಸಿತು. ಇದು ದೇಶದ ವಿಮಾ ಕ್ಷೇತ್ರದಲ್ಲಿ ಕಂಪನ ಸೃಷ್ಟಿಸಿದೆ. ಒಟ್ಟಾರೆಯಾಗಿ, ಸಮಿತಿಯ ಶಿಫಾರಸುಗಳು ವಿಮಾ ಉದ್ಯಮ ಮತ್ತು ಗ್ರಾಹಕರ ದೃಷ್ಟಿಕೋನದಿಂದ ಪ್ರಶಂಸನೀಯವಾಗಿವೆ.
ವಿಮಾ ವ್ಯಾಪ್ತಿಯನ್ನು ವಿಸ್ತರಿಸಲು ಸೂಕ್ತ ನಿಯಮಗಳನ್ನು ರೂಪಿಸಲು ಸರ್ಕಾರವು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ)ದ ಅಡಿಯಲ್ಲಿ ಸಮಿತಿಯೊಂದನ್ನು ರಚಿಸುವ ಮೂಲಕ, ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚೆಗಳನ್ನು ನಡೆಸಬೇಕಿದೆ.
ಚರ್ಚೆ ನಡೆಯಬೇಕಾದ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ:
ಎಲ್ಲಾ ವಿಮಾ ವಿಭಾಗಗಳಿಗೆ ಸಂಯೋಜಿತ ಪರವಾನಗಿ ನೀಡುವುದು: ವಿಮಾ ಕಂಪನಿಗಳಿಗೆ ಸಂಯೋಜಿತ ಪರವಾನಗಿಗೆ ಅವಕಾಶ ನೀಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಇದು ವಿಮಾದಾರರಿಗೆ ಜೀವ ಮತ್ತು ಜೀವೇತರ ವಿಮಾ ಉತ್ಪನ್ನಗಳನ್ನು ಒಂದೇ ಕಂಪನಿಯ ಅಡಿಯಲ್ಲಿ ನೀಡಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಐಆರ್ ಡಿಎಐನ ನಿಯಮಗಳು ವಿಮಾದಾರರಿಗೆ ಜೀವ ಮತ್ತು ಜೀವೇತರ ವಿಮಾ ಉತ್ಪನ್ನಗಳನ್ನು ಒಂದೇ ಕಂಪನಿಯ ಅಡಿಯಲ್ಲಿ ನೀಡಲು ಅನುಮತಿ ನೀಡುವುದಿಲ್ಲ.
ಸಂಯೋಜಿತ ಪರವಾನಗಿಯು ವಿಮಾ ಸಂಸ್ಥೆಗಳಿಗೆ ವೆಚ್ಚಗಳು ಮತ್ತು ಅನುಸರಣೆಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಮತ್ತು ಸಮಿತಿಯು ನಿರೀಕ್ಷಿಸಿದಂತೆ ಅಂತಹ ಪೂರ್ವಭಾವಿ ಸುಧಾರಣೆಯು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಮೌಲ್ಯವನ್ನು ನೀಡುತ್ತದೆ. ಉದಾಹರಣೆಗೆ ಜೀವನ, ಆರೋಗ್ಯ ಮತ್ತು ಉಳಿತಾಯವನ್ನು ಒಳಗೊಂಡಿರುವ ಒಂದೇ ಪಾಲಿಸಿಯನ್ನು ಜಾರಿಗೊಳಿಸಬಹುದು. ಇದು ಕಾರ್ಯರೂಪಕ್ಕೆ ಬಂದರೆ ಗ್ರಾಹಕರು ಕಡಿಮೆ ಪ್ರೀಮಿಯಂ ಮತ್ತು ಸುಲಭ ಕ್ಲೈಮ್ಗಳೊಂದಿಗೆ ಒಂದೇ ವಿಮಾ ಕಂಪನಿಯಿಂದ ಆಲ್-ಇನ್-ಒನ್ ವಿಮೆಯನ್ನು ಪಡೆಯಬಹುದು.
ವಿಮಾ ಏಜೆಂಟರಿಗೆ ಮುಕ್ತ ವ್ಯವಸ್ಥೆ: ವಿಮಾ ಉತ್ಪನ್ನಗಳ ವ್ಯಾಪ್ತಿಯ ವಿಸ್ತರಣೆ ಮತ್ತು ದೇಶದಲ್ಲಿ ಬಲವಾದ ವಿಮಾ ವಿತರಣಾ ಮೂಲಸೌಕರ್ಯ ಒದಗಿಸಲು ವಿಮಾ ಏಜೆಂಟರಿಗೆ ಮುಕ್ತ ವ್ಯವಸ್ಥೆಯೊಂದನ್ನು ಪರಿಚಯಿಸಲು ಸಮಿತಿ ಶಿಫಾರಸು ಮಾಡಿದೆ. ಇಂಥ ಸುಧಾರಣೆಯು ವಿಮಾ ಏಜೆಂಟರಿಗೆ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಅನೇಕ ವಿಮಾ ಕಂಪನಿಗಳೊಂದಿಗೆ ಕೆಲಸ ಮಾಡಲು ದಾರಿ ಮಾಡಿಕೊಡುತ್ತದೆ. ಪ್ರಸ್ತುತ ಓರ್ವ ವಿಮಾ ಏಜೆಂಟ್ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದು ಜೀವ, ಒಂದು ಜೀವೇತರ ಮತ್ತು ಒಂದು ಆರೋಗ್ಯ ವಿಮಾ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬಹುದಾಗಿದೆ.
ಜಿಎಸ್ಟಿ ಇಳಿಸಲು ಸೂಕ್ತ ಸಮಯ: ವಿಮೆ ಕೇವಲ ವಾಣಿಜ್ಯ ಉತ್ಪನ್ನವಲ್ಲ; ವಾಸ್ತವವಾಗಿ ಇದು ಸಾಮಾಜಿಕ ಸೇವೆಯೂ ಆಗಿದೆ. ಹೆಚ್ಚಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ದರಗಳನ್ನು ಕಡಿಮೆ ಮಾಡಬೇಕೆಂದು ವಿಮಾ ಉದ್ಯಮವು ದೀರ್ಘಕಾಲದಿಂದ ವಾದಿಸುತ್ತಿದೆ. ಆರೋಗ್ಯ ವಿಮೆಯ ಪ್ರೀಮಿಯಂ, ಟರ್ಮ್ ಇನ್ಶೂರೆನ್ಸ್ ಯೋಜನೆಗಳು ಮತ್ತು ಯುನಿಟ್-ಲಿಂಕ್ಡ್ ವಿಮಾ ಯೋಜನೆಗಳು ಸೇರಿದಂತೆ ಹಣಕಾಸು ಸೇವೆಗಳಿಗೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.
ಹೆಚ್ಚಿನ ಜಿಎಸ್ಟಿ ದರ ಪ್ರೀಮಿಯಂ ಹೊರೆ ಹೆಚ್ಚಾಗುತ್ತದೆ. ಇದರಿಂದ ಜನ ವಿಮೆ ಪಡೆಯಲು ಹಿಂದೇಟು ಹಾಕಲು ಕಾರಣವಾಗುತ್ತದೆ ಎಂದು ಸಮಿತಿ ಹೇಳಿದೆ. ಸಾಮಾನ್ಯ ಜನರಿಗೆ ವಿಮೆ ಕೈಗೆಟುಕುವಂತಾಗಲು ಎಲ್ಲಾ ವಿಮಾ ಉತ್ಪನ್ನಗಳಿಗೆ ವಿಶೇಷವಾಗಿ ಹಿರಿಯ ನಾಗರಿಕರ ಆರೋಗ್ಯ ವಿಮಾ ಚಿಲ್ಲರೆ ಪಾಲಿಸಿಗಳು ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ - ಪಿಎಂಜೆಎವೈ (ಪ್ರಸ್ತುತ 5 ಲಕ್ಷ ರೂ.) ಅಡಿಯಲ್ಲಿ ಸೂಚಿಸಲಾದ ಮಿತಿಗಳವರೆಗೆ ಸೂಕ್ಷ್ಮ ವಿಮಾ ಪಾಲಿಸಿಗಳು ಮತ್ತು ಅವಧಿ ಪಾಲಿಸಿಗಳಿಗೆ ಜಿಎಸ್ಟಿ ದರವನ್ನು ಕಡಿಮೆ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.
ಸಮಾನ ಅವಕಾಶದ ಮಾರುಕಟ್ಟೆ ಸೃಷ್ಟಿ ಅಗತ್ಯ: ವಿಮಾ ಕ್ಷೇತ್ರದ ಪಿಎಸ್ಇಗಳು ಸರ್ಕಾರ ನಡೆಸುವ ವಿಮಾ ಯೋಜನೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಇದರಿಂದ ಆ ಕಂಪನಿಗಳ ಲಾಭದಾಯಕತೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಸಮಿತಿ ಹೇಳಿದೆ. ಸಮಾನ ಅವಕಾಶದ ವೇದಿಕೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಅಂತಹ ನಿಬಂಧನೆಗಳನ್ನು ಎಲ್ಲಾ ಕಂಪನಿಗಳಿಗೆ ಏಕರೂಪವಾಗಿ ಅನ್ವಯಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಇದಲ್ಲದೆ, ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಮಾತ್ರ ಅನ್ವಯವಾಗುವ ಜಿಎಸ್ಟಿ ಮೇಲಿನ ಮೂಲದಲ್ಲಿ ತೆರಿಗೆ ಕಡಿತದ (ಟಿಡಿಎಸ್) ಅಸಂಗತತೆಯನ್ನು ಸಮಿತಿಯು ಗಮನಿಸಿದೆ. ಈ ಪಿಎಸ್ಇಗಳನ್ನು ಕೇಂದ್ರ ಸರಕು ಮತ್ತು ಸೇವೆಗಳ (ಸಿಜಿಎಸ್ಟಿ) ಕಾಯ್ದೆಯ ಸೆಕ್ಷನ್ 51 ರಲ್ಲಿ ಸೇರಿಸಲಾಗಿರುವುದರಿಂದ, ಒಟ್ಟು ಮೌಲ್ಯ 2.50 ಲಕ್ಷ ರೂ. ಮೀರುವ ವಿಮಾ ಸಂದರ್ಭದಲ್ಲಿ ತೆರಿಗೆ ವಿಧಿಸಬಹುದಾದ ಸರಕುಗಳು ಅಥವಾ ಸೇವೆಗಳ ಪೂರೈಕೆದಾರರು ಮಾಡಿದ ಅಥವಾ ಅವರಿಗೆ ಬಂದ ಪಾವತಿಯಿಂದ ಅಥವಾ ಎರಡರಿಂದಲೂ ಶೇ 2ರ ದರದಲ್ಲಿ ಟಿಡಿಎಸ್ ಕಡಿತಗೊಳಿಸಬೇಕಾಗುತ್ತದೆ.
ವಿಪತ್ತು ಪೀಡಿತ ಪ್ರದೇಶಗಳಿಗೆ ವಿಪತ್ತು ವಿಮೆ: ಭಾರತದಲ್ಲಿ ನೈಸರ್ಗಿಕ ವಿಪತ್ತುಗಳು 2018-22 ರ ಐದು ವರ್ಷಗಳ ಅವಧಿಯಲ್ಲಿ 32.94 ಬಿಲಿಯನ್ ಡಾಲರ್ (2,73,500 ಕೋಟಿ ರೂ.) ವಿಮೆಯಿಲ್ಲದ ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ. ಇದು ದೇಶದಲ್ಲಿ ಕಡಿಮೆ ವಿಮಾ ವ್ಯಾಪ್ತಿ ಇರುವುದನ್ನು ಸೂಚಿಸುತ್ತದೆ ಎಂದು ಸ್ವಿಸ್ ರೇ ಹೇಳಿದೆ. 1900 ರ ನಂತರ ಅತಿ ಹೆಚ್ಚು ನೈಸರ್ಗಿಕ ವಿಪತ್ತುಗಳನ್ನು ಕಂಡ ದೇಶಗಳ ಪೈಕಿ ಭಾರತವು ಯುಎಸ್ ಮತ್ತು ಚೀನಾದ ನಂತರ ಮೂರನೇ ಸ್ಥಾನದಲ್ಲಿದೆ. 2022 ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತವು ಶಾಖ ಮತ್ತು ಶೀತ ಅಲೆಗಳು, ಚಂಡಮಾರುತಗಳು ಮತ್ತು ಮಿಂಚಿನಿಂದ ಹಿಡಿದು ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತಗಳವರೆಗೆ ಪ್ರತಿದಿನ ನೈಸರ್ಗಿಕ ವಿಪತ್ತುಗಳಿಗೆ ಸಾಕ್ಷಿಯಾಗಿದೆ.
ಈ ವಿಪತ್ತುಗಳು 2,700 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, 1.8 ಮಿಲಿಯನ್ ಹೆಕ್ಟೇರ್ ಬೆಳೆ ಪ್ರದೇಶವನ್ನು ಹಾನಿಗೊಳಿಸಿವೆ. ಈ ವಿಪತ್ತುಗಳಿಂದ 4.16 ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ಸುಮಾರು 70,000 ಜಾನುವಾರುಗಳು ಸಾವಿಗೀಡಾಗಿವೆ ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಮತ್ತು ಡೌನ್ ಟು ಅರ್ಥ್ ಜರ್ನಲ್ ವರದಿ ತಿಳಿಸಿದೆ. ಹೀಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಸಹಾಯದಿಂದ ವಿಪತ್ತುಗಳಿಂದ ಹಾನಿಗೀಡಾಗುವ ಪ್ರದೇಶಗಳಲ್ಲಿ ಮನೆಗಳು ಮತ್ತು ಆಸ್ತಿಗಳಿಗೆ, ವಿಶೇಷವಾಗಿ ಕೃಷಿ ಸಮುದಾಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ (ಎಂಎಸ್ಎಂಇ) ಕ್ಷೇತ್ರಕ್ಕೆ ಅನುಕೂಲವಾಗುವಂಥ ಆರ್ಥಿಕವಾಗಿ ದುರ್ಬಲ ಗುಂಪುಗಳಿಗೆ ವಿಮೆ ನೀಡಲು ವಿಪತ್ತು ವಿಮೆಯನ್ನು ಹೇಗೆ ಪರಿವರ್ತಿಸಬಹುದು ಎಂಬುದನ್ನು ಅನ್ವೇಷಿಸಲು ಇದು ಸೂಕ್ತ ಸಮಯವಾಗಿದೆ. ಮೊದಲಿಗೆ, ವಿಪತ್ತು ಪೀಡಿತ ಪ್ರದೇಶಗಳಿಗೆ ಸಬ್ಸಿಡಿ ಪ್ರೀಮಿಯಂನೊಂದಿಗೆ ಪಿಎಸ್ಇ ಸಾಮಾನ್ಯ ವಿಮಾ ಕಂಪನಿಗಳಲ್ಲಿ ವಿಶೇಷ ವಿಮಾ ವ್ಯವಹಾರವನ್ನು ಆರಂಭಿಸಬಹುದು.
ರಸ್ತೆ ಅಪಘಾತ ವಿಮೆ: ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ಟಿಎಚ್) ಒಂದೆರಡು ತಿಂಗಳಲ್ಲಿ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಎಲ್ಲಾ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನು ಪರಿಚಯಿಸಲು ಉದ್ದೇಶಿಸಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಸಾವುಗಳ ಕೆಟ್ಟ ದಾಖಲೆಯನ್ನು ಹೊಂದಿದೆ. ಭಾರತದಲ್ಲಿ ಪ್ರತಿ ಗಂಟೆಗೆ 19 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಸರ್ಕಾರದ ವರದಿಯೊಂದು ತಿಳಿಸಿದೆ.
2022 ರಲ್ಲಿ ದೇಶಾದ್ಯಂತ 4.61 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು ಇದರಲ್ಲಿ 1.68 ಲಕ್ಷ ಜನ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ವಾಹನಗಳು, ವಿಶೇಷವಾಗಿ ವಾಣಿಜ್ಯ ವಾಹನಗಳು ಯಾವುದೇ ವಿಮಾ ರಕ್ಷಣೆಯಿಲ್ಲದೆ ಭಾರತೀಯ ರಸ್ತೆಗಳಲ್ಲಿ ಚಲಿಸುತ್ತಿವೆ. ಇದು ರಸ್ತೆ ಅಪಘಾತಗಳು ಮತ್ತು ಹಾನಿಗಳ ಸಂದರ್ಭದಲ್ಲಿ ಮಾಲೀಕರು ಮತ್ತು ಮೂರನೇ ವ್ಯಕ್ತಿಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಸಮಿತಿಯು ಕಂಡುಕೊಂಡಿದೆ. ವಿಮಾ ಮಾಹಿತಿ ಬ್ಯೂರೋ ಆಫ್ ಇಂಡಿಯಾದ (ಐಐಬಿ) ಮೋಟಾರು ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 2020 ರ ವೇಳೆಗೆ ಭಾರತೀಯ ರಸ್ತೆಗಳಲ್ಲಿ 25.33 ಕೋಟಿ ವಾಹನಗಳಲ್ಲಿ, ವಿಮೆ ಇಲ್ಲದ ವಾಹನಗಳ ಪ್ರಮಾಣವು ಸುಮಾರು ಶೇ 56 ರಷ್ಟಿದೆ.
ವಾಣಿಜ್ಯ ವಾಹನಗಳಿಂದ ಉಂಟಾಗುವ ಅಪಘಾತಗಳಿಂದಾಗಿ ಅನೇಕ ಮುಗ್ಧ ಜನತೆ ಬಳಲುತ್ತಿದ್ದಾರೆ. ಅಪಘಾತದ ನಂತರ ಸಿಗಬೇಕಾದ ಸರಿಯಾದ ವಿಮಾ ರಕ್ಷಣೆ ಇಲ್ಲವಾಗಿದೆ. ಅದರಂತೆ ಐಐಬಿ, ಎಂ ಪರಿವಹನ್ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ದತ್ತಾಂಶಗಳ ಮೂಲಕ ದತ್ತಾಂಶ ಏಕೀಕರಣವನ್ನು ಹೆಚ್ಚಿಸುವ ಮೂಲಕ ರಾಜ್ಯಗಳಾದ್ಯಂತ ಇ-ಚಲನ್ ಜಾರಿಗೆ ತರಲು ಸಮಿತಿಯು ಶಿಫಾರಸು ಮಾಡಿದೆ.
ನಾಲ್ಕು ಸಾಮಾನ್ಯ ವಿಮಾ-ಪಿಎಸ್ಇಗಳನ್ನು ಬಲಪಡಿಸುವ ಅಗತ್ಯ: ವಿಮಾ ಉದ್ಯಮದ ಬಂಡವಾಳ ಅಗತ್ಯತೆಗಳನ್ನು ಪೂರೈಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸರ್ಕಾರದ ಪರವಾಗಿ ವಿವಿಧ ಮೆಚ್ಯೂರಿಟಿಗಳ "ಆನ್-ಟ್ಯಾಪ್" ಬಾಂಡ್ಗಳನ್ನು ಬಿಡುಗಡೆ ಮಾಡಬಹುದು ಎಂದು ಸಮಿತಿ ಪ್ರತಿಪಾದಿಸಿದೆ. ಈ ಪಿಎಸ್ಇಗಳ ನಿರ್ವಹಣೆಯಲ್ಲಿ ಸ್ಪರ್ಧಾತ್ಮಕತೆ ಮತ್ತು ದಕ್ಷತೆ, ಪರಿಣಾಮಕಾರಿತ್ವ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಸುಧಾರಿಸಲು ಮತ್ತು ಸಾಕಷ್ಟು ಬಂಡವಾಳ ಮತ್ತು ಪ್ರತಿಭೆಯನ್ನು ಆಕರ್ಷಿಸಲು ಅನುವು ಮಾಡಿಕೊಡಲು ಸೂಕ್ತ ಕಾರ್ಯತಂತ್ರದ ಮಾರ್ಗಸೂಚಿಯು ಈಗಿನ ಅಗತ್ಯವಾಗಿದೆ.
ಆರೋಗ್ಯಕ್ಕಾಗಿ ತಮ್ಮ ಜೇಬಿನಿಂದಲೇ ಹೆಚ್ಚಿನ ಖರ್ಚು ಮಾಡುವ ಭಾರತೀಯರು: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) 2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ- ಹೆಚ್ಚಿನ ಭಾರತೀಯರು ಆರೋಗ್ಯ ಚಿಕಿತ್ಸೆಗಾಗಿ ವಿಮೆ ಇಲ್ಲದೆ ತಮ್ಮ ಜೇಬಿನಿಂದಲೇ ಖರ್ಚು (ಒಒಪಿಇ) ಮಾಡುವುದರಿಂದ ವಾರ್ಷಿಕವಾಗಿ 55 ಮಿಲಿಯನ್ ಭಾರತೀಯರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಸಮಿತಿ ಕಂಡುಹಿಡಿದಿದೆ. ಸರ್ಕಾರದ ಅಂದಾಜಿನ ಪ್ರಕಾರ, ಆರೋಗ್ಯ ವೆಚ್ಚಗಳಿಂದಾಗಿ ಪ್ರತಿವರ್ಷ 63 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಮತ್ತಷ್ಟು ಬಡವರಾಗುತ್ತಿದ್ದಾರೆ.
ಆರೋಗ್ಯ ಸರಕು ಅಥವಾ ಸೇವೆಯ ಸಂಪೂರ್ಣ ವೆಚ್ಚವನ್ನು ವಿಮೆ ಭರಿಸದಿದ್ದಾಗ ರೋಗಿಯು ನೇರವಾಗಿ ಭರಿಸುವ ವೆಚ್ಚಗಳನ್ನು ಒಒಪಿಇ ಒಳಗೊಂಡಿದೆ. ಭಾರತದಲ್ಲಿ ಆರೋಗ್ಯದ ಮೇಲಿನ ಒಒಪಿಇ (48.2%) ಆರೋಗ್ಯದ ಮೇಲಿನ ಸರ್ಕಾರದ ವೆಚ್ಚಕ್ಕಿಂತ (40.6%) ಹೆಚ್ಚಾಗಿದೆ, ಇದನ್ನು ಸರ್ಕಾರವು ತನ್ನ ಆರ್ಥಿಕ ಸಮೀಕ್ಷೆ 2022 ರಲ್ಲಿ ಒಪ್ಪಿಕೊಂಡಿದೆ. ಒಒಪಿಇ ಸಾಮಾನ್ಯವಾಗಿ ಭಾರತದಲ್ಲಿ ಹೆಚ್ಚಾಗಿದ್ದರೂ ಆರ್ಥಿಕವಾಗಿ ದುರ್ಬಲ ರಾಜ್ಯಗಳಲ್ಲಿ ಇದು ಹೆಚ್ಚು.
ಉದಾಹರಣೆಗೆ ನೋಡುವುದಾದರೆ- ಯುಪಿಯಲ್ಲಿ ರೋಗಿಗಳ ಒಒಪಿಇ ಶೇ 71 ಆಗಿದ್ದರೆ, ಬಂಗಾಳ ಮತ್ತು ಕೇರಳಗಳಲ್ಲಿ ಇದು ತಲಾ ಶೇ 68ರಷ್ಟಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ದೆಹಲಿ ಈ ಐದು ರಾಜ್ಯಗಳು 2022-23ರಲ್ಲಿ ಒಟ್ಟು ಆರೋಗ್ಯ ವಿಮಾ ಪ್ರೀಮಿಯಂನಲ್ಲಿ ಸುಮಾರು ಮೂರನೇ ಎರಡರಷ್ಟು ಕೊಡುಗೆ ನೀಡಿದ್ದರೆ, ಉಳಿದ ರಾಜ್ಯಗಳು ಕೇವಲ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡಿವೆ. ಈ ಸಮಸ್ಯೆಯನ್ನು ಪರಿಹರಿಸದೆ ರಾಷ್ಟ್ರೀಯ ಆರೋಗ್ಯ ನೀತಿ 2017 ರ ಕಲ್ಪನೆಯಂತೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಶಂಸನೀಯ ಗುರಿಯನ್ನು ಭಾರತವು ಸಾಧಿಸಲು ಸಾಧ್ಯವಿಲ್ಲ.
(ಲೇಖನ: ಡಾ.ಎನ್.ವಿ.ಆರ್.ಜ್ಯೋತಿ ಕುಮಾರ್, ಪ್ರೊಫೆಸರ್ ಆಫ್ ಕಾಮರ್ಸ್, ಮಿಜೋರಾಂ ಸೆಂಟ್ರಲ್ ಯೂನಿವರ್ಸಿಟಿ)
ಇದನ್ನೂ ಓದಿ : ಅಯೋಧ್ಯೆಗೆ ಬೇಕು 8,500 ರಿಂದ 12,500 ಬ್ರಾಂಡೆಡ್ ಹೋಟೆಲ್ ಕೊಠಡಿಗಳು