ನವದೆಹಲಿ: ಭಾರತವು ಜಾಗತಿಕ 'ಆರ್ಥಿಕ ಶಕ್ತಿ'ಯಾಗಿ ವಿಕಸನಗೊಳ್ಳಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಉದ್ಯಮಗಳು ಸ್ಪರ್ಧೆ ಒಡ್ಡುತ್ತಿವೆ ಎಂದು ಅವರು ಹೇಳಿದ್ದಾರೆ. ಭಾರತವು ತ್ವರಿತವಾಗಿ ವಿಶ್ವದ ಆರ್ಥಿಕ ಶಕ್ತಿ ಕೇಂದ್ರವಾಗುವ ಹಾದಿಯಲ್ಲಿದೆ. ದೇಶವು ಪ್ರಯಾಣಿಕ ವಾಹನಗಳಿಗೆ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ವಾಣಿಜ್ಯ ವಾಹನಗಳನ್ನು ತಯಾರಿಸುವಲ್ಲಿ ನಾವು ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಉದಯವಾಗಿದ್ದೇವೆ. ನಮ್ಮ ಉದ್ಯಮಗಳು ಜಾಗತಿಕವಾಗಿ ಸ್ಪರ್ಧೆ ಒಡ್ಡುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2024 ಅನ್ನು ಉದ್ದೇಶಿಸಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ. 2014ರಲ್ಲಿ ದೇಶದ ಬಂಡವಾಳ ವೆಚ್ಚ 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇತ್ತು. ಈಗ ಅದೇ ವೆಚ್ಚ 11 ಲಕ್ಷ ಕೋಟಿ ರೂ.ಗೆ ತಲುಪಿದೆ. ಇಂತಹ ಬೃಹತ್ ಬಂಡವಾಳ ವೆಚ್ಚದ ಘೋಷಣೆಯಿಂದ ಸಾಕಷ್ಟು ಅವಕಾಶಗಳು ಸಿಗಲಿವೆ. ಉದ್ಯಮಗಳು ಬಲಗೊಳ್ಳುವುದಷ್ಟೇ ಅಲ್ಲ. ಆರ್ಥಿಕತೆ ಚೇತರಿಕೆ ಕಾಣುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ರಸ್ತೆ, ರೈಲ್ವೆ, ಜಲಮಾರ್ಗ ಮತ್ತು ವಾಯುಮಾರ್ಗಗಳಂತಹ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಪುನರುಜ್ಜೀವನಕ್ಕಾಗಿ ಹೆಚ್ಚೆಚ್ಚು ಹೂಡಿಕೆ ಹರಿದು ಬರುತ್ತಿದೆ. ಈ ಮೂಲಕ ಮೂಲ ಸೌಕರ್ಯ ಅಭಿವೃದ್ಧಿ ಕಾಣುತ್ತಿದೆ ಎಂದು ಮೋದಿ ಬಣ್ಣಿಸಿದರು. ಎಲ್ಲ ವಲಯಗಳಲ್ಲಿ ಬೃಹತ್ ಹೂಡಿಕೆಯಿಂದಾಗಿ ರಸ್ತೆ, ರೈಲ್ವೆ, ಜಲಮಾರ್ಗ ಮತ್ತು ವಾಯುಮಾರ್ಗಗಳು ಸೇರಿದಂತೆ ಮತ್ತಷ್ಟು ವಲಯಗಳಲ್ಲಿ ಪುನಶ್ಚೇತನ ಕಂಡು ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ದೇಶದ ಮೂಲಸೌಕರ್ಯ ಅಭಿವೃದ್ಧಿಯು ಈಗ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದರು.
ಹೊಸ ವಿಮಾನ ನಿಲ್ದಾಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 4 ಲಕ್ಷ ಕಿಲೋಮೀಟರ್ ರಸ್ತೆ ಮಾರ್ಗ, 90,000 ಕಿಲೋಮೀಟರ್ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ, ಹೈಸ್ಪೀಡ್ ಕಾರಿಡಾರ್‌ಗಳನ್ನು ಮಾಡಲಾಗಿದೆ. 15 ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಇದೇ ವೇಳೆ ಪ್ರಧಾನಿ ಮೋದಿ ವಿವರಿಸಿದರು. ಈ ಬಾರಿಯ ಬಜೆಟ್‌ನಲ್ಲಿ, 40,000 ರೈಲು ಬೋಗಿಗಳ ಆಧುನೀಕರಣ ಘೋಷಿಸಲಾಗಿದೆ. ಇದು ಭಾರತೀಯ ರೈಲ್ವೆಯ ಚಿತ್ರಣವನ್ನು ಬದಲಾಯಿಸುತ್ತದೆ ಎಂದು ಪ್ರಧಾನಿ ಬಣ್ಣಿಸಿದರು.
ಇದನ್ನು ಓದಿ: "ಅಬ್ ಕಿ ಬಾರ್ ಚಾರ್ಸೌ ಪರ್ ಹೋ ರಹಾ...": ಮಲ್ಲಿಕಾರ್ಜುನ ಖರ್ಗೆ ಮಾತಿಗೆ ನಕ್ಕ ಪ್ರಧಾನಿ