ಚೆನ್ನೈ (ತಮಿಳುನಾಡು): 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಗೆ ಜನ ಸೂರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಬೆಂಬಲ ಘೋಷಿಸಿದ್ದಾರೆ. ಟಿವಿಕೆ ಮುಖ್ಯಸ್ಥ ವಿಜಯ್, ರಾಜ್ಯ ರಾಜಕೀಯದಲ್ಲಿ ಬದಲಾವಣೆ ಕಾಣಲು ಬಯಸುವ ಲಕ್ಷಾಂತರ ಜನರಿಗೆ ಹೊಸ ಭರವಸೆ ಆಗಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಬಣ್ಣಿಸಿದ್ದಾರೆ.
ಬುಧವಾರ ಟಿವಿಕೆಯ ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಶಾಂತ್ ಕಿಶೋರ್ ಭಾಗವಹಿಸಿ ಮಾತನಾಡಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ದ್ರಾವಿಡ ಪಕ್ಷಗಳನ್ನು ಸ್ಥಾನಪಲ್ಲಟ ಮಾಡುವ ಗುರಿ ಹೊಂದಿರುವ ವಿಜಯ್‌ಗೆ ಕಿಶೋರ ಸಲಹೆಗಾರರಾಗಿದ್ದಾರೆ.
ವಿಜಯ್ ಗೆ ತಂತ್ರಗಾರಿಕೆಯ ಅವಶ್ಯಕತೆ ಇಲ್ಲ- ಕಿಶೋರ್: ವಿಜಯ್‌ಗೆ ತಂತ್ರಗಾರಿಕೆಯ ಸಹಾಯದ ಅಗತ್ಯವಿಲ್ಲ. ನಾನು ಯಾವುದೇ ಪಕ್ಷ ಅಥವಾ ನಾಯಕರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಾಲ್ಕು ವರ್ಷಗಳ ಹಿಂದೆ ಘೋಷಿಸಿದ್ದೇನೆ. ಆದರೆ ವಿಜಯ್ ನನಗೆ ರಾಜಕೀಯ ನಾಯಕನಲ್ಲ. ಅವರು ತಮಿಳುನಾಡಿಗೆ ಹೊಸ ಭರವಸೆಯಾಗಿದ್ದಾರೆ. ಟಿವಿಕೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸುವ್ಯವಸ್ಥೆಯೊಂದನ್ನು ನೋಡಲು ಬಯಸುವ ಲಕ್ಷಾಂತರ ಜನರ ಚಳವಳಿಯಾಗಿದೆ. ಟಿವಿಕೆ ಮತ್ತು ವಿಜಯ್ ಬದಲಾವಣೆ ಪ್ರತಿಬಿಂಬಿಸುತ್ತಿದ್ದರೆ ಎಂದು ಪ್ರಶಾಂತ್ ಕಿಶೋರ್ ಪ್ರತಿಪಾದಿಸಿದರು.
ಡಿಎಂಕೆ ವಿರುದ್ಧ ಪ್ರಶಾಂತ್ ವಾಗ್ಬಾಣ: ಪ್ರಶಾಂತ್ ಕಿಶೋರ್ ಆಡಳಿತಾರೂಢ ಡಿಎಂಕೆಯ ಆಡಳಿತದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದರು. ಡಿಎಂಕೆಯ ಅಭಿವೃದ್ಧಿಯ ಮಾದರಿ ಎಂದರೆ ಭ್ರಷ್ಟಾಚಾರ, ರಾಜವಂಶ ಮತ್ತು ಕೋಮುವಾದವಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಡಿಎಂಕೆ- ಮೋದಿ ಸರ್ಕಾರದ ಹೋರಾಟಗಳು ಶಿಶುವಿಹಾರದ ಮಕ್ಕಳಾಟದಂತಿದೆ: ಮತ್ತೊಂದೆಡೆ, ತ್ರಿಭಾಷಾ ನೀತಿಯ ಇತ್ತೀಚಿನ ವಿವಾದದ ಕುರಿತು ಮಾತನಾಡಿದ ಟಿವಿಕೆ ಮುಖ್ಯಸ್ಥ ವಿಜಯ್, ಶಿಶುವಿಹಾರದ ವಿದ್ಯಾರ್ಥಿಗಳು ಹೋರಾಡುವಂತೆ ರಾಜ್ಯ ಮತ್ತು ಕೇಂದ್ರವು ಹೋರಾಡುತ್ತಿವೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಹಣವನ್ನು ನಿಲ್ಲಿಸಲಾಗಿದೆ. ಇದು ಎಲ್‌ಕೆಜಿ - ಯುಕೆಜಿ ವಿದ್ಯಾರ್ಥಿಗಳ ಹೋರಾಟದಂತಿದೆ. ನೀಡುವುದು ಅವರ ಜವಾಬ್ದಾರಿ; ಅದರ ಹಕ್ಕುಗಳನ್ನು ಪಡೆಯುವುದು ರಾಜ್ಯದ ಜವಾಬ್ದಾರಿ. ಈ ದೊಡ್ಡ ಸಮಸ್ಯೆಗಳ ನಡುವೆ, ಇಬ್ಬರು (ಬಿಜೆಪಿ ಮತ್ತು ಡಿಎಂಕೆ) ಹ್ಯಾಷ್‌ಟ್ಯಾಗ್‌ಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ವಿಜಯ್ ಲೇವಡಿ ಮಾಡಿದರು.
ರಾಜಕೀಯ ಜಮೀನುದಾರರಿಂದ ರಾಜ್ಯ ಮುಕ್ತಮಾಡುವುದೇ ನನ್ನ ಗುರಿ - ವಿಜಯ್: ಸಂಘಟನೆಯ ಸಂರಚನೆ ಯಾವುದೇ ಪಕ್ಷದ ಬಲಕ್ಕೆ ಆಧಾರವಾಗಿದೆ ಎಂದು ಅವರು ಇದೇ ವೇಳೆ ಒತ್ತಿ ಹೇಳಿದರು. ಪಕ್ಷದ ಬೇರು ಮತ್ತು ಶಾಖೆಯನ್ನು ಬಲಪಡಿಸುವ ಕಾರ್ಯದಲ್ಲಿ ನಾವಿದ್ದೇವೆ. ನಮ್ಮ ಪಕ್ಷ ಬಡ, ಸಾಮಾನ್ಯ ಜನರ ಅಭಿವೃದ್ಧಿಗಾಗಿಯೇ ಇದೆ. ಹಾಗಾಗಿ, ಪದಾಧಿಕಾರಿಗಳು ಸಹ ಅಂತಹ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಮ್ಮ ಪಕ್ಷವು ಭೂಮಾಲೀಕರಿಗಾಗಿ ಇರುವ ಪಕ್ಷವಲ್ಲ. ಈಗ ಯಾರೇ ಅಧಿಕಾರಕ್ಕೆ ಬಂದರೂ ಭೂಮಾಲೀಕರಾಗುತ್ತಿದ್ದಾರೆ. ಜನಹಿತ, ರಾಷ್ಟ್ರದ ಹಿತದ ಬಗ್ಗೆ ಚಿಂತಿಸದೇ ಎಲ್ಲ ರೀತಿಯಲ್ಲೂ ಹಣದತ್ತಲೇ ಗಮನಹರಿಸುವ ಮನಸ್ಸು ಹೊಂದಿರುವ ಜಮೀನುದಾರರನ್ನು ರಾಜಕೀಯದಿಂದ ದೂರವಿಡುವುದು ನಮ್ಮ ಮೊದಲ ಕೆಲಸ ಎಂದು ವಿಜಯ್ ಇದೇ ವೇಳೆ ಘೋಷಿಸಿದರು.
ಇದನ್ನು ಓದಿ: ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ಯಾವುದೇ ರಾಜ್ಯ ಒಂದೂ ಸ್ಥಾನ ಕಳೆದುಕೊಳ್ಳಲ್ಲ: ಅಮಿತ್ ಶಾ