ಬಿಜಾಪುರ(ಛತ್ತೀಸ್ಗಢ): ಹೋಳಿ ಹಬ್ಬದಂದು ನಡೆದ ರಕ್ತಸಿಕ್ತ ಘಟನೆ ಬಿಜಾಪುರದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ ಅಪರಿಚಿತ ದುಷ್ಕರ್ಮಿಗಳ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಬಸಗೂಡ ಭಾಗದಲ್ಲಿ ಶೋಕ ಮಡುಗಟ್ಟಿದೆ. ಅಪರಿಚಿತ ದಾಳಿಕೋರರು, ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬರು ಮೃತಪಟ್ಟಿದ್ದಾರೆ. ದಾಳಿಕೋರರು ಕೊಡಲಿಯಿಂದ ಹಲ್ಲೆ ನಡೆಸಿ ಜನರನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕವಾಗಿ ಕೊಡಲಿಯಿಂದ ಕೊಚ್ಚಿ ಕೊಲೆ : ಮೃತಪಟ್ಟವರ ಹೆಸರು ಚಂದ್ರಿಯ ಮೋಡಿಯಂ ಅಶೋಕ್ ಭಂಡಾರಿ ಮತ್ತು ಕರಂ ರಮೇಶ್ ಎಂಬುದು ತಿಳಿದುಬಂದಿದೆ. ಮರ ಕಡಿಯುವ ಕೊಡಲಿಯಿಂದ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕರಂ ರಮೇಶ್ ಗಾಯಗೊಂಡಿದ್ದಾರೆ. ಬಸಗೌಡ ಆರೋಗ್ಯ ಕೇಂದ್ರಕ್ಕೆ ತರಾತುರಿಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ವೇಳೆ ಅವರೂ ಸಾವನ್ನಪ್ಪಿದ್ದಾರೆ. ಮೃತಪಟ್ಟ ಮೂವರಲ್ಲಿ ಒಬ್ಬರು ಪೊಲಂಪಲ್ಲಿ ಮತ್ತು ಇಬ್ಬರು ಹೀರಾಪುರದವರು ಎಂಬುದಾಗಿ ತಿಳಿದುಬಂದಿದೆ.
ಘಟನೆಯನ್ನು ಖಚಿತಪಡಿಸಿದ ಬಿಜಾಪುರ ಎಎಸ್ಪಿ : ಈ ಘಟನೆಯನ್ನು ಬಿಜಾಪುರ ಎಎಸ್ಪಿ ಜಿತೇಂದ್ರ ಯಾದವ್ ಖಚಿತಪಡಿಸಿದ್ದಾರೆ. ಬಿಜಾಪುರ ಪೊಲೀಸರು ಘಟನೆಯ ತನಿಖೆಯಲ್ಲಿ ತೊಡಗಿದ್ದಾರೆ. ಕೃತ್ಯವನ್ನು ನಡೆಸಿರುವುದು ನಕ್ಸಲೀಯರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಇದು ದೃಢಪಟ್ಟಿಲ್ಲ. ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಶಿಬಿರಗಳನ್ನು ತೆರೆದಿರುವುದರಿಂದ ನಕ್ಸಲೀಯರು ಆತಂಕಗೊಂಡಿದ್ದಾರೆ. ಇದೇ ಕಾರಣಕ್ಕೆ ಇಂತಹ ಘಟನೆ ನಡೆಯುವ ಸಾಧ್ಯತೆಯೂ ಹೆಚ್ಚಿದೆ.
ಕಳೆದ ಎರಡು ದಿನಗಳಲ್ಲಿ ಎರಡು ಘಟನೆಗಳು: ಕಳೆದ ಎರಡು ದಿನಗಳಲ್ಲಿ ಬಿಜಾಪುರದಲ್ಲಿ ಎರಡು ಘಟನೆಗಳು ನಡೆದಿವೆ. ಮೊದಲ ಘಟನೆ ಮಾರ್ಚ್ 24 ರಂದು ಸಂಭವಿಸಿತು. ಇಲ್ಲಿ ನಕ್ಸಲೀಯರ ಸಣ್ಣ ತಂಡವು ಪೊಲೀಸರಿಗಾಗಿ ನಿರ್ಮಿಸಲಾದ ನಿವಾಸಕ್ಕೆ ನುಗ್ಗಿ ಡಿಆರ್‌ಜಿ ಜವಾನನ ಮೇಲೆ ಗುಂಡಿನ ದಾಳಿ ನಡೆಸಿತ್ತು.
ಎರಡನೇ ಘಟನೆ ಮಾರ್ಚ್ 25 ರಂದು ಮಧ್ಯಾಹ್ನ ನಡೆದಿದೆ. ಇದನ್ನು ನಕ್ಸಲೀಯರ ಘಟನೆಗೆ ತಳಕು ಹಾಕಲಾಗುತ್ತಿದೆ. ಛತ್ತೀಸ್‌ಗಢದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ಬಸ್ತಾರ್‌ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಇಂತಹ ಘಟನೆಗಳು ಪೊಲೀಸರಿಗೆ ಆತಂಕ ತಂದೊಡ್ಡುತ್ತಿವೆ. ಬಿಜಾಪುರದಲ್ಲಿ ನಿರಂತರವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಎಎಸ್ಪಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ. ಪೊಲೀಸ್ ಗಸ್ತು ಕೂಡ ಹೆಚ್ಚಿಸಲಾಗಿದೆ.