ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಭೂಮಂಡಲದಲ್ಲಿಯೇ ಅತಿದೊಡ್ಡ ಧಾರ್ಮಿಕ ಉತ್ಸವ ಎಂದೇ ದಾಖಲೆ ಬರೆದ ಮಹಾ ಕುಂಭಮೇಳವು ಮಹಾಶಿವರಾತ್ರಿಯ ಪುಣ್ಯಸ್ನಾನದ ಮೂಲಕ ತೆರೆ ಕಂಡಿತು. ಆದರೆ, ಪ್ರಯಾಗ್ರಾಜ್ನ ತ್ರಿವೇಣಿ ಸಂಗಮಕ್ಕೆ ಭಕ್ತರು ಇನ್ನೂ ಬರುತ್ತಲೇ ಇದ್ದಾರೆ.
45 ದಿನಗಳ ಕಾಲ ನಡೆದ ಕುಂಭಮೇಳಕ್ಕೆ 66.21 ಕೋಟಿಗೂ ಅಧಿಕ ಜನರು ಆಗಮಿಸಿದ್ದಾರೆ. ಒಂದೇ ಪ್ರದೇಶಕ್ಕೆ ಇಷ್ಟು ಪ್ರಮಾಣದಲ್ಲಿ ಭೇಟಿ ನೀಡಿದ್ದು ಇದೇ ಮೊದಲಾಗಿದೆ. ಜೊತೆಗೆ ಚೀನಾ, ಭಾರತ ಹೊರತುಪಡಿಸಿ ವಿಶ್ವದ ಎಲ್ಲ ರಾಷ್ಟ್ರಗಳ ಜನಸಂಖ್ಯೆಯನ್ನೂ ಇದು ಮೀರಿ ದಾಖಲೆ ಬರೆದಿದೆ.
ಬುಧವಾರ ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನದಲ್ಲಿ 1 ಕೋಟಿಗೂ ಅಧಿಕ ಜನರು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದರು. ದೇಶದ ವಿವಿಧೆಡೆಯಿಂದ ಪ್ರಯಾಗ್ರಾಜ್ಗೆ ಬರುವ ಭಕ್ತರ ಸಂಖ್ಯೆಯು ಕಡಿಮೆಯಾಗಿಲ್ಲ. ಸಾವಿರಾರು ಜನರು ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಇನ್ನೂ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನವತೆಯ 'ಮಹಾಯಜ್ಞ' ಸಂಪನ್ನ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕುಂಭಮೇಳದ ಯಶಸ್ಸಿನ ಬಗ್ಗೆ ತಿಳಿಸಿದ್ದು, "ಮಾನವತೆಯ ಮಹಾಯಜ್ಞ, ನಂಬಿಕೆ, ಏಕತೆ ಮತ್ತು ಸಮಾನತೆಯ ಮಹಾ ಹಬ್ಬ ಮಹಾ ಕುಂಭಮೇಳವು ಸಂಪನ್ನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ವಿಶ್ವದ ದೊಡ್ಡ ಧಾರ್ಮಿಕ ಉತ್ಸವವು ಅಮೋಘ ಯಶಸ್ಸು ಕಂಡಿದೆ. ಮಹಾಕುಂಭದಲ್ಲಿ 66 ಕೋಟಿ 21 ಲಕ್ಷಕ್ಕೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದಲ್ಲಿ ಭಾಗಿಯಾಗಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ ಎಂದು ಹೇಳಿದ್ದಾರೆ.
"ಇದು ವಿಶ್ವದ ಇತಿಹಾಸದಲ್ಲಿ ಅಭೂತಪೂರ್ವ, ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಪೂಜ್ಯನೀಯ ಅಖಾಡಗಳು, ಸಂತರು, ಮಹಾಮಂಡಲೇಶ್ವರರು ಮತ್ತು ಧಾರ್ಮಿಕ ಗುರುಗಳ ಆಶೀರ್ವಾದದ ಪರಿಣಾಮ ಸಾಮರಸ್ಯದ ಮಹಾಸಭೆಯು ಭವ್ಯವಾಗಿ ನಡೆಯಿತು. ಇಡೀ ಜಗತ್ತಿಗೆ ಏಕತೆಯ ಸಂದೇಶವನ್ನು ಸಾರಿತು ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ.
ಕುಂಭಮೇಳದ ಪುಣ್ಯಸ್ನಾನಗಳು : ಜನವರಿ 13 ರಂದು ಪೌಶ್ ಪೂರ್ಣಿಮೆ ಮೊದಲ ಅಮೃತ ಸ್ನಾನದಿಂದ ಆರಂಭವಾದ ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮುಕ್ತಾಯವಾಗುವ ವೇಳೆಗೆ 6 ವಿಶೇಷ ಸ್ನಾನಗಳನ್ನು ಕಂಡಿದೆ. ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29), ಬಸಂತ್ ಪಂಚಮಿ (ಫೆಬ್ರವರಿ 3) ಮತ್ತು ಮಾಘಿ ಪೂರ್ಣಿಮಾ (ಫೆಬ್ರವರಿ 12) ಎಂದು ಅಮೃತ ಸ್ನಾನಗಳು ನಡೆದವು.
ಇದನ್ನೂ ಓದಿ: ಏಕತೆಯ 'ಮಹಾಯಜ್ಞ' ಮುಕ್ತಾಯಗೊಂಡಿದೆ: ಐತಿಹಾಸಿಕ ಬೃಹತ್ ಮಹಾಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ