ನವದೆಹಲಿ: ಗುಜರಾತ್ನ ರಾಜ್ಕೋಟ್ನಲ್ಲಿನ ಗೇಮ್ ಝೋನ್ನಲ್ಲಿ ಅಗ್ನಿ ದುರಂತ ನಡೆದ 59 ದಿನಗಳ ಬಳಿಕ ಬುಧವಾರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 15 ಆರೋಪಿಗಳ ವಿರುದ್ಧ 365 ಸಾಕ್ಷಿಗಳ ಹೇಳಿಕೆಗಳಿರುವ 1 ಲಕ್ಷ ಪುಟಗಳ ಚಾರ್ಜ್‌ಶೀಟ್ ಅನ್ನು ಮೂರು ಬ್ಯಾಗ್ಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹೊತ್ತು ತಂದರು.
ಮೇ 25ರಂದು ರಾಜ್ಕೋಟ್ನ ಟಿಆರ್ಪಿ ಗೇಮ್ ಝೋನ್ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತ್ತು. ಮಾಲೀಕರ ಪೈಕಿ ಓರ್ವರಾದ ಪ್ರಕಾಶ್ ಹಿರಾನ್ ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದರು. ಬೆಂಕಿಯ ಕೆನ್ನಾಲಿಗೆಗೆ ಮೃತ ವ್ಯಕ್ತಿಗಳ ಗುರುತು ಕೂಡಾ ಪತ್ತೆಯಾಗಲಿಲ್ಲ. ಬೆಂಕಿಯಲ್ಲಿ ಬೆಂದು ಹೋದ ಮೃತರ ಗುರುತು ಪತ್ತೆಗೆ ಪೊಲೀಸರು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದರು.
ಬಳಿಕ ತಾಲೂಕು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಗೇಮ್ ಜೋನ್ ಮಾಲೀಕ ಮತ್ತು ಮುನ್ಸಿಪಲ್ ಕಮಿಷನರ್ ಅವರನ್ನು ಬಂಧಿಸಿದ್ದರು.
ಎಫ್ಐಆರ್ನಲ್ಲಿ ಧವಲ್ ಎಂಟರ್‌ಪ್ರೈಸಸ್ ಮಾಲೀಕ ಧವಲ್ ಠಕ್ಕರ್ ಸೇರಿದಂತೆ ಆರು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ರೇಸ್‌ವೇ ಎಂಟರ್‌ಪ್ರೈಸಸ್‌ನ ಪಾಲುದಾರರಾದ ಅಶೋಕ್‌ಸಿನ್ಹ್ ಜಡೇಜಾ, ಕಿರಿತ್‌ಸಿನ್ಹ್ ಜಡೇಜಾ, ಪ್ರಕಾಶ್ ಹಿರಾನ್, ಯುವರಾಜ್‌ಸಿಂಹ ಸೋಲಂಕಿ ಮತ್ತು ರಾಹುಲ್ ರಾಥೋಡ್ ಈ ಗೇಮ್ ಝೋನ್ ಅನ್ನು ಜಂಟಿಯಾಗಿ ನಡೆಸುತ್ತಿದ್ದರು.
ದುರಂತದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹೆಚ್ಚುವರಿ ಡಿಜಿಪಿ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಮತ್ತು ಎಸ್‌ಐಟಿ ಸದಸ್ಯರೊಂದಿಗೆ ಪ್ರಕರಣ ಸಂಬಂಧ ಶುಕ್ರವಾರ ಸಭೆ ನಿಗದಿಯಾಗಿದೆ. ವರದಿಯಲ್ಲಿ ಪ್ರಮುಖ ವ್ಯಕ್ತಿಗಳ ಹೆಸರಿರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆಯೇ ಗೇಮ್ ಝೋನ್ ನಡೆಸುತ್ತಿದ್ದುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿತ್ತು.
ಇದನ್ನೂ ಓದಿ: ಶಿರಡಿ ಸಾಯಿಬಾಬಾ ಮಂದಿರಕ್ಕೆ ₹6.25 ಕೋಟಿ ದೇಣಿಗೆ ನೀಡಿದ ಭಕ್ತ