ತಿರುವನಂತಪುರಂ(ಕೇರಳ): ಕೇರಳದ ಐವರ ಸಾಮೂಹಿಕ ಹತ್ಯಾಕಾಂಡದ ಹಂತಕ ಅಫಾನ್ ಎಂಬಾತನನ್ನು ಬಂಧಿಸಲಾಗಿದೆ. ಐವರನ್ನು ಕೊಲೆ ಮಾಡಿ ವಿಷ ಸೇವಿಸಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು, ಪ್ರಕರಣದ ತನಿಖೆಗೆ ಪೊಲೀಸರು ಗುರುವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಹತ್ಯಾಕಾಂಡದ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬುದನ್ನು ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಯ ಹೇಳಿಕೆಯನ್ನು ದಾಖಲಿಸಲು ಸಜ್ಜಾಗಿದ್ದಾರೆ. ಜೊತೆಗೆ, ದಾಳಿಯಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯ ತಾಯಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಹೇಳಿಕೆಯೂ ಪ್ರಕರಣದಲ್ಲಿ ಪ್ರಮುಖವಾಗಿದೆ.
ಹಣಕ್ಕಾಗಿ ಭೀಕರ ಹತ್ಯೆ: ವಿಷ ಸೇವಿಸಿದ್ದ ಹಂತಕನ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ವೈದ್ಯರು ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ನಂತರ, ಆತನ ಬಂಧನ ಮಾಡಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಹಣಕ್ಕಾಗಿ ಸರಣಿ ಕೊಲೆಗಳನ್ನು ಮಾಡಿದ್ದಾಗಿ ಮಾಹಿತಿ ನೀಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬದ ಜೊತೆ ಹಣಕಾಸಿನ ಸಂಬಂಧ ಹೊಂದಿರುವವರನ್ನೂ ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಾದಕದ್ರವ್ಯ ಸೇವಿಸಿರುವ ಕುರಿತು ಪರೀಕ್ಷೆ: ಆರೋಪಿಯು ವಿಷ ಸೇವಿಸಿದ್ದಾನೆ ಎಂದು ತಿಳಿಸಿದ ಬಳಿಕ ಎರಡು ಪರೀಕ್ಷೆ ನಡೆಸಲಾಗಿದೆ. ಒಂದರಲ್ಲಿ ಅದು ದೃಢಪಟ್ಟಿದೆ. ಇದರ ಜೊತೆಗೆ, ಮಾದಕದ್ರವ್ಯ ಸೇವಿಸಿದ್ದಾನೆಯೇ ಎಂಬುದನ್ನೂ ಪತ್ತೆ ಮಾಡಲು ಆತನ ದೇಹದ ಕೂದಲು, ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪೊಲೀಸ್ ಠಾಣೆಗೆ ಶರಣಾದಾಗ ಅಫಾನ್‌ನ ಪಾದದಲ್ಲಿ ಕಂಡುಬಂದ ರಕ್ತದ ಕಲೆಗಳನ್ನೂ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಮಾನಸಿಕ ವೈದ್ಯರ ತಂಡದಿಂದಲೂ ಆತನ ವಿಚಾರಣೆ ನಡೆಸಲಾಗುತ್ತಿದೆ. ಆಸ್ಪತ್ರೆಯಿಂದ ಆತನನ್ನು ಬಿಡುಗಡೆ ಮಾಡುವ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ತಾಯಿ ಹೇಳಿಕೆಯೇ ಪ್ರಮುಖ ಸಾಕ್ಷಿ: ಇತ್ತ, ಮಾರಣಾಂತಿಕ ದಾಳಿಯಲ್ಲಿ ಬದುಕುಳಿದಿರುವ ಹಂತಕನ ತಾಯಿ ಚೇತರಿಕೆ ಕಂಡಿದ್ದು, ಅವರ ಹೇಳಿಕೆಯನ್ನೂ ದಾಖಲಿಸಲಾಗುವುದು. ಅವರ ಆರೋಗ್ಯ ಸ್ಥಿರವಾಗಿದೆ, ಮಾತನಾಡಲು ಸಮರ್ಥರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹತ್ಯಾಕಾಂಡ ಸುತ್ತಲಿನ ಅಸ್ಪಷ್ಟತೆಗಳ ಬಗ್ಗೆ ಅವರ ಹೇಳಿಕೆಯು ಅತಿ ಮಹತ್ವದ್ದಾಗಿದೆ ಎಂದು ಪೊಲೀಸರು ಹೇಳಿದರು.
ಸುತ್ತಿಗೆಯಿಂದ ಬಡಿದು ಬಡಿದು ಹತ್ಯೆ!: ಹಂತಕ ಅಫಾನ್ ಐವರನ್ನು ಒಬ್ಬೊಬ್ಬರನ್ನಾಗಿ ಸುತ್ತಿಗೆಯಿಂದ ಬಡಿದು ಬಡಿದು ಕೊಂದಿದ್ದಾಗಿ ತನಿಖೆಯಲ್ಲಿ ತಿಳಿದಿದೆ. ತನ್ನ 13 ವರ್ಷದ ತಮ್ಮನ ತಲೆಗೆ ಹಲವು ಬಾರಿ ಹೊಡೆದು ಕೊಂದಿದ್ದಾನೆ. ವಿಚಿತ್ರವೆಂದರೆ, ಬಳಿಕ ಮೃತದೇಹದ ಸುತ್ತಲೂ 500 ರೂಪಾಯಿ ನೋಟುಗಳನ್ನು ಹರಡಿದ್ದಾನೆ. ಜೊತೆಗೆ, ಚಿಕ್ಕಪ್ಪನ ತಲೆಗೆ 20 ಕ್ಕೂ ಹೆಚ್ಚು ಬಾರಿ ಹೊಡೆದಿದ್ದು, ತಲೆಬುರುಡೆ ಛಿದ್ರವಾಗಿದೆ. ಆತನ ಪತ್ನಿ ಚಹಾ ಮಾಡುತ್ತಿದ್ದಾಗ ಅಡುಗೆಮನೆಯಲ್ಲಿ ದಾಳಿ ನಡೆಸಿದ್ದಾನೆ. ತಾಯಿ ಮೇಲೂ ದಾಳಿ ಸುತ್ತಿಗೆಯಿಂದ ದಾಳಿ ಮಾಡಿದ್ದು, ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಕೇರಳ ಹತ್ಯಾಕಾಂಡ: ಅಜ್ಜಿ, ಪ್ರೇಯಸಿ ಕೊಂದು ಚಿನ್ನ ಕಳವು; ತಮ್ಮನಿಗೆ 'ಮಂಡಿ' ಊಟ ಕೊಡಿಸಿ ಹತ್ಯೆ!
ಕೇರಳ: ಪ್ರಿಯತಮೆ, ಸಹೋದರ, ಅಜ್ಜಿ ಸೇರಿ ಐವರ ಕೊಂದು ಪೊಲೀಸರಿಗೆ ಶರಣಾದ ಹಂತಕ