ಮಂಡಿ(ಹಿಮಾಚಲ): ಬಾಲಿವುಡ್ ನಟಿ - ರಾಜಕಾರಣಿ ಕಂಗನಾ ರಣಾವತ್ ಬಾಯ್ತಪ್ಪಿ ಹೇಳಿದ ಮಾತೊಂದು ಭಾರಿ ಟ್ರೋಲ್ಗೆ ಕಾರಣವಾಗಿದೆ. ಹೌದು, ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಂಗನಾ ಚುನಾವಣಾ ಪ್ರಚಾರದ ಸಮಯದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ಬಾಯ್ತಪ್ಪಿ ತೇಜಸ್ವಿ ಯಾದವ್ ಬದಲು ತನ್ನದೇ ಪಕ್ಷದ ಸಂಸದ ತೇಜಸ್ವಿ ಸೂರ್ಯನ ಹೆಸರು ಹೇಳಿದ್ದರು.
ಪ್ರಚಾರ ಸಭೆಯಲ್ಲಿ ಮೋತಿ ಲಾಲ್ ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ನೆಹರೂ - ಗಾಂಧಿ ಕುಟುಂಬದವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟದ ಇತರ ನಾಯಕ ವಿರುದ್ಧವು ಸಹ ಹರಿಹಾಯ್ದಿದ್ದರು. ಈ ವೇಳೆ ಮಾತಿನ ಭರದಲ್ಲಿ ಅವರು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬದಲಿಗೆ ತೇಜಸ್ವಿ ಸೂರ್ಯ ಹೆಸರು ಹೇಳಿ ಕಟುವಾಗಿ ಟೀಕಿಸಿದ್ದರು.
ಕಂಗನಾ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನ್ಸ್ ಅವರ ಈ ಹೇಳಿಕೆಗೆ ಟ್ರೋಲ್ ಮತ್ತು ಮೀಮ್‌ಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮಾಡಿ, "ಯಾರು ಈ ಮಹಿಳೆ ?" ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲಾಲ್ ಜೈನ್ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ಕಂಗನಾ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿ, @Tejasvi_Surya ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನಿಮ್ಮದೇ ಪಕ್ಷದ ಸದಸ್ಯರೇ ನಿಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
"ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು, ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು ಅಥವಾ ತನ್ನಂತೆಯೇ ಹಾಸ್ಯಾಸ್ಪದ ಮಾತುಗಳನ್ನಾಡುವ ಅಖಿಲೇಶ್ ಯಾದವ್ ಮತ್ತು ಭಾರತದಲ್ಲಿ ಯಾರಿಗೂ ತಿಳಿದಿರದ, ಹಿಮಾಚಲದಲ್ಲಿ ಮಾತ್ರ ತಿಳಿದಿರುವ ರಾಜಕುಮಾರನನ್ನು ನಾವು ಹೊಂದಿದ್ದೇವೆ. ಅವರು ನಾನು ಪದ್ಮಶ್ರೀ ಪಡೆದಾಗಲೂ ಅದು ಅಶುದ್ಧ ಎಂದು ಹೇಳಿದ್ದರು. ಇದು ಆತಂಕಕಾರಿ ಮತ್ತು ಖಂಡನೀಯ" ಎಂದು ಕಂಗನಾ ಭಾಷಣದಲ್ಲಿ ಹೇಳಿದ್ದರು.