ಚೆನ್ನೈ(ತಮಿಳುನಾಡು): ತಮಿಳುನಾಡಿನ ಡೆಲ್ಟಾ ಪ್ರದೇಶ ಅಂದರೆ, ಕಾವೇರಿ ನದಿ ತೀರದ ಪ್ರದೇಶಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಸರ್ಕಾರದ ಎಲ್ಲಾ ಇಲಾಖೆಗಳು ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗುವಂತೆ ತಮಿಳುನಾಡು ಸರ್ಕಾರ ಸೂಚನೆ ನೀಡಿದೆ.
ಕಂದಾಯ ಆಡಳಿತ ಆಯುಕ್ತ ಸಾಯಿ ಕುಮಾರ್ ಈ ಎಚ್ಚರಿಕೆ ನೀಡಿದ್ದು, ಸಂಭಾವ್ಯ ಹಾನಿ ತಡೆಯಲು ತಕ್ಷಣ ಕ್ರಮವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಭತ್ತದ ಬೆಳೆಯನ್ನು ಸುರಕ್ಷಿತವಾಗಿರಿಸುವಂತೆ ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆಯೂ ತಿಳಿಸಿದ್ದಾರೆ.
ಫೆ.27ರಿಂದ ಮಾರ್ಚ್ 1ರವರೆಗೆ ತಮಿಳುನಾಡಿನ ಹಲವು ಪ್ರದೇಶದಲ್ಲಿ ಜೋರು ಮಳೆಯಾಗಲಿದೆ. ಈಗಾಗಲೇ ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆಯಾಗಿದ್ದು, ಇನ್ನಷ್ಟು ತೀವ್ರವಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕೇರಳದ ದಕ್ಷಿಣ ಭಾಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಮೇಲ್ಮುಖವಾಗಿ ಚಂಡಮಾರುತದ ಪರಿಚಲನೆ ಕಂಡುಬರಲಿದೆ. ಇದರ ಪರಿಣಾಮ ತಮಿಳುನಾಡಿನ ತಂಜಾವೂರು, ತಿರುವೂರು, ನಾಗಪಟ್ಟಿನಂ, ಮಯಿಲದುಥುರೈ, ಪುದುಕೊಟ್ಟೈ ರಾಮನಾಥಪುರಂ, ತೂತುಕೂಡಿ, ತಿರುನೇಲ್ವೇಲಿ, ಕನ್ಯಾಕುಮಾರಿ, ತೆಲಕಾಸಿ, ವಿರುಧುನಗರ್, ಶಿವಗಂಗಾ ಥೆನಿ, ಮಧುರೈ, ಮತ್ತು ದಿಂಡಿಗಲ್ನಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಈಶಾನ್ಯ ಮಾನ್ಸೂನ್ ಋತುವಿನಲ್ಲಿ ತಮಿಳುನಾಡಿನಲ್ಲಿ ಶೇ 14ರಷ್ಟು ಅಧಿಕ ಮಳೆಯಾಗಿದ್ದು, ಸರಾಸರಿ 393 ಮಿ.ಮೀ ಮಳೆ ಬದಲು 447 ಮಿ.ಮೀ ಮಳೆಯಾಗಿತ್ತು. ಚೆನ್ನೈನಲ್ಲಿ 845 ಮಿ.ಮೀ ದಾಖಲಾಗಿದೆ. ಇದು ಋತುಮಾನಕ್ಕಿಂತ ಸರಾಸರಿ ಶೇ 16ರಷ್ಟು ಹೆಚ್ಚೆಂದು ತೋರಿಸುತ್ತದೆ.(ಐಎಎನ್ಎಸ್)
ಇದನ್ನೂ ಓದಿ: 'ತೆಲಂಗಾಣ ರೈಸಿಂಗ್' ಅನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಸಿಎಂ ರೇವಂತ್ ರೆಡ್ಡಿ