ನವದೆಹಲಿ: ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಈ ಪರೇಡ್‌ನಲ್ಲಿ ಪಾಲ್ಗೊಂಡ 25 ಸ್ತಬ್ಧಚಿತ್ರಗಳು ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಗಣರಾಜ್ಯೋತ್ಸವಕ್ಕೆ ಮೆರುಗು ತುಂಬಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಚಂದ್ರಯಾನ-3ರ ಸ್ತಬ್ಧಚಿತ್ರವು ಹೆಚ್ಚು ಗಮನ ಸೆಳೆಯಿತು.
ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನವು ದೇಶದ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿ ಆಯಿತು. ರಾಷ್ಟ್ರದ ಸೇನೆಯ ಸಾಮರ್ಥ್ಯ, ವಿವಿಧ ಕ್ಷೇತ್ರಗಳಲ್ಲಿ ದೇಶ ಮೂಡಿಸಿರುವ ಛಾಪು ಪ್ರರ್ದಶಿಸುವುದು ಮಾತ್ರವಲ್ಲದೇ ವೈವಿಧ್ಯಮಯ ಸಂಸ್ಕೃತಿಯನ್ನೂ ಜಗತ್ತಿನ ಮುಂದೆ ತೆರೆದಿಟ್ಟಿತು. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಮತ್ತು ಆದಿತ್ಯ ಎಲ್-1 ಯೋಜನೆಯ ಸ್ತಬ್ಧಚಿತ್ರವು ಮುಖ್ಯ ಆಕರ್ಷಣೆಯಾಗಿತ್ತು.
ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ, ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಆದಿತ್ಯ ಎಲ್-1 ಯೋಜನೆ ಮತ್ತು ಮುಂದಿನ ವರ್ಷ ನಡೆಸಲು ಉದ್ದೇಶಿಸಿರುವ ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಮತ್ತು ಇಸ್ರೋದಲ್ಲಿ ಮಹಿಳಾ ವಿಜ್ಞಾನಿಗಳ ಭಾಗವಹಿಸುವಿಕೆಯನ್ನು ಈ ಸ್ತಬ್ಧಚಿತ್ರವು ಪ್ರದರ್ಶಿಸಿತು.
ಇಸ್ರೋದ ಈ ಸ್ತಬ್ಧಚಿತ್ರವು ಆರ್ಯಭಟ ಮತ್ತು ವರಾಹಮಿಹಿರ ಅವರಂತಹ ಪುರಾತನ ಖಗೋಳಶಾಸ್ತ್ರಜ್ಞರು ಮತ್ತು ಬಾಹ್ಯಾಕಾಶ ಕ್ಷೇತ್ರದ ಶ್ರೇಷ್ಠರನ್ನು ಪ್ರತಿಬಿಂಬಿಸಿತು. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಸ್ತಬ್ಧಚಿತ್ರಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳ 9 ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು ಚಿತ್ತಾಕರ್ಷಕ 25 ಸ್ತಬ್ಧಚಿತ್ರಗಳು ಸಾಗಿದವು.
ರೋಮಾಂಚನಕಾರಿ ಏರ್‌ಶೋ: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವೂ ಅನಾವರಣಗೊಂಡಿತು. 54 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶಿಸಿದ ಏರ್‌ಶೋ ರೋಮಾಂಚನ ಉಂಟುಮಾಡಿತು. ಆಗಸದಲ್ಲಿ ಹಾರಾಟ ಮಾಡುತ್ತಿದ್ದ ಲೋಹದ ಹಕ್ಕಿಗಳು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದವು.
ಏರ್ಶೋನಲ್ಲಿ ಭಾರತೀಯ ವಾಯುಪಡೆಯ 46, ಭಾರತೀಯ ಸೇನೆಯ ನಾಲ್ಕು, ನೌಕಾಪಡೆಯ ಒಂದು ಹೆಲಿಕಾಪ್ಟರ್ ಮತ್ತು ಫ್ರಾನ್ಸ್ನ ವಾಯು, ಬಾಹ್ಯಾಕಾಶ ಪಡೆಯ ಮೂರು ವಿಮಾನಗಳು ಪಾಲ್ಗೊಂಡಿದ್ದವು. ವಿಂಟೇಜ್ ಹಾಗೂ ಆಧುನಿಕ ವಿಮಾನಗಳಾದ ತೇಜಸ್, ರಫೇಲ್, ಜಾಗ್ವಾರ್, ಡೋರ್ನಿಯರ್ನಂತಹ ಲಘು ಯುದ್ಧ ವಿಮಾನಗಳ ಜೊತೆಗೆ ಲಘು ಯುದ್ಧ ಹೆಲಿಕಾಪ್ಟರ್‌ಗಳಾದ ಪ್ರಚಂಡ್, ಸುಧಾರಿತ ಲಘು ಹೆಲಿಕಾಪ್ಟರ್‌ಗಳಾದ ನೇತ್ರ, ವರುಣ, ತ್ರಿಶೂಲ್, ಅಮೃತ್, ಅರ್ಜನ್ ಮತ್ತು ತಂಗೈಲ್ ಸೇರಿದಂತೆ ವಿವಿಧ ಹೆಲಿಕಾಪ್ಟರ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.
ಇದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗಣರಾಜ್ಯೋತ್ಸವದ ಪ್ರಮುಖ ಅತಿಥಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಸೇರಿ ಗಣ್ಯರು ರೋಮಾಂಚನಗೊಂಡರು. ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳು ಸಾಗುವಾಗ ಮತ್ತು ಆಕಾಶದಲ್ಲಿ ವಿಮಾನಗಳು ತಮ್ಮ ಪ್ರದರ್ಶನ ನೀಡುವಾಗ ಎಲ್ಲ ಗಣ್ಯರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೇ, ಕೆಲವೊಮ್ಮೆ ಎದ್ದುನಿಂತು ಸ್ತಬ್ಧಚಿತ್ರಗಳೊಂದಿಗೆ ಸಾಗುತ್ತಿದ್ದ ಕಲಾವಿದರನ್ನು ಪ್ರೋತ್ಸಾಹಿಸಿದರು.
ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಭಾರತದ ಮಿಲಿಟರಿ, ಮಹಿಳಾ ಶಕ್ತಿ ಅನಾವರಣ