ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಸಂಕಷ್ಟ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಎರಡು ದಿನಗಳ ಹಿಂದೆ 1,823 ಕೋಟಿ ರೂ ಪಾವತಿಸುವಂತೆ ನೋಟಿಸ್ ಕಳುಹಿಸಿರುವ ಆದಾಯ ತೆರಿಗೆ ಇಲಾಖೆ, ಇತ್ತೀಚೆಗೆ ಮತ್ತೊಂದು ನೋಟಿಸ್ ಕಳುಹಿಸಿ 1,745 ಕೋಟಿ ರೂ ಕಟ್ಟಬೇಕೆಂದು ಸೂಚಿಸಿದೆ.
2014-15ರಿಂದ 2016-17ನೇ ವರ್ಷಕ್ಕೆ ಸಂಬಂಧಿಸಿದಂತೆ 1,745 ಕೋಟಿ ರೂ. ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಲಾಖೆ ನೀಡಿರುವ ಎರಡು ನೋಟಿಸ್‌ಗಳ ಪ್ರಕಾರ, ಕೈ ಪಕ್ಷ 3,567 ಕೋಟಿ ರೂ ಪಾವತಿಸಬೇಕಿದೆ.
2014-15ನೇ ವರ್ಷಕ್ಕೆ 663 ಕೋಟಿ ರೂ, 2015-16ಕ್ಕೆ 664 ಕೋಟಿ ರೂ, 2016-17ಕ್ಕೆ 417 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಮೂಲಗಳು ಹೇಳುತ್ತಿವೆ. ರಾಜಕೀಯ ಪಕ್ಷಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿ ಕೊನೆಗೊಂಡಿರುವುದರಿಂದ ಕಾಂಗ್ರೆಸ್ ಪಕ್ಷದ ಸಂಪೂರ್ಣ ಆದಾಯದ ಮೇಲೆ ತೆರಿಗೆ ವಿಧಿಸಲಾಗಿದೆ.
ಐಟಿ ಇಲಾಖೆ ಮತ್ತೊಂದು ಪ್ರಕರಣದಲ್ಲಿ 135 ಕೋಟಿ ರೂ.ಗೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಪಕ್ಷ ಸುಪ್ರೀಂ ಕೋರ್ಟ್ ಮೊರೆ ಹೋದರೂ ಇಲ್ಲಿಯವರೆಗೂ ಪರಿಹಾರ ದೊರೆತಿಲ್ಲ. ಪಕ್ಷದ ಖಾತೆಗಳನ್ನು ಈಗಾಗಲೇ ಸೀಲ್ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ನಿರಂತರ ವಿರೋಧ ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದು ಕಾಂಗ್ರೆಸ್‌ನ ದುರಹಂಕಾರ ಎಂದು ಬಿಜೆಪಿ ಕಿಡಿಕಾರಿದೆ. ವಿರೋಧ ಪಕ್ಷಕ್ಕೆ ಪ್ರತ್ಯೇಕ ಕಾನೂನು ಬೇಕೇ? ತೆರಿಗೆ ವಸೂಲಿ ಮಾಡಿದ ಕಾಂಗ್ರೆಸ್ ಈಗ ಜನರನ್ನು ದಾರಿ ತಪ್ಪಿಸುವಲ್ಲಿ ನಿರತವಾಗಿದೆ ಎಂದು ಹರಿಹಾಯ್ದಿದೆ.
ಎರಡು ದಿನಗಳ ಹಿಂದೆ ಮೊದಲ ನೋಟಿಸ್: ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯು 1,823 ಕೋಟಿ ರೂ ಮೊತ್ತದ ನೋಟಿಸ್ ಜಾರಿ ಮಾಡಿತ್ತು. ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ ಅಜಯ್ ಮಾಕೆನ್, ''ಲೋಕಸಭೆ ಚುನಾವಣೆಗೆ ಮುನ್ನ ಹಣದ ಕೊರತೆಯಿರುವ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿದೆ. 2017-18 ಮತ್ತು 2020-21ರ ಮೌಲ್ಯಮಾಪನ ವರ್ಷಕ್ಕೆ ದಂಡ ಮತ್ತು ಬಡ್ಡಿ ಸೇರಿದಂತೆ 1,823.08 ಕೋಟಿ ರೂ. ಪಾವತಿಸುವಂತೆ ಐಟಿ ಹೊಸ ನೋಟಿಸ್ ನೀಡಿದೆ. ತಮ್ಮ ವಿರುದ್ಧದ ವಿಚಾರಣೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿರುವುದು ಗಮನಾರ್ಹ. ಯಾವುದೇ ಮೌಲ್ಯಮಾಪನ ಆದೇಶ ಅಥವಾ ದಾಖಲೆಗಳಿಲ್ಲದೇ ಗುರುವಾರ ಹೊಸ ನೋಟಿಸ್ ನೀಡಲಾಗಿದೆ. ಇದಕ್ಕೂ ಮುನ್ನ ಪಕ್ಷಕ್ಕೆ 210 ಕೋಟಿ ರೂಪಾಯಿ ದಂಡ ಹಾಕಲಾಗಿತ್ತು'' ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ್ತೊಂದು ಬಿಗ್ ಶಾಕ್: 1,823 ಕೋಟಿ ರೂ ತೆರಿಗೆ ಪಾವತಿಗೆ ನೋಟಿಸ್ ಜಾರಿ - IT Notice