ಹಲ್ದ್ವಾನಿ(ಉತ್ತರಾಖಂಡ): ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಎಂಬಲ್ಲಿ ಇಂದು ನಡೆದ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಉದ್ವಿಗ್ನತೆ ಉಂಟುಮಾಡಿತು. ಇದೀಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದಾರೆ. ಗಲಭೆಕೋರರಿಗೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ 1ರಿಂದ 12ನೇ ತರಗತಿಯ ಎಲ್ಲ ಶಾಲೆಗಳನ್ನು ನಾಳೆ (ಫೆಬ್ರವರಿ 9) ಕಡ್ಡಾಯ ರಜೆ ಘೋಷಿಸಲಾಗಿದೆ.
ನಡೆದಿದ್ದೇನು?: ಹಲ್ದ್ವಾನಿಯ ಉದ್ಯಾನವನವೊಂದರಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಇಂದು ಜಿಲ್ಲಾಡಳಿತ ಮತ್ತು ನಗರಸಭೆ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ, ಬುಲ್ಡೋಜರ್ ಬಳಸಿ ಧಾರ್ಮಿಕ ಕಟ್ಟಡಗಳನ್ನು ಕೆಡವಲಾಯಿತು. ಈ ವಿಷಯ ತಿಳಿದ ಸ್ಥಳೀಯರು ಸ್ಥಳದಲ್ಲಿ ಜಮಾವಣೆಗೊಂಡರು. ಅಲ್ಲದೇ, ಪೊಲೀಸರ ಮೇಲೆ ಕಲ್ಲು ತೂರಿದರು. ಇದರಿಂದಾಗಿ ಬಿಗುವಿನ ವಾತಾವರಣ ಸೃಷ್ಟಿಸಿತು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಆದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ನಂತರ ಕೆಲವು ಉದ್ರಿಕ್ತರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಹಾಗೂ ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂಭುಲ್ಪುರ ಪೊಲೀಸ್ ಠಾಣೆಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ್ತೊಂದೆಡೆ, ಘಟನೆಯ ಗಂಭೀರತೆ ಅರಿತ ಸಿಎಂ ಪುಷ್ಕರ್ ಸಿಂಗ್ ಧಾಮಿ ಡೆಹ್ರಾಡೂನ್‌ನಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಧಾಮಿ, ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ತಂಡವು ಹಲ್ದ್ವಾನಿಯ ಬಂಭುಲ್ಪುರ ಪ್ರದೇಶಕ್ಕೆ ಅತಿಕ್ರಮಣ ತೆರವು ಕಾರ್ಯಾರಂಭಿಸಿದೆ. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಕೇಂದ್ರ ಪಡೆಗಳ ಹೆಚ್ಚುವರಿ ತುಕಡಿಗಳನ್ನು ಹಲ್ದ್ವಾನಿಗೆ ಕಳುಹಿಸಲಾಗಿದೆ. ಜನತೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. ಇದೇ ವೇಳೆ, ದಂಗೆಕೋರರು ಮತ್ತು ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪೌರಾಯುಕ್ತ ಪಂಕಜ್ ಉಪಾಧ್ಯಾಯ ಪ್ರತಿಕ್ರಿಯಿಸಿ, ಈ ಹಿಂದೆ ನಗರಸಭೆಯು ಸರ್ಕಾರಕ್ಕೆ ಸೇರಿ ಮೂರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆ ಸ್ಥಳದಲ್ಲಿದ್ದ ಧಾರ್ಮಿಕ ಕಟ್ಟಡಗಳಿಗೆ ಬೀಗ ಹಾಕಲಾಗಿತ್ತು. ಇಂದು ಅದನ್ನು ಕೆಡವಲಾಗಿದೆ. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 19 ಭಾರತೀಯರ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ