ಮಧ್ಯಪ್ರದೇಶ: ಇಬ್ಬರು ಅಪ್ರಾಪ್ತ ಬಾಲಕರನ್ನು ತಲೆಕೆಳಗಾಗಿ ನೇತುಹಾಕಿ ಥಳಿಸಿದ್ದಲ್ಲದೇ, ಮೆಣಸಿನ ಕಾಯಿಯ ಹೊಗೆ ಹಾಕಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ನಡೆದಿದೆ. ದುಷ್ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಮೂವರನ್ನು ಸೆರೆ ಹಿಡಿದಿದ್ದಾರೆ.
ಹಲ್ಲೆಗೊಳಗಾಗಿರುವ ಮಕ್ಕಳಲ್ಲಿ ಓರ್ವನ ತಂದೆ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದಾಗ ವಿಚಾರ ಗೊತ್ತಾಗಿದೆ. ತಕ್ಷಣ ಅವರು ಮಗನನ್ನು ಪ್ರಶ್ನಿಸಿದ್ದು, ಆತ ಎಲ್ಲವನ್ನೂ ವಿವರಿಸಿದ್ದಾನೆ.
ಬಾಲಕ ಹೇಳಿದ್ದೇನು?: "ನವೆಂಬರ್ 1ರಂದು ಮಧ್ಯಾಹ್ನ ಗ್ರಾಮದ ಹುಡುಗನೊಬ್ಬ ನನ್ನನ್ನು ಅಂಗಡಿಗೆ ಕರೆದಿದ್ದ. ನಾನು ನನ್ನ ಸ್ನೇಹಿತನೊಂದಿಗೆ (12 ವರ್ಷ) ಅಲ್ಲಿಗೆ ತೆರಳಿದೆ. ಅಲ್ಲಿ ಇಬ್ಬರು ಹುಡುಗರನ್ನು ನಾವು ಭೇಟಿಯಾದೆವು. ಆ ಇಬ್ಬರೂ ನಮ್ಮಿಬ್ಬರ ಮೇಲೆ ವಾಚ್ ಕದ್ದ ಆರೋಪ ಹೊರಿಸಿದರು. ಈ ಆರೋಪವನ್ನು ನಿರಾಕರಿಸಿ ವಿರೋಧ ವ್ಯಕ್ತಪಡಿಸಿದಾಗ ಅವರು ನಮ್ಮ ಕಾಲುಗಳನ್ನು ಹಗ್ಗದಿಂದ ಕಟ್ಟಿ, ತಲೆಕೆಳಗಾಗಿ ನೇತುಹಾಕಿ ಥಳಿಸಿದರು. ಅಲ್ಲದೇ, ಮೆಣಸಿನಕಾಯಿಯನ್ನು ಬೆಂಕಿಗೆ ಹಾಕಿ ಅದರ ಖಾರ ಹೊಗೆಯನ್ನು ನಮಗೆ ಉಸಿರಾಡುವಂತೆ ಪೀಡಿಸಿದರು. ಈ ವೇಳೆ ಸುತ್ತಮುತ್ತಲಿದ್ದ ಜನರು ವೀಡಿಯೋ ಸೆರೆ ಹಿಡಿಯುವುದರಲ್ಲಿ, ನಮ್ಮನ್ನು ನೋಡಿ ನಗುವುದರಲ್ಲಿ ನಿರತರಾಗಿದ್ದರು" ಎಂದು ಬಾಲಕ ತಿಳಿಸಿದ್ದಾನೆ.
ಮೂವರು ಕಿಡಿಗೇಡಿಗಳ ಬಂಧನ: ಪಾಂಡುರ್ನಾ ಎಸ್ಪಿ ಸುಂದರ್ ಸಿಂಗ್ ಕಾನೇಶ್ ಈ ಘಟನೆಯ ಕುರಿತು ಪ್ರತಿಕ್ರಿಯಿಸಿ, "ಹಲ್ಲೆಯ ವಿಡಿಯೋ ನೋಡಿ ಓರ್ವ ಸಂತ್ರಸ್ತ ಬಾಲಕನ ತಂದೆ ಮೊಹಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೀಡಿಯೊ ಆಧಾರದಲ್ಲಿ ನಾವು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ" ಎಂದರು.
ಇದನ್ನೂ ಓದಿ: ಸಿಗರೇಟ್, ಕಾದ ಕಬ್ಬಿಣದಿಂದ ಚಿತ್ರಹಿಂಸೆ; ದಂಪತಿಯ ಕ್ರೌರ್ಯಕ್ಕೆ ಮನೆಗೆಲಸಕ್ಕಿದ್ದ ಬಾಲಕಿ ಸಾವು, 6 ಮಂದಿ ಬಂಧನ