ವಾರಾಣಸಿ, ಉತ್ತರಪ್ರದೇಶ: ಭಸ್ಮ ಮತ್ತು ತಿಲಕವನ್ನು ಧರಿಸಿದ ನಾಗ ಸಂತರು ಕುಣಿದು ಕುಪ್ಪಳಿಸುತ್ತಾ ಮುಂದೆ ಸಾಗುತ್ತಿದ್ದರು. ಅತ್ತ ವಿದೇಶಿ ಭಕ್ತರಲ್ಲಿ ಮದುವೆ ಕಣ್ತುಂಬಿಕೊಳ್ಳುವ ತವಕ. ಈ ನಡುವೆ ವರನಂತೆ ಅಲಂಕೃತಗೊಂಡ ಕಾಶಿ ವಿಶ್ವನಾಥ, ರಥವೇರಿ ಸಾಗುತ್ತಿದ್ದರೆ, ಅದರ ಹಿಂದೆಯೇ ಹರ ಹರ ಮಹಾದೇವ್ ಎಂಬ ಮಂತ್ರ ಘೋಷಗಳ ಅನುರುಣನ.
ಯೆಸ್ ಇಂತಹ ದೃಶ್ಯಗಳು ಕಂಡು ಬಂದಿದ್ದು ಕಾಶಿಯ ಶಿವನ ದೇಗುಲದಲ್ಲಿ. ಮಹಾಶಿವರಾತ್ರಿಯಂದು ಇಲ್ಲಿ ಕಾಶಿ ವಿಶ್ವನಾಥ ಹಾಗೂ ಪಾರ್ವತಿಯ ವಿವಾಹ ನಡೆಯುವುದು ಸಂಪ್ರದಾಯ. ಶಿವರಾತ್ರಿಯ ಈ ದಿನದಂತೆ ಶಿವ- ಪಾರ್ವತಿಯರ ಸಂಗಮ ಆಗಿತ್ತು ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಈ ಸಂಪ್ರದಾಯವನ್ನು ತಲತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಈ ವಿವಾಹದ ಹಿನ್ನೆಲೆಯಲ್ಲಿ ವಿಶ್ವನಾಥ್ ನನ್ನು ರಾಜನಂತೆ ಅಲಂಕರಿಸಲಾಗಿತ್ತು. ವರನ ವೇಷದಲ್ಲಿ ಶಿವ ಕಂಗೊಳಿಸುತ್ತಿದ್ದರೆ, ಮಥುರಾದಿಂದ ತಂದ ವಿಶೇಷ ಕೆಂಪು ಲೆಹೆಂಗಾದಿಂದ ಪಾರ್ವತಿಯನ್ನು ಅಲಂಕರಿಸಲಾಗಿತ್ತು.

ಹರಿದು ಬಂದ ಭಕ್ತ ಸಾಗರ: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ವಿಶ್ವನಾಥನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆಶೀರ್ವಾದ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ ದಂಡೇ ದೇಗುಲಕ್ಕೆ ಆಗಮಿಸಿತ್ತು . 5.ಕಿಮೀ ಉದ್ದದ ಸರತಿ ಸಾಲಿನಲ್ಲಿ ಬೆಳಗಿನಿಂದ ಮಧ್ಯರಾತ್ರಿವರೆಗೆ ಸುಮಾರು 9,07,435 ಭಕ್ತರು ದರ್ಶನ ಪಡೆದು, ಶಿವನ ಕೃಪೆಗೆ ಪಾತ್ರರಾದರು . ಬೆಳಗ್ಗೆ ವಿವಿಧ ಅಖಾಡಗಳಿಂದ ನಾಗಾ ಯತಿಗಳು ಮೆರವಣಿಗೆ ಮೂಲಕ ಕಾಶಿ ವಿಶ್ವನಾಥನ ಅನುಗ್ರಹಕ್ಕೆ ಪಾತ್ರರಾದರು.

ವಿಶ್ವನಾಥನ ದರುಶನಕ್ಕಾಗಿ ವಿವಿಧ ದ್ವಾರಗಳ ನಿರ್ಮಾಣ: ಸನ್ಯಾಸಿಗಳು ಸೇರಿದಂತೆ ಸಾಮಾನ್ಯ ಜನರವರೆಗೆ ಎಲ್ಲರೂ ವಿಶ್ವನಾಥನ ದರ್ಶನ ಮಾಡಿ ಆಶೀರ್ವಾದ ಪಡೆದರು. ಭಕ್ತರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿವಿಧ ದ್ವಾರಗಳನ್ನು ನಿರ್ಮಾಣ ಮಾಡಿತ್ತು . ಈ ವೇಳೆ ವಿಶ್ವನಾಥ್ನ ಬಾರಾತ್ (ವರನ ದಿಬ್ಬಣ) ಕೂಡ ನಡೆಯಿತು. ಬಾರಾತ್‌ನ ಮೆರವಣಿಗೆಯಲ್ಲಿ ಅನೇಕ ಸ್ತಬ್ಧಚಿತ್ರಗಳು ಸಹ ಸಾಗಿದವು. ಇದನ್ನೂ ನೋಡಲು ಭಕ್ತರು ಕೂಡ ಕಾತರದಿಂದ ಕಾದು, ನಿಂತು ಬಾರಾತ್ ವೀಕ್ಷಿಸಿ ಆನಂದಿತರಾದರು.

ಪ್ರಥಮ ಪ್ರಹಾರ ಆರತಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1.30ಕ್ಕೆ ಮೊದಲ ಪ್ರಥಮ ಪ್ರಹಾರ ಆರತಿ ನೆರವೇರಿತು. ಷೋಡಶೋಪಚಾರದಿಂದ ವಿಶ್ವನಾಥನ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾ ಆರತಿ ನಡೆದು, ಬಳಿಕ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಯಿತು.


ಇದನ್ನೂ ಓದಿ: ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ'
ಇದನ್ನೂ ಓದಿ: ಮಹಾಶಿವರಾತ್ರಿ ನಿಮಿತ್ತ ನದಿಗಿಳಿದು ಸ್ನಾನ: ಮೂವರು ಸಹೋದರಿಯರು, ಓರ್ವ ಬಾಲಕ ಸೇರಿ ಆರು ಮಂದಿ ಸಾವು!