ದೌಸಾ (ರಾಜಸ್ಥಾನ): 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಐದು ವರ್ಷದ ಬಾಲಕ ಆರ್ಯನ್ ರಕ್ಷಣೆಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಕಳೆದ 48 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು,ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆ ತರಲು ಸಾಧ್ಯವಾಗಿಲ್ಲ. ಇದೇ ವೇಳೆ, ಮೂರು ಬಾರಿ ಫೈಲಿಂಗ್ ಯಂತ್ರ ಕೈಕೊಟ್ಟಿದೆ.
ಯಂತ್ರ ಕೈಕೊಟ್ಟಿದ್ದರಿಂದ ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈ ನಡುವೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಸುತ್ತಮುತ್ತ ಸೇರಿರುವ ಜನರು ಆರ್ಯನ್ ಸುರಕ್ಷಿತವಾಗಿ ಬದುಕಿ ಬರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ.
ಪರ್ಯಾಯ ಕೊಳವೆ ಬಾವಿ ಕೊರೆಯುತ್ತಿರುವ ಪಡೆಗಳು: ಇಲ್ಲಿಯವರೆಗೆ ರಕ್ಷಣಾ ತಂಡ 120 ಅಡಿ ಆಳದ ಕೊಳವೆ ಬಾವಿಯೊಂದನ್ನು ತೆರೆದಿದೆ. 150 ಅಡಿ ಆಳದ ಪರ್ಯಾಯ ಬಾವಿ ಕೊರೆದ ಬಳಿಕ ಅದಕ್ಕೆ ಪಿಟ್ ನಿರ್ಮಾಣ ಮಾಡಲಾಗುವುದು. ಬಳಿಕ ಪಿಪಿ ಕಿಟ್ ಹಾಕಿಕೊಂಡ ಯೋಧರು ಅದರೊಳಗೆ ಇಳಿದು ಆರ್ಯನ್ ರಕ್ಷಣೆ ಮಾಡಲಿದ್ದಾರೆ ಎಂದು ಎನ್ಡಿಆರ್ಎಫ್ ಕಮಾಂಡೆಂಟ್ ಯೋಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪಿಟ್ನಲ್ಲಿ ನೀರಿನ ಮಟ್ಟ ಏರಿಕೆ ಸಾಧ್ಯತೆ: ರಕ್ಷಣಾ ಕಾರ್ಯಾಚರಣೆ ಪಿಟ್ನಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಕೂಡ ಇದೆ. ಅನೇಕ ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಪಿಟ್ನಲ್ಲಿ ಯೋಧರನ್ನು ಇಳಿಸುವ ಮುನ್ನ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಎಲ್ಲ ಪ್ರಯತ್ನಗಳು ಯಶಸ್ವಿಯಾಗುತ್ತದೆ ಎಂಬ ಖಾತ್ರಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ ರಕ್ಷಣಾ ತಂಡ. ಮಷಿನ್ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಇದನ್ನು ದುರಸ್ತಿ ಮಾಡಲಾಗುತ್ತಿದೆ. ಶೀಘ್ರದಲ್ಲಿ ಇದನ್ನು ಸರಿಪಡಿಸಿ ಮತ್ತೆ ಕೆಲಸ ಆರಂಭಿಸಲಾಗುವುದು ಎಂದು ರಕ್ಷಣಾ ಪಡೆಗಳ ನೇತೃತ್ವ ವಹಿಸಿದವರು ಹೇಳಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ರಾಜಸ್ಥಾನದ ದೌಸಾ ಜಿಲ್ಲೆಯ ಕಲಿಖಂಡ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟವಾಡುವಾಗ ಬಾಲಕ ಈ ಕೊಳವೆ ಬಾವಿಗೆ ಬಿದ್ದಿದ್ದ. ಈ ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದೆ. ಇದೇ ವೇಳೆ, ಮಗು ಸುರಕ್ಷಿತವಾಗಿ ಮೇಲೆ ಬರಲಿ ಎಂದು ಕುಟುಂಬ ಕೂಡ ಕಾದು ಕುಳಿತಿದ್ದು, ಆಹಾರ ತ್ಯಜಿಸಿರುವ ತಾಯಿ ಮಗನ ಕನವರಿಕೆ ಮಾಡುತ್ತಿದ್ದಾರೆ.
ಘಟನೆ ಬಗ್ಗೆ ಜಿಲ್ಲಾಡಳಿತದ ಪ್ರತಿಕ್ರಿಯೆ ಹೀಗಿದೆ: ಘಟನೆ ಕುರಿತು ಮಾತನಾಡಿರುವ ಜಿಲ್ಲಾಡಳಿತ, ಕಳೆದ 45 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಬಾಲಕ ಜೀವಂತವಾಗಿ ಮರಳುವ ಬಗ್ಗೆ ಭರವಸೆ ಉಳಿದಿಲ್ಲ. ಕಾರ್ಯಾಚರಣೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಡಿಸಿ ದೇವೇಂದ್ರ ಯಾದವ್ ತಿಳಿಸಿದರು.
ಕಾರ್ಯಾಚರಣೆಯ ಪ್ಲಾನ್ ಬಿ ಏನು?: ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನಲೆ ಇದೀಗ ಜಿಲ್ಲಾಡಳಿತ ಪ್ಲಾನ್ ಬಿ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ. ಶೀಘ್ರದಲ್ಲೇ ಇದು ಯಶಸ್ವಿಯಾಗಲಿದೆ ಎಂಬ ನಿರೀಕ್ಷೆಯನ್ನು ಕೂಡಾ ಇಟ್ಟುಕೊಂಡಿದೆ. ಕೊಳವೆ ಬಾವಿಗೆ ಸಮೀಪದಲ್ಲಿ 4 ರಿಂದ 5 ಅಡಿಯಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆದು ಅದರ ಮೂಲಕ ಎನ್ಡಿಆರ್ಎಫ್ ಸಿಬ್ಬಂದಿ ಇಳಿಸಿ, ಬಾಲಕನನ್ನು ಮೇಲಕ್ಕೆ ತರುವ ಪ್ರಯತ್ನದಲ್ಲಿದೆ.
ಇದನ್ನೂ ಓದಿ: 'ಟೆಂಪಲ್ ರನ್' ಟೂರ್ ಪ್ಯಾಕೇಜ್: ಕೇರಳ & ತಮಿಳುನಾಡಿನ ಪ್ರಸಿದ್ಧ ದೇವಾಲಯಗಳ ದಿವ್ಯದರ್ಶನ