ಅರಿಯಲೂರು(ತಮಿಳುನಾಡು): ಕೊಳ್ಳಿಡಾಂ ನದಿಯ ದಡದಲ್ಲಿ ಮೇಕೆ ಮೇಯಿಸುತ್ತಿದ್ದ ವೃದ್ಧೆಯೊಬ್ಬರ ಮೇಲೆ ಮೊಸಳೆ ದಾಳಿ ಮಾಡಿದ ಘಟನೆ ಶನಿವಾರ ಜಯಂಕೊಂಡಂನಲ್ಲಿ ನಡೆದಿದೆ. ನಡುಕ್ಕಂಜನಕೊಳ್ಳೈ ಗ್ರಾಮದ ಚಿನ್ನಮ್ಮ (70) ಮೊಸಳೆ ದಾಳಿಗೊಳಗಾದ ವೃದ್ಧೆ. ಮೊಸಳೆ ದಾಳಿಯಿಂದಾಗಿ ವೃದ್ಧೆ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಜಯಂಗೊಂಡಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನದಿಯ ದಡದ ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆ ಏಕಾಏಕಿ ವೃದ್ಧೆ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ವೃದ್ಧೆಯ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ವೃದ್ಧೆಯನ್ನು ಮೊಸಳೆಯಿಂದ ರಕ್ಷಿಸಿದ್ದಾರೆ. ವೃದ್ಧೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಕೆ ಮೇಯಿಸಲು ಹೋದ ವೃದ್ಧೆಯ ಮೇಲೆ ಮೊಸಳೆ ದಾಳಿ ಮಾಡಿದ ವಿಷಯ ತಿಳಿದ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಈ ಕೊಲ್ಲಿಡಂ ನದಿಯಲ್ಲಿ ಮೊಸಳೆಗಳು ಕಾಣಿಸಿಕೊಂಡಿರುವ ಬಗ್ಗೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಥಳೀಯರು ನದಿಯಲ್ಲಿರುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕಾರ-ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ, ಇಬ್ಬರು ಸಾವು - HORRIBLE ACCIDENT