ನವದೆಹಲಿ : ಸಂಕ್ರಾಂತಿ ಮುನ್ನಾ ದಿನದಿಂದ ಆರಂಭವಾದ 45 ದಿನಗಳ ಕಾಲ ಸಾಗಿದ ಮಹಾ ಕುಂಭಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದ 1 ಟ್ರಿಲಿಯನ್ ಆರ್ಥಿಕತೆ ಗುರಿಗೆ ಕೂಡ ಇದು ಸಹಾಯ ಮಾಡಿದ್ದು, ಮಹಾ ಕುಂಭಮೇಳವು 3 ಲಕ್ಷ ಕೋಟಿ ರೂಪಾಯಿ ವಹಿವಾಟಿನ ತೆರಿಗೆಯು ರಾಜ್ಯದ ಆರ್ಥಿಕತೆಗೆ ಬಲ ತಂದಿದೆ.
ಜನವರಿ 13ರಿಂದ ಫೆ. 26ರ ವರೆಗೆ ಜರುಗಿದ ಮಹಾಕುಂಭ ಮೇಳದಲ್ಲಿ 66.21 ಕೋಟಿ ಭಕ್ತರು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಉದ್ಯಮ ತಜ್ಞರ ಪ್ರಕಾರ, ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿನ ಸರಕು ಮತ್ತು ಸೇವೆಯ ಮೂಲಕ 3 ಲಕ್ಷ ಕೋಟಿ ಉದ್ಯಮ ಚಟುವಟಿಕೆ ನಡೆದಿದೆ ಎಂದಿದ್ದಾರೆ.
ನಿರೀಕ್ಷೆಗೆ ಮೀರಿದ ವಹಿವಾಟು, ಭಕ್ತರು : ಮಹಾ ಕುಂಭಮೇಳ ಆರಂಭಕ್ಕೆ ಮೊದಲ 40 ಕೋಟಿ ಜನರು ಆಗಮನ ಮತ್ತು 2 ಲಕ್ಷ ಕೋಟಿ ಮೌಲ್ಯದ ಉದ್ಯಮದ ವಹಿವಾಟಿನ ಕುರಿತು ಅಂದಾಜಿಸಲಾಗಿತ್ತು. ಆದರೆ, ದೇಶ ಮತ್ತು ವಿದೇಶಗಳಿಂದ ಕಂಡುಬಂದ ಅಭೂತಪೂರ್ವ ಬೆಂಬಲದಿಂದ 66 ಕೋಟಿ ಜನರು ಈ ಧಾರ್ಮಿಕ ಮೇಳದಲ್ಲಿ ಭಾಗಿಯಾಗಿದ್ದು, ಇದು 3 ಲಕ್ಷ ಕೋಟಿಗೂ ಹೆಚ್ಚಿನ ವಹಿವಾಟಿಗೆ ಕಾರಣವಾಯಿತು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ತಿಳಿಸಿದರು.
ಮಹಾ ಕುಂಭ ಮೇಳದಿಂದ ವಿಮಾನ ದರವು ಕೂಡ ಹೆಚ್ಚಳಗೊಂಡಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಹಾಗೂ ವಾರದ ನಡುವಿನ ಸೀಸನ್ ಹೊರತಾದ ಸಮಯದಲ್ಲಿ ಇದು ಸ್ಥಿರವಾಗಿರಲಿದೆ.
ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗೆ ಸಾಕ್ಷಿ : ಅತಿಥ್ಯ, ವಸತಿ, ಆಹಾರ ಮತ್ತು ಪಾನೀಯ ವಲಯ, ಸಾರಿಗೆ ಮತ್ತು ಲಾಜಿಸ್ಟಿಕ್, ಧಾರ್ಮಿಕ ವಸ್ತುಗಳು, ಪೂಜೆ ಮತ್ತು ಕರಕುಶಲ, ಜವಳಿ ಮತ್ತಿತರ ಗ್ರಾಹಕರ ಸರಕುಗಳು ಸೇರಿದಂತೆ ಹಲವು ಉದ್ಯಮ ವಲಯಗಳಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಕಂಡು ಬಂದಿವೆ.
ಈ ಆರ್ಥಿಕ ಚಟುವಟಿಕೆ ಕೇವಲ ಪ್ರಯಾಗ್ರಾಜ್ನಲ್ಲಿ ಮಾತ್ರವಲ್ಲದೇ, ಸುತ್ತಮುತ್ತ 100-150 ಕಿ.ಮೀ. ವ್ಯಾಪ್ತಿಯ ಉದ್ಯಮಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಇದು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ.
ಪ್ರಯಾಗ್ರಾಜ್ನ ಮೂಲ ಸೌಕರ್ಯಕ್ಕಾಗಿ ಸರ್ಕಾರ ₹7,500 ಕೋಟಿಯನ್ನು ವ್ಯಯಿಸಿತ್ತು. ಇದರ ಮೂಲಕ 14 ಫ್ಲೈಓವರ್. 6 ಅಂಡರ್ಪಾಸ್, 200ಕ್ಕೂ ಹೆಚ್ಚು ರಸ್ತೆ ಅಗಲೀಕರಣ, ಹೊಸ ಕಾರಿಡಾರ್, ರೈಲ್ವೆ ನಿಲ್ದಾಣದ ವಿಸ್ತರಣೆ ಮತ್ತು ಆಧುನಿಕ ವಿಮಾನ ನಿಲ್ದಾಣದ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಹೆಚ್ಚುವರಿಯಾಗಿ 1,500 ಕೋಟಿ ರೂಪಾಯಿಯನ್ನು ಮಹಾ ಕುಂಭ ಮೇಳದ ಸಿದ್ಧತೆಗೆ ವಿನಿಯೋಗಿಸಲಾಗಿತ್ತು. (ಐಎಎನ್ಎಸ್)
ಇದನ್ನೂ ಓದಿ: ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ'
ಇದನ್ನೂ ಓದಿ: ಕಾಶಿಯಲ್ಲಿ ಶಿವ - ಪಾರ್ವತಿಗೆ ಮದುವೆ; ಮಹಾಶಿವರಾತ್ರಿಯಂದು 9 ಲಕ್ಷ ಭಕ್ತರು ಭೇಟಿ