ಜಮ್ಮು: ಕಳೆದೊಂದು ತಿಂಗಳಿನಿಂದ ಸಾಗಿರುವ ಪವಿತ್ರ ಅಮರನಾಥ ಯಾತ್ರೆಯಲ್ಲಿ 4.71 ಲಕ್ಷ ಯಾತ್ರಿಕರು ಭಾಗಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಕಳೆದ ವರ್ಷ ಸಂಪೂರ್ಣ ಅಮರನಾಥ ಯಾತ್ರೆಯಲ್ಲಿ 4.54 ಲಕ್ಷ ಯಾತ್ರಿಕರು ಪಾಲ್ಗೊಂಡು ಶಿವಲಿಂಗದ ದರ್ಶನ ಪಡೆದಿದ್ದರು. ಈ ಬಾರಿ ಯಾತ್ರೆ ಪೂರ್ಣಗೊಳ್ಳಲು ಇನ್ನೂ 20 ದಿನ ಬಾಕಿ ಉಳಿದಿದ್ದು, ಕಳೆದ 32 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಯಾತ್ರಿಕರು ದರ್ಶನ ಪಡೆದಿದ್ದಾರೆ.
ಇಂದು 1,654 ಯಾತ್ರಿಕರನ್ನು ಒಳಗೊಂಡ ಹೊಸ ಬ್ಯಾಚ್ ಜಮ್ಮುವಿನ ಭಗವತಿ ನಗರ್ ಯಾತ್ರಿ ನಿವಾಸ್‌ನಿಂದ ಎರಡು ಭದ್ರತಾ ಪಡೆಯೊಂದಿಗೆ ಮುಂಜಾನೆ 3.20ಕ್ಕೆ ಹೊರಟಿತು. ನಿನ್ನೆ 5 ಸಾವಿರ ಯಾತ್ರಿಕರು ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊದಲ ಬೆಂಗಾವಲು ಪಡೆಯಲ್ಲಿ 17 ವಾಹನದಲ್ಲಿ 456 ಯಾತ್ರಿಕರು ಉತ್ತರ ಕಾಶ್ಮೀರದ ಬಲ್ಟಾಲ್ ಬೇಸ್ ಕ್ಯಾಂಪ್ನಿಂದ ತೆರಳಿದ್ದಾರೆ. ಎರಡನೇ ಬೆಂಗಾವಲು ಪಡೆಯಲ್ಲಿ 34 ವಾಹನದಲ್ಲಿ 1,198 ಯಾತ್ರಿಕರು ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್ನಿಂದ ತೆರಳಿದ್ದಾರೆ.
ಯಾತ್ರೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಭದ್ರತೆ, ಸಮುದಾಯ ಅಡುಗೆ ಕೋಣೆಗಳು, ಸಾರಿಗೆ ಮತ್ತು ಬೇಸ್ ಕ್ಯಾಂಪ್‌ಗಳು ಮತ್ತು ಜಮ್ಮುವಿನಿಂದ ಕಾಶ್ಮೀರದವರೆಗಿನ ಹೆದ್ದಾರಿಯುದ್ದಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಅಮರನಾಥ ಗುಹೆ ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತರು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ (ಪಹಲ್ಗಾಮ್) ಮಾರ್ಗದಿಂದ ಅಥವಾ ಉತ್ತರ ಕಾಶ್ಮೀರ (ಬಾಲ್ಟಾಲ್) ಮಾರ್ಗದಿಂದ ಈ ಗುಹಾ ದೇವಾಲಯ ತಲುಪುತ್ತಾರೆ.
ಸುಸೂತ್ರ ಯಾತ್ರೆಗೆ ಮತ್ತೊಂದು ಪ್ರಮುಖ ಸಹಾಯಹಸ್ತ ಎಂದರೆ ಸ್ಥಳೀಯರು ನೀಡುತ್ತಿರುವ ನೆರವು. ಸ್ಥಳೀಯರು ಕುದುರೆಗಳು ಮತ್ತು ಪೋರ್ಟರ್ ಸಹಾಯದಿಂದ ಯಾತ್ರಾರ್ಥಿಗಳನ್ನು ಶಿಖರ ಹತ್ತಲು ಸಹಾಯ ಮಾಡುತ್ತಿದ್ದಾರೆ. ಯಾತ್ರಾರ್ಥಿಗಳ ಸಹಾಯಕ್ಕಾಗಿ ಬಲ್ಟಾಲ್ ಮತ್ತು ಚಂದನ್ವಾರಿಯಲ್ಲಿ ಹೆಲಿಕ್ಯಾಪ್ಟರ್ ಸೇವೆ ಕೂಡ ಲಭ್ಯ. ಶಾಂತಿಯುತ ಮತ್ತು ಸುಗಮ ಯಾತ್ರೆಗಾಗಿ ಈ ಬಾರಿ ಸಿಎಪಿಎಫ್ ಮತ್ತು ಜಮ್ಮು ಕಾಶ್ಮೀರದ ಪೋಲೀಸರ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು ಯಾವುದೇ ಸಮಸ್ಯೆಯಾಗದಂತೆ ಎಲ್ಲ ಭದ್ರತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಜೂನ್ 29ರಿಂದ ಆರಂಭವಾಗಿರುವ ಈ ವರ್ಷದ 52 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 19ರಂದು ರಕ್ಷಾ ಬಂಧನ್ ಹಾಗೂ ಶ್ರಾವಣ ಪೂರ್ಣಿಮೆಯ ದಿನ ಮುಕ್ತಾಯಗೊಳ್ಳಲಿದೆ.(ಐಎಎನ್ಎಸ್)
ಇದನ್ನೂ ಓದಿ: ಮುಂದುವರೆದ ಅಮರನಾಥ ಯಾತ್ರೆ: 24ದಿನದಲ್ಲಿ 4 ಲಕ್ಷ ಯಾತ್ರಿಕರಿಂದ ದರ್ಶನ