ಋಷಿಕೇಶ (ಉತ್ತರಾಖಂಡ) : ಗಂಗಾ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ದ್ವೀಪವೊಂದರಲ್ಲಿ ಸಿಲುಕಿದ್ದ ಸುಮಾರು 100 ಭಕ್ತರನ್ನು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಜಾನಕಿ ಝೂಲಾ ದ್ವೀಪದಲ್ಲಿ ನಡೆದಿದೆ. ತಮ್ಮ ಪ್ರಾಣ ರಕ್ಷಿಸಿದ ಪೊಲೀಸರಿಗೆ ಭಕ್ತರು ಧನ್ಯವಾದ ತಿಳಿಸಿದ್ದಾರೆ.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹರಿಯಾಣದ ಭಕ್ತರು ಗಂಗಾ ಸ್ನಾನಕ್ಕಾಗಿ ಜಾನಕಿ ಝುಲಾ ಘಾಟ್ಗೆ ತೆರಳಿದ್ದರು. ನದಿಯ ನೀರಿನ ಮಟ್ಟ ಕಡಿಮೆ ಇದ್ದುದರಿಂದ ದ್ವೀಪದವರೆಗೆ ತೆರಳಿದ್ದರು. ಆದರೆ, ಈ ವೇಳೆ ಗಂಗಾ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಆಗಿದ್ದರಿಂದ ಪ್ರಾಣ ಭಯದಲ್ಲಿ ಚೀರಾಟ ಮತ್ತು ಕೂಗಾಟ ನಡೆಸುತ್ತಿದ್ದರು. ಇವರ ಕೂಗಾಟದ ಶಬ್ಧ ಕೇಳಿದ ಜಲ್ ಪೊಲೀಸ್ ಸಿಬ್ಬಂದಿ, ದ್ವೀಪದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ ಅವರ ಜೀವ ಉಳಿಸಿದ್ದಾರೆ.
''ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹರಿಯಾಣದಿಂದ ಸುಮಾರು 100 ಭಕ್ತರು ಗಂಗಾ ಸ್ನಾನಕ್ಕಾಗಿ ಜಾನಕಿ ಝುಲಾ ಘಾಟ್ಗೆ ಭೇಟಿ ನೀಡಿದ್ದರು. ಗಂಗೆಯ ನೀರಿನ ಮಟ್ಟ ಕಡಿಮೆ ಇದ್ದುದರಿಂದ ಎಲ್ಲಾ ಭಕ್ತರು ಗಂಗೆಯ ಮಧ್ಯದಲ್ಲಿ ರೂಪುಗೊಂಡ ದ್ವೀಪದಲ್ಲಿ ಸ್ನಾನಕ್ಕೆ ತೆರಳಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಗಂಗೆಯ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿಕೆಯಾಗಿತ್ತು. ಅಲ್ಲಿಂದ ಹೊರಬರಲಾಗದೇ ಎಲ್ಲಾ ಭಕ್ತರು ದ್ವೀಪದಲ್ಲಿ ಸಿಲುಕಿಕೊಂಡರು. ನೀರಿನ ಮಟ್ಟ ಏರುತ್ತಲೇ ಇದ್ದುದರಿಂದ ತಮ್ಮ ಪ್ರಾಣ ಉಳಿಸಿಕೊಳ್ಳಲು ಕೂಗಾಡಲು ಪ್ರಾರಂಭಿಸಿದ್ದರು. ಇವರ ಶಬ್ಧ ಕೇಳಿದ ಜಲ್ ಪೊಲೀಸ್ ಸಿಬ್ಬಂದಿ ರಾಜೇಂದ್ರ ಸಿಂಗ್, ರವಿ ರಾಣಾ, ವಿದೇಶ್ ಚೌಹಾಣ್, ಪುಷ್ಕರ್ ರಾವತ್, ಮಹೇಂದ್ರ ಚೌಧರಿ ಎಂಬುವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭಕ್ತರನ್ನು ರಕ್ಷಿಸಿದ್ದಾರೆ. ತಮ್ಮ ಜೀವ ಉಳಿಸಿದ ಪೊಲೀಸರಿಗೆ ಭಕ್ತರು ಕೃತಜ್ಞತೆ ಸಲ್ಲಿಸಿದ್ದಾರೆ. ಗಂಗಾ ನದಿಯ ನೀರಿನ ಮಟ್ಟ ಆಗಾಗ ಕಡಿಮೆಯಾಗಿರುವುದರಿಂದ ಜನರು ನದಿಗೆ ಪ್ರವೇಶಿಸುತ್ತಾರೆ. ಆದರೆ ತೆಹ್ರಿ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವುದರಿಂದ ಗಂಗಾ ನದಿಯ ನೀರಿನ ಮಟ್ಟ ಏರುತ್ತಿದೆ. ಇದು ಕೂಡ ಹಾಗೆಯೇ ಆಗಿದೆ. ಹಿಂದೆಯೂ ಇಂತಹ ಘಟನೆಗಳು ಸಂಭವಿಸಿವೆ'' ಎಂದು ಮುನಿ ಕಿ ರೇತಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರದೀಪ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಹಾಶಿವರಾತ್ರಿ ನಿಮಿತ್ತ ನದಿಗಿಳಿದು ಸ್ನಾನ: ಮೂವರು ಸಹೋದರಿಯರು, ಓರ್ವ ಬಾಲಕ ಸೇರಿ ಆರು ಮಂದಿ ಸಾವು! - 6 PEOPLE DIED