'ದಿನಕ್ಕೆ ಒಂದು ಮೊಟ್ಟೆ ಸೇವನೆ ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ' ಎಂಬ ಜನಪ್ರಿಯ ಮಾತಿಗೆ. ಇದು ಕೇವಲ ಮಾತಿಗೆ ಸೀಮಿತವಲ್ಲ ಎಲ್ಲರ ನೆಚ್ಚಿನ ಸೂಪರ್ ಫುಡ್ ಆಗಿರುವ ಮೊಟ್ಟೆ ಸಾಕಷ್ಟು ಪ್ರೊಟೀನ್ ಅಂಶವನ್ನು ಹೊಂದಿದೆ. ಹೀಗಿರುವುದರಿಂದಲೇ ಮಕ್ಕಳು, ಗರ್ಭಿಣಿಯರು ಹೆಚ್ಚಾಗಿ ಮೊಟ್ಟೆಯನ್ನು ಸೇವಿಸಬೇಕು. ದಿನಕ್ಕೊಂದು ಬೇಯಿಸಿದ ಮೊಟ್ಟೆ, ಒಂದು ಲೋಟ ಹಾಲು ಕುಡಿದರೆ ಆರೋಗ್ಯ ಗಟ್ಟಿ ಎಂಬ ಮಾತಿದೆ. ಇಷ್ಟು ಆಹಾರ ನಿಮ್ಮ ಆರೋಗ್ಯವನ್ನು ಕಾಪಾಡುತ್ತಾ ನಿಮಗೆ ಬೇಕಾದ ಶಕ್ತಿಯನ್ನು ನೀಡುತ್ತದೆ.
ಆರೋಗ್ಯದ ವಿಚಾರ ಬಂದಾಗ ಉತ್ತಮ ಆಹಾರ ಪದ್ಧತಿ, ಯೋಗ, ವ್ಯಾಯಾಮ, ನಿಯಮಿತ ನಡಿಗೆ ಇವೆಲ್ಲವನ್ನು ನಾವು ಅನುಸರಿಸುತ್ತೇವೆ. ಇವೆಲ್ಲವು ಎಷ್ಟು ಪ್ರಮುಖವೋ ಅಷ್ಟೇ ಮೊಟ್ಟೆಗೂ ಇದೆ. ಬಾಯಿಗೆ ರುಚಿ ಕೊಡುತ್ತಾ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಇದು ನೀಡುತ್ತದೆ. ಪ್ರೋಟೀನ್‌ನ ಸಮೃದ್ಧ ಮೂಲವಾಗಿರುವ ಮೊಟ್ಟೆ ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಒಟ್ಟಾರೆ ಮೊಟ್ಟೆಯ ಪ್ರಯೋಜನಗಳೇನು ಎಂಬುದನ್ನು ನೋಡುವುದಾದರೆ,
ಯಾವೆಲ್ಲ ಪೌಷ್ಟಿಕಾಂಶಗಳಿವೆ?: ಒಂದು ಮೊಟ್ಟೆಯಲ್ಲಿ ವಿಟಮಿನ್ ಎ, ಬಿ5, ಬಿ12, ಡಿ, ಇ, ಕೆ, ಬಿ6, ಫೋಲೇಟ್, ಫಾಸ್ಫರಸ್, ಸೆಲೆನಿಯಮ್, ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಈ ಅಂಶವನ್ನೆಲ್ಲ ಒಂದೆ ಆಹಾರ ಹೊಂದಿರುವುದರಿಂದ ನಿಮ್ಮ ಆಹಾರದಲ್ಲಿ ಮೊಟ್ಟೆ ಬಳಸುವುದು ಉತ್ತಮ.
ಮೊಟ್ಟೆ ಪ್ರೊಟೀನ್ನ ಉತ್ತಮ ಮೂಲ: ಪ್ರೊಟೀನ್ ಗಳು ಆರೋಗ್ಯಕರ ಆಹಾರದ ಪ್ರಮುಖ ಭಾಗವಾಗಿದೆ. ಮೂಳೆಗಳು, ಕಾರ್ಟಿಲೆಜ್, ಸ್ನಾಯುಗಳು, ಮತ್ತು ಚರ್ಮದ ಬಿಲ್ಡಿಂಗ್ ಬ್ಲಾಕ್ಸ್ಗಳ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಮತ್ತು ದುರ್ಬಲ ಮೂಳೆಗಳಿರುವವರೂ ಹೆಚ್ಚಾಗಿ ಸೇವಿಸಿ.
ಆರೋಗ್ಯಕರ ಕೂದಲು ಮತ್ತು ಚರ್ಮಕ್ಕಾಗಿ: ಪ್ರತಿಯೊಬ್ಬರಿಗೂ ತಮ್ಮ ಕೂದಲಿನ ಮೇಲೆ ಅತಿಯಾದ ಪ್ರೀತಿ ಕಾಳಜಿ ಇರುತ್ತದೆ. ಅಂಥವರು ಮೊಟ್ಟೆ ಸೇವಿಸಿ, ಯಾಕೆಂದರೆ ಇದರಲ್ಲಿ ನಿಮ್ಮ ಕೇಶಗಳಿಗೆ ಬೇಕಾದ ಕೆಲವು ಪ್ರಮುಖ ವಿಟಮಿನ್‌ಗಳು ಸಮೃದ್ಧವಾಗಿದೆ. B2, B5 ಮತ್ತು B12 ಮಾನವನ ಚರ್ಮಕ್ಕೆ ಬಹಳ ಒಳ್ಳೆಯದು. ನಿಮ್ಮ ಉರಿಯೂತದ ಚರ್ಮವನ್ನು ಸರಿಪಡಿಸುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಎ, ಬಯೋಟಿನ್, ವಿಟಮಿನ್ ಇ ಮತ್ತು ಫೋಲೇಟ್ ಇದ್ದು ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.
ಬುದ್ದಿ ಶಕ್ತಿ ಹೆಚ್ಚಿಸುವಲ್ಲಿ ಮೊಟ್ಟೆಯದ್ದು ಬಹು ದೊಡ್ಡ ಪಾತ್ರ: ವಿಟಮಿನ್ ಬಿ 6 ಮತ್ತು ಬಿ 12, ಫೋಲೇಟ್ ಮತ್ತು ಕೋಲೀನ್ನಂತಹ ಮೆದುಳಿನ ಕಾರ್ಯಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಮೊಟ್ಟೆಗಳಲ್ಲಿ ಹೇರಳವಾಗಿವೆ. ಕೋಲೀನ್ ಆರೋಗ್ಯಕರ ಜೀವಕೋಶದ ಚಟುವಟಿಕೆಗೆ ಅವಶ್ಯಕವಾಗಿದೆ ಮತ್ತು ಶಿಶುಗಳಲ್ಲಿ ಅರಿವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಅರಿವಿನ ಕುಸಿತವನ್ನು ತಡೆಗಟ್ಟುತ್ತದೆ.
ಕಣ್ಣಿನ ದೃಷ್ಟಿ ಸುಧಾರಣೆ: ಕಣ್ಣಿನ ಆರೋಗ್ಯಕ್ಕೆ ಮುಖ್ಯವಾದ ವಿಟಮಿನ್ ಎ ಮತ್ತು ಇ ನಂತಹ ಆಂಟಿ ಆಕ್ಸಿಡೆಂಟ್ ವಿಟಮಿನ್ ಮೊಟ್ಟೆಯಲ್ಲಿವೆ. ಈ ವಿಟಮಿನ್‌ಗಳು ಕಣ್ಣಿನ ದೃಷ್ಟಿಗೆ ಸಹಾಯ ಮಾಡುತ್ತದೆ. ಹೀಗಾಗಿ ನಿತ್ಯ ಮೊಟ್ಟೆ ಸೇವಿಸುವುದು ಎಲ್ಲ ರೀತಿಯಿಂದ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ.
ಇದನ್ನೂ ಓದಿ: Prevent pimples.. ಮುಖದ ಮೊಡವೆಗಳ ತಡೆಗಟ್ಟಲು ಇಲ್ಲಿವೆ 10 ಸಲಹೆ