ನ್ಯೂಯಾರ್ಕ್: ಪೀಕ್ ಸಮಯದಲ್ಲಿನ ಟ್ರಾಫಿಕ್ ಜಾಮ್ನಲ್ಲಿ ಫಿಲ್ಟರ್ ಮಾಡಿರದ ಗಾಳಿಯನ್ನು ಉಸಿರಾಡುವುದರಿಂದ 24 ಗಂಟೆಗಳ ಬಳಿಕ ರಕ್ತದೊತ್ತಡ ಏರಿಕೆ ಕಾಣುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ. ದೆಹಲಿ, ಗುರುಗ್ರಾಮ್, ಗಾಜಿಯಾಬಾದ್ ಸೇರಿದಂತೆ ಹಲವೆಡೆ ಕಳೆದೊಂದು ತಿಂಗಳಿನಿಂದ ಕೆಟ್ಟ ಗಾಳಿ ಬೀಸುತ್ತಿದ್ದು, ಇದು ಪ್ರಯಾಣಿಕರು ಹಾಗು ಸವಾರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವರದಿ ಎಚ್ಚರಿಸಿದೆ.
ರಸ್ತೆ ಧೂಳು, ಕಿತ್ತು ಬಂದಿರುವ ಪೈಪ್ ಮತ್ತು ಟೈರ್ಗಳು ಮಿಶ್ರಣಗೊಂಡು ಕೆಟ್ಟ ಗಾಳಿ ವಾತಾವರಣದಲ್ಲಿ ಕಂಡುಬರುತ್ತದೆ. ಇದನ್ನು ಉಸಿರಾಡುವುದರಿಂದ ಹೃದಯರೋಗ ಸಮಸ್ಯೆ, ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಸಾವಿನ ಅಪಾಯವೂ ಎದುರಾಗಬಹುದು.
ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನದಲ್ಲಿ, ಟ್ರಾಫಿಕ್ ಸಮಯದಲ್ಲಿ ಸಿಲುಕಿ ವಾಹನದಲ್ಲಿ ಕುಳಿತು ಉಸಿರಾಡುವ ಗಾಳಿಯಲ್ಲಿ 4.5 ಎಂಎಂಎಚ್‌ಜಿಯಷ್ಟು ರಕ್ತದೊತ್ತಡ ಹೆಚ್ಚುತ್ತದೆ. ಕೇವಲ 60 ನಿಮಿಷ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ 24 ಗಂಟೆಗಳೊಳಗೆ ರಕ್ತದೊತ್ತಡದಲ್ಲಿ ಬದಲಾವಣೆ ಕಾಣಬಹುದು.
ರಕ್ತದೊತ್ತಡದಲ್ಲಿ ಸಾಧಾರಣ ಹೆಚ್ಚಳ ಹಾಗು ಹೃದಯರಕ್ತನಾಳದ ಕಾಯಿಲೆಯ ಹೆಚ್ಚಳ ವಾಯುಮಾಲಿನ್ಯದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಅಮೆರಿಕದ ವಾಷಿಂಗ್ಟನ್ ಯುನಿವರ್ಸಿಟಿಯ ಪ್ರೊ.ಜೊಯೆಲ್ ಕುಫ್ಮಾನ್ ತಿಳಿಸಿದ್ದಾರೆ. ಹೃದಯ ಸಮಸ್ಯೆ ಹೆಚ್ಚಳಕ್ಕೆ ವಾಯು ಮಾಲಿನ್ಯದ ಕೊಡುಗೆ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಕಡಿಮೆ ಮಟ್ಟದಲ್ಲಿ ರಸ್ತೆಮಾರ್ಗದ ವಾಯುಮಾಲಿನ್ಯ ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದಿದ್ದಾರೆ.
ವಾಹನಗಳಲ್ಲಿ ಉತ್ತಮ ಗುಣಮಟ್ಟದ ಎಚ್ಇಪಿಎ ಫಿಲ್ಟರ್ ಬಳಕೆ ಮಾಡುವುದರಿಂದ ಶೇ 86ರಷ್ಟು ಮಾಲಿನ್ಯ ಕಣವನ್ನು ತಡೆಯಬಹುದು ಎಂದು ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ. ಆದಾಗ್ಯೂ ಸಂಶೋಧನೆಯಲ್ಲಿ ಅಲ್ಟ್ರಾಫೈನ್ ಕಣಗಳ ಕುರಿತು ಪ್ರಶ್ನೆಗಳು ಮೂಡಿವೆ. ಇದು ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ಹೆಚ್ಚುತ್ತಿರುವ ಕಾಳಜಿಯ ಮೂಲವಾಗಿದೆ.
ಟ್ರಾಫಿಕ್ ಆಧಾರಿತ ವಾಯು ಮಾಲಿನ್ಯವು ಹೆಚ್ಚಿನ ಅಲ್ಟ್ರಾಫೈನ್ ಕಣಗಳನ್ನು ಹೊಂದಿರುತ್ತವೆ. ಇದು ಡಯಾಮೀಟರ್ನಲ್ಲಿನ 100 ನ್ಯಾನೋಮೀಟರ್ಗಿಂತ ಕಡಿಮೆ ಇದ್ದು, ಇದು ಅತಿ ಸೂಕ್ಷ್ಮವಾಗಿ ಕಂಡು ಬರುತ್ತದೆ. ಶೋಧಿಸದ ಗಾಳಿಯು ಹೆಚ್ಚಿನ ಮಟ್ಟದ ಅಲ್ಟ್ರಾಫೈನ್ ಕಣಗಳನ್ನು ಹೊಂದಿರುತ್ತವೆ. ಆದರೂ ಸೂಕ್ಷ್ಮ ಕಣಗಳ ಸಾಂದ್ರತೆಯಿಂದ ಅಳೆಯಲಾದ ಮಾಲಿನ್ಯದ ಒಟ್ಟಾರೆ ಮಟ್ಟವು ತುಲನಾತ್ಮಕವಾಗಿ ಕಡಿಮೆ ಇದ್ದು, ಎಕ್ಯೂಐ36ಕ್ಕೆ ಸಮವಾಗಿರುತ್ತದೆ ಎಂದಿದೆ ಅಧ್ಯಯನ.
ಅಲ್ಟ್ರಾಫೈನ್‌ಗಳು ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗುತ್ತದೆ. ಇದನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದಿದ್ದಾರೆ ಅಧ್ಯಯನದ ಲೇಖಕರು. (ಐಎಎನ್ಎಸ್)
ಇದನ್ನೂ ಓದಿ: ಲಾಹೋರ್ ಜಗತ್ತಿನಲ್ಲೇ ಅತಿ ಹೆಚ್ಚು ಮಲಿನ ನಗರ; ಇನ್ನೂ ಸುಧಾರಿಸದ ದೆಹಲಿ ವಾಯು ಗುಣಮಟ್ಟ