ಕೆಲವೊಮ್ಮೆ ಹವಾಮಾನವನ್ನು ಅಂದಾಜಿಸುವುದು ದೊಡ್ಡ ಸವಾಲೇ ಸರಿ. ಒಂದು ದಿನ ಚಳಿ ಇದ್ದರೆ, ಮತ್ತೊಂದು ದಿನ ಬೇಸಿಗೆಯಂತಹ ಬಿರು ಬಿಸಿಲು ನೆತ್ತಿಯನ್ನು ಸುಡುತ್ತದೆ. ಇಂತಹ ಬದಲಾಗುವ ಹವಾಮಾನ ಕೂದಲಿನ ಮೇಲೆ ಸಾಕಷ್ಟು ಪರಿಣಾಮ ಬೀರುವುದಂತೂ ಸುಳ್ಳಲ್ಲ. ಇದರ ಫಲಿತಾಂಶವಾಗಿ ಕೂದಲು ಒಣ ಹುಲ್ಲಿನಂತೆ ಕಾಂತಿ ಕಳೆದುಕೊಂಡು ಬಿಡುತ್ತದೆ. ಇಂತಹ ಸಮಸ್ಯೆ ನೀವು ಅನುಭವಿಸಿದ್ದರೆ, ಅದಕ್ಕೆ ಪರಿಹಾರವೂ ಇದೆ. ಯಾವುದೇ ಹವಾಮಾನ ಇದ್ದರೂ ಕೂದಲಿಗೆ ನಿಯಮಿತವಾದ ಆರೈಕೆ ಮತ್ತು ಪೋಷಣೆ ನಡೆಸುವ ಮೂಲಕ ಅದರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಮೊಸರು - ಹರಳೆಣ್ಣೆ: ಮೂರು ಟೇಬಲ್ಸ್ಪೂನ್ ಹರಳೆಣ್ಣೆಗೆ ಅರ್ಧ ಚಮಚ ಮೊಸರು ಹಾಕಿ ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ. ಒಂದೂವರೆ ಗಂಟೆಗಳ ಬಳಿಕ ಕಡಿಮೆ ರಾಸಾಯನಿಕ ಹೊಂದಿರುವ ಶಾಂಪೂವಿನಿಂದ ತಲೆ ಸ್ನಾನ ಮಾಡಬೇಕು. ನಿಯಮಿತವಾಗಿ ಈ ರೀತಿ ಮಾಡುವುದರಿಂದ ತಲೆ ಕೂದಲಿನ ಶುಷ್ಕತೆ ಹೋಗಲಾಡಿಸುವ ಜೊತೆಗೆ ತಲೆಹೊಟ್ಟನ್ನು ನಿಯಂತ್ರಿಸಬಹುದು. ಜೊತೆಗೆ ತಲೆ ಕೂದಲಿಗೆ ಅವಶ್ಯವಾದ ಮಾಶ್ಚರೈಸರ್ ದೊರಕಿ ಹೊಳೆಯುತ್ತದೆ.
ಮೊಟ್ಟೆಯ ಬಿಳಿ ಭಾಗ: ಸುಂದರ ನುಣುಪಾದ ಕೂದಲು ಪಡೆಯುವುದು ಪ್ರತಿಯೊಬ್ಬ ಹುಡುಗಿಯರ ಕನಸಾಗಿರುತ್ತದೆ. ಆದರೆ, ಇಂತಹ ವಾತಾವರಣದಿಂದಾಗಿ ಇದು ಅನೇಕ ಬಾರಿ ಸಾಧ್ಯವಾಗದೇ ಹೋಗಬಹುದು. ಈ ಹಿನ್ನೆಲೆ ಇದಕ್ಕೆ ಈ ರೀತಿ ಆರೈಕೆ ಮಾಡಬೇಕಿದೆ. ಎರಡು ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಯ ಬಿಳಿ ಭಾಗ ಹಾಕಿ ಕೂದಲಿಗೆ ಚೆನ್ನಾಗಿ ಹಚ್ಚಿ. ಒಂದೂವರೆ ಗಂಟೆಗಳ ಕಾಲ ಹಾಗೇಯೇ ಬಿಟ್ಟು ಬಳಿಕ ತಲೆಗೆ ಸ್ನಾನ ಮಾಡಿ. ಇದರಿಂದ ಕೂದಲಿಗೆ ಬೇಕಾದ ಅಗತ್ಯ ಪೋಷಕಾಂಶ ಸಿಗುತ್ತದೆ.
ಆಲೋವೆರಾ: ಆಲೋವೆರಾ ಜೆಲ್ ಅನ್ನು ಕೂದಲಿಗೆ ಹಚ್ಚುವುದು ಉತ್ತಮವಾಗಿದೆ. ಬಳಿಕ ಇದನ್ನು ಉಗುರು ಬೆಚ್ಚಿಗಿನ ನೀರಿನಲ್ಲಿ ಶುಚಿಗೊಳಿಸಿದೆ. ಆಲೋವೆರಾದಲ್ಲಿ ಉರಿಯೂತ ಪ್ರತಿರೋಧ ಗುಣವನ್ನು ಹೊಂದಿರುತ್ತದೆ. ಇದು ಯಾವುದೇ ರೀತಿಯ ಸೋಂಕು ಉಂಟು ಮಾಡುವುದನ್ನು ತಪ್ಪಿಸುತ್ತದೆ. ಜೊತೆಗೆ ಕೂದಲ ನುಣುಪನ್ನು ಹೆಚ್ಚಿಸುತ್ತದೆ.
ನಿಂಬೆ: ಮೊಟ್ಟೆಯ ಬಿಳಿ ಭಾಗಕ್ಕೆ ಒಂದು ಸ್ಪೂನ್ ಹರಳೆಣ್ಣೆ, ಅರ್ಧ ಸ್ಪೂನ್ ನಿಂಬೆ ರಸ ಮತ್ತು ಒಂದು ಸ್ಪೂನ್ ಗ್ಲಿಸರಿನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲ ಬುಡಕ್ಕೆ ಹಚ್ಚಿ. ಒಂದು ಗಂಟೆ ಬಳಿಕ ಅದನ್ನು ಚೆನ್ನಾಗಿ ರಾಸಾಯನಿಕ ಮುಕ್ತ ಶಾಂಪೂವಿನಿಂದ ಶುಚಿಗೊಳಿಸಿ.
ಸೂಚನೆ:( ಇವು ಸಾಮಾನ್ಯ ತಿಳಿವಳಿಕೆ ಮೇಲೆ ನೀಡಿದ ಸಲಹೆಗಳಾಗಿದ್ದು, ಹೆಚ್ಚಿನ ಮಾಹಿತಿಗೆ ತಜ್ಞರನ್ನು ಭೇಟಿ ಮಾಡಿ)
ಇದನ್ನೂ ಓದಿ: ಉದ್ದದ ಬಲಶಾಲಿ ಕೂದಲು ನಿಮ್ಮದಾಗಬೇಕೇ? ಈ ನೈಸರ್ಗಿಕ ಪದಾರ್ಥಗಳಿಂದ ಆರೈಕೆ ಮಾಡಿ ಸಾಕು!