ಹೈದರಾಬಾದ್: ಕಾಂಟ್ಯಾಕ್ಟ್ ಲೆನ್ಸ್‌ಗಳು ಕೋವಿಡ್-19 ಪ್ರಸರಣ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪುರಾವೆಗಳು ಇಲ್ಲವಾದರೂ, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ನ್ಯೂಜೆರ್ಸಿಯ ರಟ್ಜರ್ಸ್ ಮೆಡಿಕಲ್ ಸ್ಕೂಲ್‌ನ ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡೇವಿಡ್ ಚೂ, ಕಾಂಟ್ಯಾಕ್ಟ್ ಲೆನ್ಸ್ ಮೂಲಕ ಸೋಂಕು ಹರಡುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವವರು ಪರೋಕ್ಷವಾಗಿ ಅಪಾಯ ಎದುರಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.
ಲೆನ್ಸ್‌ಗಳು ಆಗಾಗ ಕಣ್ಣುಗಳಿಗೆ ಕಿರಿಕಿರಿಯನ್ನುಂಟುಮಾಡುತ್ತವೆ. ಹಾಗಾಗಿ ಹೆಚ್ಚಿನವರು ಕಣ್ಣುಗಳನ್ನು ಸ್ಪರ್ಶಿಸುವ ಮತ್ತು ಉಜ್ಜುವ ಅಭ್ಯಾಸ ಹೊಂದಿರುತ್ತಾರೆ. ಇದು ಅಪಾಯಕಾರಿಯಾಗಿದೆ. ಸೋಂಕಿತ ವ್ಯಕ್ತಿಯವೈರಸನ್ನು ಕೈಯಿಂದ ಮುಟ್ಟಿ, ಅದೇ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸಿದರೆ ರೋಗ ಹರಡುವ ಅಪಾಯವಿದೆ. ಆದ್ದರಿಂದ ಲೆನ್ಸ್ ತೆಗೆಯುವಾಗ, ಹಾಕುವಾಗ ಮತ್ತು ಕಣ್ಣುಗಳನ್ನು ಮುಟ್ಟುವಾಗ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು.
ಲೆನ್ಸ್ ಬಳಕೆದಾರರು ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಅಥವಾ ಹ್ಯಾಂಡ್ ವಾಶ್ ಮೂಲಕ ಕೈಗಳನ್ನು ಸರಿಯಾಗಿ ತೊಳೆದು, ಕೈಗಳು ಒಣಗಿಸಿದ ನಂತರವೇ, ಲೆನ್ಸ್‌ಗಳನ್ನು ಮುಟ್ಟಬೇಕು ಎಂದು ನೇತ್ರ ತಜ್ಞರು ಹೇಳುತ್ತಾರೆ.
ಲೆನ್ಸ್ನ ಮರು ಬಳಕೆಯಲ್ಲಿ ಸ್ವಚ್ಛತೆ ಅತೀ ಮುಖ್ಯ. ಅವುಗಳನ್ನು ಸೋಂಕು ಮುಕ್ತ ಪ್ರದೇಶದಲ್ಲಿ ಸುರಕ್ಷಿತವಾಗಿಡಬೇಕು.