ಯಾದಗಿರಿ: ಕೊರೊನಾ ಶಂಕಿತ ಬಾಲಕಿಯೊಬ್ಬಳು ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಆ ಬಾಲಕಿಯ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕಲಬುರಗಿ ಲ್ಯಾಬ್ ಗೆ ಕಳಿಸಲಾಗಿತ್ತು. ಇದೀಗ ಮೃತ ಬಾಲಕಿಯ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ.
ಏಪ್ರಿಲ್ 7 ರಂದು ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ 4 ವರ್ಷದ ಬಾಲಕಿ ತೀವ್ರ ಜ್ವರ, ನೆಗಡಿ, ಕೆಮ್ಮು ಮತ್ತು ಗಂಟಲು ನೋವಿನಿಂದ ಮೃತಪಟ್ಟಿದ್ದಳು. ಮೃತ ಬಾಲಕಿಯ ವರದಿ ನೆಗೆಟಿವ್ ಬಂದಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎಸ್ ಪಾಟೀಲ್ ಖಚಿತ ಪಡಿಸಿದ್ದಾರೆ.
ಜೊತೆಗೆ ಬೆಂಗಳೂರಿನಲ್ಲಿ ಕೊರೊನಾ ಶಂಕಿತ ಮಹಿಳೆ ಜೊತೆ ಸಂಪರ್ಕ ಹೊಂದಿದ ಜಿಲ್ಲೆಯ ಗೋಪಾಲಪುರ ಗ್ರಾಮದ 20 ಜನ ಕೂಲಿ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ವಾಪಸ್ ಆಗಿದ್ದು, ಅವರ ವರದಿ ಕೂಡ ನೆಗೆಟಿವ್ ಬಂದಿದೆ. ಸೋಂಕಿತ ಮಹಿಳೆ ಜೊತೆ ಸಂಪರ್ಕ ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಈ 20 ಜನರನ್ನು ಗುರಮಿಠಕಲ್ ತಾಲೂಕಿನ ಅರಕೇರಾ (ಕೆ) ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ನಲ್ಲಿ ಇರಿಸಲಾಗಿತ್ತು.