ಯಾದಗಿರಿ: ಕೊರೊನಾ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಯಾದಗಿರಿ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಪ್ರತಿ ಒಂದು ಮಿಲಿಯನ್ ಜನಸಂಖ್ಯೆಗಳ ಪೈಕಿ 7,297 ಜನರಿಗೆ ಕೋವಿಡ್ ಟೆಸ್ಟ್‌ಗಳನ್ನು ಮಾಡಲಾಗಿದ್ದು, ಇದು ರಾಜ್ಯದಲ್ಲಿಯೇ ಅತೀ ಹೆಚ್ಚು ಟೆಸ್ಟ್‌ಗಳನ್ನು ಕೈಗೊಂಡ ಜಿಲ್ಲೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಮಾಹಿತಿ ತಿಳಿಸಿದ್ದಾರೆ.
ಜ್ವರದ ಲಕ್ಷಣ ಹಾಗೂ ತೀವ್ರ ಉಸಿರಾಟದ ಸೋಂಕಿನಂತಹ (ಐಎಲ್‍ಐ, ಸ್ಯಾರಿ) ಲಕ್ಷಣಗಳನ್ನು ಹೊಂದಿರುವ ಸಾರ್ವಜನಿಕರು ಕಡ್ಡಾಯವಾಗಿ ಆರೋಗ್ಯ ತಂಡವನ್ನು ಸಂಪರ್ಕಿಸಿ ಸ್ವಾಬ್ ಪರೀಕ್ಷೆಯನ್ನು ಮಾಡಿಸಿಕೊಳ್ಳತಕ್ಕದ್ದು.
ಎಲ್ಲ ಸಾರ್ವಜನಿಕರು ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು ಎಂದು ಸಾರ್ವಜನಿಕರಲ್ಲಿ ಪ್ರಕಾಶ್ ರಜಪೂತ ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅವರು ಕೋರಿದ್ದಾರೆ.