ಯಾದಗಿರಿ: ಕಲುಷಿತ ನೀರು ಸೇವಿಸಿ 30 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥರನ್ನು ಗ್ರಾಮದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಆರೋಗ್ಯ ಕ್ಯಾಂಪ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವರ್ಕನಳ್ಳಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ವಾಂತಿ ಬೇಧಿ ಪ್ರಕರಣಗಳು ಉಲ್ಬಣಗೊಂಡಿವೆ. ಪಂಚಾಯ್ತಿ ಪೂರೈಸುತ್ತಿದ್ದ ನೀರಿನಲ್ಲಿ ಕಲುಷಿತ ಅಂಶಗಳು ಸರಬರಾಜಾಗಿದ್ದು, ಈ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಇದೆ.
ಇಲ್ಲಿವರೆಗೆ 55 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 30 ಕ್ಕೂ ಹೆಚ್ಚು ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಎಚ್ಚೆತ್ತುಕೊಂಡ ಪಂಚಾಯತ್ ಅಧಿಕಾರಿಗಳು ಈಗ ಶುದ್ಧ ಕುಡಿಯುವ ನೀರು ಪೂರೈಸಲು ಮುಂದಾಗಿದ್ದು, ಗ್ರಾಮದಲ್ಲಿ ಆರೋಗ್ಯಾಧಿಕಾರಿಗಳು ಠಿಕಾಣಿ ಹೂಡಿ ಜಾಗೃತಿ ಮೂಡಿಸುತ್ತಿದ್ದಾರೆ.