ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಮಹಾಸ್ಫೋಟಗೊಂಡಿದ್ದು, ಇಂದು ಒಂದೇ ದಿನ ಯಾದಗಿರಿಯಲ್ಲಿ 72 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ.
ಹಸಿರು ವಲಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ 15 ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು. ನಿನ್ನೆಯವರೆಗೆ 15 ಪ್ರಕರಣಗಳಿದ್ದ ಜಿಲ್ಲೆಯಲ್ಲಿಂದು ಒಂದೇ ದಿನ 72 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಇತ್ತೀಚಿಗೆ ಮಹರಾಷ್ಟ್ರದಿಂದ ವಾಪಸ್ ಆದ ವಲಸೆ ಕಾರ್ಮಿಕರನ್ನ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿತ್ತು. ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 72 ಕಾರ್ಮಿಕರಿಗೆ ಇಂದು ಡೆಡ್ಲಿ ಕೊರೊನಾ ವೈರಸ್ ತಗುಲಿದ್ದು, ಜಿಲ್ಲೆಗೆ ಮಹರಾಷ್ಟ್ರದ ನಂಜು ಬಿಡದೇ ಕಾಡುತ್ತಿದೆ. ಈ 72 ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಇವರನ್ನೆಲ್ಲ ನೂತನ ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕುರ್ಮಾ ರಾವ್ ಮಾಹಿತಿ ನೀಡಿದ್ದಾರೆ.
ಶನಿವಾರವಾದ ಇಂದು ಯಾದಗಿರಿ ಜಿಲ್ಲೆಗೆ ಶನಿಯ ವಕ್ರದೃಷ್ಟಿ ತಗಲಿದ್ದು, ಹಸಿರು ವಲಯವಾಗಿದ್ದ ಯಾದಗಿರಿ ಈಗ ಕೆಂಪು ವಲಯದತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ವೈರಸ್ನ ರಣಕೇಕೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜನ ಜೀವಭಯದಿಂದ ಬದುಕುವಂತೆ ಮಾಡಿದೆ. ಇಂದು ಪತ್ತೆಯಾದ 72 ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚುವ ಕೆಲಸವನ್ನು ಜಿಲ್ಲಾಡಳಿತ ನಡೆಸಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ.