ಮುದ್ದೇಬಿಹಾಳ : ಪಟ್ಟಣದ ವಿದ್ಯಾನಗರದ ಮದರಿ ಬಡಾವಣೆಯಲ್ಲಿ ಪಾರ್ಕ್ಗೆಂದು ಮೀಸಲಿಟ್ಟಿರುವ ಸ್ಥಳವನ್ನು ಕೆಲವರು ಅತಿಕ್ರಮಣ ಮಾಡಿ, ಅಲ್ಲಿ ಸಿಮೆಂಟ್ ಬ್ಲಾಕ್ ತಯಾರಿಸುವ ಘಟಕವನ್ನು ನಡೆಸುತ್ತಿದ್ದು, ಇದನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನವನ್ನು ನಿರ್ಮಿಸುವಂತೆ ಆಗ್ರಹಿಸಿ ಬಡಾವಣೆಯ ನಿವಾಸಿಗಳು ಸೋಮವಾರ ಪುರಸಭೆಯ ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪಟ್ಟಣದ ಪುರಸಭೆಗೆ ಆಗಮಿಸಿದ್ದ ಬಡಾವಣೆಯ ನಿವಾಸಿಗಳು, ರಿ.ಸ.ನಂ. 88/ಕ ಪ್ಲಾಟ್ ಸಂಖ್ಯೆ 25 ಹಾಗೂ ರಿ.ಸ.ನಂ. 88/ಡ ರಲ್ಲಿ 01 ನೇ ಪ್ಲಾಟ್ನ್ನು ಉದ್ಯಾನವನಕ್ಕಾಗಿ ಹಾಗೂ 88/ ಡ ದಲ್ಲಿಯ 5 ನೇ ಪ್ಲಾಟ್ನ್ನು ಸಾರ್ವಜನಿಕ ಸ್ಥಳಕ್ಕಾಗಿ ಮೀಸಲಿಟ್ಟಿದೆ.

ಆದರೆ ಈ ನಿವೇಶನಗಳಲ್ಲಿ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಇದರಿಂದ ಬಡಾವಣೆಯ ಜನರಿಗೆ ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯದಿಂದ ನಿತ್ಯ ತೊಂದರೆ ಉಂಟಾಗಿದೆ ಎಂದು ಹೇಳಿದರು.

ಘಟಕವನ್ನು ತೆರವುಗೊಳಿಸುವಂತೆ ಮೊದಲು ಬಡಾವಣೆಯ ನಿವಾಸಿಗಳು ಸಿಮೆಂಟ್ ಬ್ಲಾಕ್ ತಯಾರಿಸುವವರಿಗೆ ಹೇಳಿದ್ದಾಗ ಮೂರು ತಿಂಗಳಲ್ಲಿ ತೆರವುಗೊಳಿಸುವುದಾಗಿ ಹೇಳಿದ್ದರು. ಆದರೆ ಒಂದು ವರ್ಷ ಕಳೆದರೂ ಅದನ್ನು ತೆರವುಗೊಳಿಸಿಲ್ಲ, ಕಾರಣ ಅತಿಕ್ರಮಣಕ್ಕೊಳಗಾಗಿರುವ ಸ್ಥಳವನ್ನು ಒಂದು ವಾರದೊಳಗಾಗಿ ತೆರವುಗೊಳಿಸಿ, ಅಲ್ಲಿ ಉದ್ಯಾನವನ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಇನ್ನು ಮನವಿ ಸಲ್ಲಿಕೆ ಸಂದರ್ಭದಲ್ಲಿ ನಿವಾಸಿಗಳಾದ ನಿವೃತ್ತ ಶಿಕ್ಷಕ ಎ.ಬಿ.ಮಲಗೌಡರ, ಮುಪ್ಪಯ್ಯ ಮುಪ್ಪಯ್ಯನಮಠ, ಎಸ್.ಬಿ.ನಾಗೂರ, ಅಡಿವೆಪ್ಪ ಧನ್ನೂರ, ಜಿ.ಎಚ್.ಚವನಬಾವಿ, ಸೇರಿದಂತೆ ಇತರರಿದ್ದರು.