ವಿಜಯಪುರ: ಖದೀಮರ ಕಾಟದಿಂದ ಬೇಸತ್ತ ನಗರದ ನಿವಾಸಿಗಳು ಸರ್ಕಾರಕ್ಕೆ ಸವಾಲು ಹಾಕುವಂತಹ ಕೆಲಸ ಮಾಡಿ ತೋರಿಸಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ಎಗರಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ ಕಳ್ಳ-ಕಾಕರ ಪ್ರಕರಣಗಳಿಂದ ರೋಸಿ ಹೋದ ಇಲ್ಲಿನ ಐಶ್ವರ್ಯ ಬಡವಾಣೆಯ ನಿವಾಸಿಗಳು ಅಂತವರ ಮೇಲೆ ಹದ್ದಿನ ಕಣ್ಣಿಡಲು ತಾವೇ ಮುಂದೆ ನಿಂತು ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ.
![This is the model colony of Vijayapura district](https://etvbharatimages.akamaized.net/etvbharat/prod-images/kn-vjp-05-cc-camera-spl-ka10027_16102020203248_1610f_03615_850.jpg)
ಐಶ್ವರ್ಯ ಬಡವಾಣೆಯ ವಾರ್ಡ್ (ಸಂಖ್ಯೆ 12ರ) ಸದಸ್ಯರೇ ಸೇರಿಕೊಂಡು ಹಣ ಸಂಗ್ರಹಿಸಿ ಸಿಸಿ ಕ್ಯಾಮರಾ ಖರೀದಿಸುವ ಮೂಲಕ ಮಾದರಿಯಾಗಿದ್ದಾರೆ. ನಗರ ಸೇರಿದಂತೆ ಹಲವೆಡೆ ಮನೆಗಳ್ಳತನ, ಸರಗಳ್ಳತನ ಹಾವಳಿ ಹೆಚ್ಚಾಗಿತ್ತು. ಈ ಪ್ರಕರಣಗಳಿಗೆ ಅಂತ್ಯಹಾಡಲು ಈ ಬಡಾವಣೆ ಜನರೇ ಸೇರಿಕೊಂಡು 32 ಸಿಸಿ ಕ್ಯಾಮರಾ ಖರೀದಿಸಿ ಬಡಾವಣೆ ಸುತ್ತಲು ಅಳವಡಿಕೆ ಮಾಡುವ ಮೂಲಕ ಕಳ್ಳರ ನುಸಳುವಿಕೆಯನ್ನು ಇಲ್ಲದಂತೆ ಮಾಡಿದ್ದಾರೆ.
ರಸ್ತೆಗಳ ತಲಾ 200 ಮೀಟರ್ಗೊಂದು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಈ ಏರಿಯಾಗೆ ಯಾರೇ ಎಂಟ್ರಿ ಕೊಟ್ಟರೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಖದೀಮ - ಕಳ್ಳರ ಪತ್ತೆಗೆ ಇದು ಸುಲಭದ ಉಪಾಯ. ಸ್ಥಳೀಯ 99 ನಿವಾಸಿಗಳು 16 ಲಕ್ಷ ರೂ. ಹಣ ಸಂಗ್ರಹಿಸಿ ಕ್ಯಾಮರಾ ಖದೀಸಿದ್ದಾರೆ. ಬಡಾವಣೆಯ ರೂಂ ಒಂದರಲ್ಲಿ ದೃಶ್ಯಾವಳಿಗಳ ಸಂಗ್ರಹಕ್ಕೆ ಕಂಟ್ರೋಲ್ ರೂಂ ಮಾಡಲಾಗಿದೆ. ಕಮೀಟಿ ರಚನೆ ಮಾಡುವ ಮೂಲಕ ಇದರ ನಿರ್ವಹಣೆ ಕೂಡ ನಿವಾಸಿಗಳೇ ಮಾಡುತ್ತಿದ್ದಾರೆ ಎಂದು ಸಿಸಿ ಕ್ಯಾಮರಾ ಕಂಟ್ರೋಲ್ ರೂಂ ಮುಖ್ಯಸ್ಥ ಎಸ್.ಎಸ್. ತೊಗಲಬಾ ಸ್ಥಳೀಯರೇ ಸೇರಿಕೊಂಡು ಮಾಡಿದಂತಹ ಈ ಮಾದರಿ ಕಾರ್ಯವನ್ನು ಹೊಗಳಿದ್ದಾರೆ.
![This is the model colony of Vijayapura district](https://etvbharatimages.akamaized.net/etvbharat/prod-images/kn-vjp-05-cc-camera-spl-ka10027_16102020203240_1610f_03615_383.jpg)
ಕ್ಯಾಮರಾಗಳು ರಸ್ತೆಗಳಿಗೆ ಬರ್ತಿದಂತೆ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಗೊತ್ತಿಲ್ಲದೇ ಕಳ್ಳತನಕ್ಕೆ ಕೈ ಹಾಕಿದ ಖದೀಮರು ಕ್ಯಾಮರಾದಲ್ಲಿ ಲಾಕ್ ಆಗಿ ಪೊಲೀಸರ ಕಡೆಯಿಂದ ಹೆಡೆಮುರಿ ಕಟ್ಟಿಸಿಕೊಂಡಿದ್ದಾರೆ. ಕ್ಯಾಮರಾ ಅಳವಡಿಕೆ ಬಳಿಕ ಬೈಕ್, ನಾಯಿ, ಒಡವೆ ಕಳ್ಳತನ, ಅಪಘಾತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಸೇರಿದಂತೆ ಹಲವು ಪ್ರಕರಣನ್ನ ಈ ಸಿಸಿ ಕ್ಯಾಮರಾ ಸಹಾಯದಿಂದ ಪತ್ತೆಹಚ್ಚಲಾಗುತ್ತಿದೆ ಎನ್ನುತ್ತಾರೆ ಬಡಾವಣೆ ನಿವಾಸಿ ಉಮೇಶ್.
ಜಿಲ್ಲಾಡಳಿತ ಮಾಡುವಂತಹ ಕೆಲಸವನ್ನು ನಗರ ಸಿವಾಸಿಗಳು ಸೇರಿಕೊಂಡು ತಾವೇ ಹಣ ಸಂಗ್ರಹಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದಕ್ಕೆ ಜಿಲ್ಲಾಡಳಿತ ಕೂಡ ಇವರ ಕಾರ್ಯವನ್ನು ಕೊಂಡಾಡಿದೆ.